ಬುಧವಾರ, ಸೆಪ್ಟೆಂಬರ್ 22, 2021
24 °C
ಇಂದಿನಿಂದ ಇಂಡೋ ಇಂಟರ್‌ನ್ಯಾಷನಲ್ ಪ್ರೀಮಿಯರ್‌ ಕಬಡ್ಡಿ ಲೀಗ್‌

ಹರಿಯಾಣ ಹೀರೋಸ್‌ – ಪುಣೆ ಪ್ರೈಡ್‌ ಮುಖಾಮುಖಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪುಣೆ: ದೇಶದಲ್ಲಿ ಪ್ರೊ ಕಬಡ್ಡಿ ಲೀಗ್‌ ಈಗಾಗಲೇ ತನ್ನ ಛಾಪು ಮೂಡಿಸಿದೆ. ಇದಕ್ಕೆ ಪರ್ಯಾಯವೆಂಬಂತೆ ಇಂಡೋ ಇಂಟರ್‌ನ್ಯಾಶನಲ್‌ ಲೀಗ್‌ ಪ್ರೀಮಿಯರ್‌ ಕಬಡ್ಡಿ ಲೀಗ್‌ ಮೇ 13ರಂದು ಪುಣೆಯಲ್ಲಿ ಉದ್ಘಾಟನೆಗೊಳ್ಳುತ್ತಿದೆ.

’ಬಂಡಾಯ ಕಬಡ್ಡಿ ಲೀಗ್‌’ ಎನಿಸಿಕೊಂಡಿರುವ ಈ ಲೀಗ್‌ಗೆ ಇಂಡೊ ಇಂಟರ್‌ನ್ಯಾಷನಲ್‌ ನ್ಯೂ ಕಬಡ್ಡಿ ಫೆಡರೇಷನ್‌ ಹಾಗೂ ಡಿ ಸ್ಪೋರ್ಟ್ಸ್ ಆಶ್ರಯದಲ್ಲಿ  ನಡೆಯುತ್ತಿದೆ.

ಮೊದಲ ಪಂದ್ಯದಲ್ಲಿ ಹರಿಯಾಣ ಹೀರೋಸ್‌ ಹಾಗೂ ಪುಣೆ ಪ್ರೈಡ್‌ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯದಲ್ಲಿ  ಭಾರತ ರಾಷ್ಟ್ರೀಯ ತಂಡದಲ್ಲಿ ಆಡಿದ್ದ ಜಿತೇಂದ್ರ ಯಾದವ್‌ ಹಾಗೂ ವಿ.ವಿಮಲ್‌ ರಾಯ್‌ ಸೇರಿದಂತೆ ಪ್ರಮುಖ ಆಟಗಾರರು ಕಣಕ್ಕಿಳಿಯಲಿದ್ದಾರೆ.

‘ಮೊದಲ ಪಂದ್ಯಕ್ಕಾಗಿ ಕಾತರದಿಂದ ಕಾಯುತ್ತಿದ್ದೇನೆ. ನಮ್ಮ ಗೆಲುವಿಗೆ ಇರುವ ಯಾವುದೇ ಅವಕಾಶಗಳನ್ನು ಬಿಟ್ಟುಕೊಡುವುದಿಲ್ಲ’ ಎಂದು ಪುಣೆ ಪ್ರೈಡ್‌ ತಂಡದ ನಾಯಕ ದಲ್ಬೀರ್‌ ಮಲಿಕ್‌ ಹೇಳಿದ್ದಾರೆ.

ಹರಿಯಾಣ ಹೀರೋಸ್‌ ನಾಯಕ ಅಮಿತ್‌ ಕುಮಾರ್‌ ಮಾತನಾಡಿ, ‘ನಮ್ಮ  ದೇಶದಲ್ಲಿ ಹಲವು ಪ್ರತಿಭಾನ್ವಿತ ಆಟಗಾರರಿದ್ದಾರೆ. ಈ ಲೀಗ್‌ ಅವರಿಗೆ ಉತ್ತಮ ವೇದಿಕೆಯನ್ನು ಒದಗಿಸಲಿದೆ’ ಎಂದಿದ್ದಾರೆ.

 ಒಟ್ಟು ಎಂಟು ತಂಡಗಳು ಚೊಚ್ಚಲ ಲೀಗ್‌ನಲ್ಲಿ ಕಾಣಿಸಿಕೊಳ್ಳುತ್ತಿವೆ. ದಿಲರ್‌ ದಿಲ್ಲಿ, ತೆಲುಗು ಬುಲ್ಸ್‌, ತೆಲುಗು ಬುಲ್ಸ್‌, ಮುಂಬೈ ಚೆ ರಾಜೇ, ಪುಣೆ ಪ್ರೈಡ್‌, ಬೆಂಗಳೂರು ರೈನೋಸ್‌, ಹರಿಯಾಣ ಹೀರೋಸ್‌, ಪಾಂಡಿಚೇರಿ ಪ್ರಿಡಿಯೇಟರ್ಸ್‌ ಹಾಗೂ ಚೆನ್ನೈ ಚಾಲೆಂಜರ್ಸ್‌ ತಂಡಗಳು ಪ್ರಶಸ್ತಿಗಾಗಿ ಸೆಣಸುತ್ತಿವೆ. ಭಾರತದ ಒಟ್ಟು 823 ಆಟಗಾರರು ನ್ಯೂ ಕಬಡ್ಡಿ ಫೆಡರೇಷನ್‌ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. 271 ರಾಜ್ಯಮಟ್ಟದ ಆಟಗಾರರು, 137 ರಾಷ್ಟ್ರೀಯ ಹಾಗೂ 84 ಅಂತರರಾಷ್ಟ್ರೀಯ ಮಟ್ಟದ ಆಟಗಾರರು ಅದರಲ್ಲಿ ಸೇರಿದ್ದಾರೆ ಎಂದು ಫೆಡರೇಷನ್‌ ಮೂಲಗಳು ತಿಳಿಸಿವೆ.

