ಮಂಗಳವಾರ, ಸೆಪ್ಟೆಂಬರ್ 28, 2021
21 °C
ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿನ ಸುಬ್ರಹ್ಮಣ್ಯೇಶ್ವರ, ಶನೈಶ್ವರ, ಶಿರಡಿ ಸಾಯಿಬಾಬಾ ದೇವಾಲಯದ ಅರ್ಚಕರ ವಸತಿ ಗೃಹ ಧ್ವಂಸಕ್ಕೆ ಖಂಡನೆ

ಅರ್ಚಕರ ತೆರವು, ಭಕ್ತರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ನಗರದ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿನ ಸುಬ್ರಹ್ಮಣ್ಯೇಶ್ವರ, ಶನೈಶ್ವರ, ಶಿರಡಿ ಸಾಯಿಬಾಬಾ ದೇವಾಲಯದ ಅರ್ಚಕರ ವಸತಿ ಕಟ್ಟಡವನ್ನು ಕಂದಾಯ ಇಲಾಖೆ ಅಧಿಕಾರಿಗಳು ತೆರವುಗೊಳಿಸಿರುವುದನ್ನು ಖಂಡಿಸಿ ದೇವಾಲಯ ಸಮಿತಿ ಪದಾಧಿಕಾರಿಗಳು ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ನಗರದ ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲಕಾಲ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು ಜಿಲ್ಲಾಡಳಿತದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ದೇವಾಲಯದ ಅರ್ಚಕ ಸದಾನಂದ ಭಟ್‌,‘ಕಳೆದ 30-40 ವರ್ಷಗಳಿಂದ ಟ್ರಸ್ಟ್ ವತಿಯಿಂದ ದೇವಾಲಯದ ಪ್ರಾಂಗಣದಲ್ಲಿ ಉದ್ಯಾನ, ವಸತಿ ಗೃಹ ನಿರ್ಮಿಸಿ, ವಿವಿಧ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಕಳೆದ ಜನವರಿಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಕಾರ್ಯಾಚರಣೆ ನಡೆಸಿ ಕ್ರೀಡಾಂಗಣದ ಬದಿ ದೇವಾಲಯಕ್ಕೆ ಹಾಕಿದ ತಡೆಬೇಲಿ ತೆರವುಗೊಳಿಸಿದ್ದರು’ ಎಂದು ಹೇಳಿದರು.

‘ಗುರುವಾರ ಕಟ್ಟಡ ತೆರವುಗೊಳಿಸಲು ಬಂದಿದ್ದ ಅಧಿಕಾರಿಗಳಿಗೆ ಶನಿವಾರ ಸಂಜೆ ಒಳಗೆ ಕಟ್ಟಡ ಖಾಲಿ ಮಾಡುವುದಾಗಿ ಮುಚ್ಚಳಿಕೆ ಬರೆದುಕೊಡಲಾಗಿತ್ತು. ಆದರೆ, ಅಲ್ಲಿಯವರೆಗೂ ಕಾಯದೇ ಶುಕ್ರವಾರ ರಾತ್ರಿಯೇ ಜೆಸಿಬಿ ಮೂಲಕ ವಸತಿ ಕಟ್ಟಡ ಒಡೆದು ಹಾಕಿದ್ದಾರೆ. ಜಿಲ್ಲಾಧಿಕಾರಿಗಳ ಈ ಧೋರಣೆ ಅತ್ಯಂತ ಖಂಡನೀಯವಾಗಿದ್ದು, ಇದು ಹಿಂದೂ ವಿರೋಧಿ ನೀತಿಯಾಗಿದೆ’ ಎಂದು ಆರೋಪಿಸಿದರು.

‘ಕಟ್ಟಡ ತೆರವುಗೊಳಿಸದಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿದರೂ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಜಿಲ್ಲಾ ಕ್ರೀಡಾಂಗಣಕ್ಕೆ ಸೇರಿದ ಜಾಗ ಎಂದು ಹೇಳಿ ದೇವಾಲಯದ ಅರ್ಚಕರ ವಸತಿ ಗೃಹವನ್ನು ಧ್ವಂಸಗೊಳಿಸಿದ್ದಾರೆ. ಇದರಿಂದ ನಮ್ಮ ಕುಟುಂಬಗಳಿಗೆ ನೆಲೆ ಇಲ್ಲದಂತಾಗಿದ್ದು, ಮನೆ ಮಂದಿ ಭಯಭೀತರಾಗಿದ್ದಾರೆ. ನಮಗೆ ನ್ಯಾಯ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.

ಮುಖಂಡ ಲಕ್ಷ್ಮೀನಾರಾಯಣ ಗುಪ್ತಾ ಮಾತನಾಡಿ, ‘ಕ್ರೀಡಾಂಗಣ ನಿರ್ಮಿಸುವುದಕ್ಕಿಂತಲೂ ಮೊದಲೇ ಆ ಜಾಗದಲ್ಲಿ ದೇವಾಲಯ, ಉದ್ಯಾನ ನಿರ್ಮಾಣ ಮಾಡಲಾಗಿದೆ. ಅವುಗಳನ್ನು ಯಾರೊಬ್ಬರೂ ಸ್ವಂತಕ್ಕೆ ಬಳಸಿಕೊಳ್ಳುತ್ತಿಲ್ಲ. ಒತ್ತುವರಿ ತೆರವುಗೊಳಿಸುವ ನೆಪದಲ್ಲಿ ಅಧಿಕಾರಿಗಳು ಮಾನವೀಯತೆ ಇಲ್ಲದಂತೆ ವರ್ತಿಸಿ, ಅರ್ಚಕರ ಕುಟುಂಬಗಳನ್ನು ಬೀದಿಪಾಲು ಮಾಡಿರುವುದು ಖಂಡನೀಯ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಖಂಡೆ ಪ್ರೇಮಲೀಲಾ ವೆಂಕಟೇಶ್ ಮಾತನಾಡಿ, ‘ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಾಕಷ್ಟು ಕಡೆ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಆದರೆ ಅಧಿಕಾರಿಗಳು ಅತಿಕ್ರಮಣ ತೆರವುಗೊಳಿಸುವುದರಲ್ಲಿ ತಾರತಮ್ಯ ಮಾಡುತ್ತಿದ್ದಾರೆ. ಹಿಂದೂಗಳ ಪವಿತ್ರ ಕ್ಷೇತ್ರವಾಗಿದ್ದ ದೇವಾಲಯದ ಆವರಣದಲ್ಲಿನ ಕಟ್ಟಡ ಒಡೆಯುವ ಮೂಲಕ ಹಿಂದೂಗಳ ಭಾವನೆಗೆ ಘಾಸಿಗೊಳಿಸಿದ್ದಾರೆ’ ಎಂದರು.

ಮುಖಂಡರಾದ ವರದರಾಜು, ಬಾಲಕೃಷ್ಣ, ಮಧುಚಂದ್ರ ಸೇರಿದಂತೆ ಹಿಂದೂಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.