ಅರ್ಜೆಂಟೀನಾ, ನ್ಯೂಜಿಲೆಂಡ್‌, ಪೋಲೆಂಡ್‌, ತಾಂಜಾನಿಯಾ, ಆಸ್ಟ್ರೇಲಿಯಾ, ನಾರ್ವೆ, ಇಂಗ್ಲೆಂಡ್‌, ಕೆನಡಾ, ಅಮೆರಿಕಾ ಸೇರಿದಂತೆ ಹಲವು ದೇಶಗಳಿಂದ ಆಟಗಾರರು ಲೀಗ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ‌. ಪ್ರತೀ ಫ್ರಾಂಚೈಸ್‌ ನಲ್ಲಿ ಎರಡರಿಂದ ಮೂವರು ವಿದೇಶಿ ಆಟಗಾರರು ಇದ್ದಾರೆ.

ಡಬಲ್‌ ರೌಂಡ್‌ ರಾಬಿನ್‌ ಲೀಗ್‌ ಮಾದರಿಯಲ್ಲಿ ಟೂರ್ನಿ ನಡೆಯಲಿದೆ. ಒಟ್ಟು 62 ಪಂದ್ಯಗಳು ನಡೆಯಲಿದ್ದು 144 ಭಾರತೀಯ ಹಾಗೂ 16 ವಿದೇಶಿ ಆಟಗಾರರು ಮೊದಲ ಲೀಗ್‌ನಲ್ಲಿ ಆಡಲಿದ್ದಾರೆ. ಮಂಡ್ಯದ ಮೂವರು ಸೇರಿದಂತೆ ಕರ್ನಾಟಕದ 13 ಮಂದಿ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಮೇ 23ರವರೆಗೆ ಮೊದಲ ಲೆಗ್‌ನ ಪಂದ್ಯಗಳು ಪುಣೆಯಲ್ಲಿ ನಡೆಯಲಿವೆ. ಎರಡನೇ ಲೆಗ್‌ ಪಂದ್ಯಗಳು ಮೈಸೂರಿನಲ್ಲಿ ಮೇ 24ರಿಂದ 29ರವರೆಗೆ ನಡೆಯಲಿವೆ. ಜೂನ್‌ ಒಂದರಿಂದ ನಾಲ್ಕರವರೆಗೆ ಸೆಮಿಫೈನಲ್‌, ಫೈನಲ್‌ ಪಂದ್ಯಗಳು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜನೆಯಾಗಿವೆ. 

ತಂಡಗಳು

ಪುಣೆ ಪ್ರೈಡ್‌: ದಲ್ಬೀರ್‌ ಮಲಿಕ್‌(ನಾಯಕ) ಜಿತೇಂದ್ರ ಜಾಧವ್‌, ವಿ.ವಿಮಲ್‌ ರಾಜ್‌, ಸಚಿನ್‌ ಪೂವಯ್ಯ, ಜಿ.ವಿಷ್ಣುಕುಮಾರ್‌,  ಸಚಿನ್‌ ಕುಮಾರ್‌, ಅಮೀರ್‌, ಎಸ್‌.ವೆಂಕಟೇಶ್‌, ಪಿ.ವಸಂತ್‌, ಆಕಾಶ್‌ ಪವಾರ್‌, ಜಿ.ಪವನ್‌ ಕುಮಾರ್‌, ಲವ ಕುಮಾರ್‌, ಸಚಿನ್‌, ಶೇಕ್‌ ಅಬ್ದುಲ್ಲಾ ಶೇಕ್‌ ಗುಲಾಬ್‌, ಸೋನಿ, ವೆಂಕಟೇಶ್‌, ಅಜಯ್‌ ಕುಮಾರ್‌, ಜಸ್‌ಕಿರತ್‌ ಸಿಂಗ್‌.

ಹರಿಯಾಣ ಹೀರೋಸ್‌: ಸತ್ನಾಮ್‌ ಸಿಂಗ್‌, ಸಾಗರ್‌ ಸಿಂಗ್‌, ಸೆಲ್ವ ಮುತ್ತು, ಕೌಶಿಕ್‌ ಎಚ್‌, ಮಂದೀಪ್‌, ಅಮಿತ್‌ ಕುಮಾರ್‌, ಭುವೇಂದ್ರ ಕುಮಾರ್‌ ಅತ್ರಿ, ಮೋನು, ಅಕ್ಷಯ್‌ ಜಯವಂತ್‌ ಬೋಡ್ಕೆ, ರಾಮ್‌ ದಯಾಳ್‌, ಸತೀಶ್‌ ಕುಮಾರ್‌, ರಮೇಶ್‌ ಕುಮಾರ್‌, ಹರಿಂದರ್‌, ಅತುಲ್‌ ರಾವತ್‌, ಲಕ್ಷ್ಮೀಶ್‌ ಎಮ್‌.ಭಟ್‌, ದೀಪ್ತೇಶ್‌ ಚಂಡಿವಾಡೆ, ನವೀನ್‌ ಮಲಿಕ್‌, ಗಗನ್‌ಕುಮಾರ್‌, ಸುಮಿತ್‌ ದಹಿಯಾ.

ಪಂದ್ಯದ ಸಮಯ: ಸಂಜೆ 7 ಗಂಟೆ

ಸ್ಥಳ: ಬಲೆವಾಡಿ ಕ್ರೀಡಾಂಗಣ ಪುಣೆ

ನೇರಪ್ರಸಾರ: ಡಿ ಸ್ಪೋರ್ಟ್ಸ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು