ಶನಿವಾರ, ಸೆಪ್ಟೆಂಬರ್ 25, 2021
22 °C
ಬಿಜೆಪಿ ವಿರೋಧಿ ಪಕ್ಷಗಳ ಒಗ್ಗಟ್ಟಿನಲ್ಲಿ ಫಲಿತಾಂಶಕ್ಕೆ ಮೊದಲೇ ಬಿರುಕು?

ವಿಪಕ್ಷ ಸಭೆಗೆ ಮಮತಾ, ಮಾಯಾ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಬಿಜೆಪಿ ವಿರೋಧಿ ಪಕ್ಷಗಳ ಒಗ್ಗಟ್ಟಿನಲ್ಲಿ ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಮೊದಲೇ ಬಿರುಕು ಮೂಡುವ ಲಕ್ಷಣಗಳು ಗೋಚರಿಸಿವೆ. ಏಳನೇ ಹಂತದ ಮತದಾನದ ಬಳಿಕ ಕಾಂಗ್ರೆಸ್‌ ನೇತೃತ್ವದಲ್ಲಿ ನಡೆಸಲು ಉದ್ದೇಶಿಸಲಾಗಿರುವ ವಿರೋಧ ಪಕ್ಷಗಳ ಸಭೆಯಲ್ಲಿ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಭಾಗವಹಿಸುವ ಸಾಧ್ಯತೆ ಇಲ್ಲ ಎನ್ನಲಾಗಿದೆ.

ಇದೇ 21ರಂದು ಈ ಸಭೆ ನಡೆಸಲು ನಿರ್ಧರಿಸಲಾಗಿದೆ. ಎನ್‌ಡಿಎಯೇತರ ಪಕ್ಷಗಳ ಬಲ ಪ್ರದರ್ಶನ ಮತ್ತು ತಮ್ಮನ್ನು ಫಲಿತಾಂಶದ ಬಳಿಕ ಒಂದು ಗುಂಪಾಗಿ ಪರಿಗಣಿಸಬೇಕು ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರಿಗೆ ಸಂದೇಶ ನೀಡುವುದು ಇದರ ಉದ್ದೇಶ ಎನ್ನಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ವಿರೋಧಿ ಮೈತ್ರಿಕೂಟದ ಪ್ರಮುಖರಾಗಿರುವ ಮಮತಾ ಅವರು ಮೇ 23ರಂದು ಫಲಿತಾಂಶ ಪ್ರಕಟವಾಗುವವರೆಗೆ ತಮ್ಮ ನಿಲುವು ಏನು ಎಂಬುದನ್ನು ಬಹಿರಂಗಪಡಿಸುವ ಸಾಧ್ಯತೆ ಇಲ್ಲ ಎಂದು ಕಾಂಗ್ರೆಸ್‌ನ ಮುಖಂಡರೊಬ್ಬರು ಹೇಳಿದ್ದಾರೆ.

ಸಮಾಜವಾದಿ ಪಕ್ಷದ ಜತೆಗೆ ಸೇರಿ ಚುನಾವಣೆ ಎದುರಿಸಿರುವ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರೂ ಈ ಸಭೆಯಿಂದ ದೂರ ಉಳಿಯುವ ಸಾಧ್ಯತೆ ನಿಚ್ಚಳವಾಗಿದೆ. ಸರ್ಕಾರ ರಚನೆ ಸಂದರ್ಭದಲ್ಲಿ ಭಾರಿ ಚೌಕಾಶಿ ನಡೆಸುವುದೇ ಈ ಇಬ್ಬರು ಮುಖಂಡರು ಸಭೆಯಿಂದ ದೂರ ಉಳಿಯಲು ಇರುವ ಕಾರಣ ಎನ್ನಲಾಗಿದೆ.  ಉಪಚುನಾವಣೆ ಮೂಲಕ ಲೋಕಸಭೆಗೆ ಪ್ರವೇಶಿಸುವುದಾಗಿ ಮಾಯಾವತಿ ಅವರು ಈಗಾಗಲೇ ಹೇಳಿದ್ದಾರೆ. ಈ ಮೂಲಕ, ತಾವು ಪ್ರಧಾನಿ ಹುದ್ದೆಯ ಅಭ್ಯರ್ಥಿ ಎಂಬ ಸಂದೇಶವನ್ನು ಅವರು ನೀಡಿದ್ದಾರೆ. ತಾವು ಪ್ರಧಾನಿ ಅಭ್ಯರ್ಥಿ ಎಂದು ಮಮತಾ ಅವರು ಈವರೆಗೆ ಹೇಳಿಕೊಂಡಿಲ್ಲ. ಆದರೆ, ಮಮತಾ ಅವರೂ ಪ್ರಧಾನಿ ಸ್ಥಾನದ ಅಭ್ಯರ್ಥಿ ಎಂದು ಅವರ ಪಕ್ಷದ ಹಲವು ಮುಖಂಡರು ಹೇಳಿದ್ದಾರೆ. 

ಬಿಜೆಪಿ ನೇತೃತ್ವದ ಎನ್‌ಡಿಎಗೆ ಸರಳ ಬಹುಮತ ದೊರೆಯದು ಎಂದು ವಿರೋಧ ಪಕ್ಷಗಳು ಅಂದಾಜಿಸಿವೆ. ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಬಹುದು. ಹಾಗಿದ್ದರೂ ಹೆಚ್ಚು ಸ್ಥಾನಗಳನ್ನು ಗಳಿಸುವ ಎನ್‌ಡಿಎಯೇತರ ಗುಂಪನ್ನೇ ಸರ್ಕಾರ ರಚಿಸಲು ರಾಷ್ಟ್ರಪತಿ ಆಹ್ವಾನಿಸಬೇಕು ಎಂಬುದು ಈ ಪಕ್ಷಗಳ ಮುಖಂಡರ ಆಸೆಯಾಗಿದೆ. 

ಅತಿ ದೊಡ್ಡ ಪಕ್ಷವನ್ನು ಸರ್ಕಾರ ರಚಿಸಲು ಆಹ್ವಾನಿಸುವುದು ಕ್ರಮ. ಹಾಗಿದ್ದರೂ ತಮ್ಮ ಗುಂಪಿಗೆ 272 ಸಂಸದರ ಬೆಂಬಲ ಇದ್ದರೆ ತಮ್ಮನ್ನೇ ಸರ್ಕಾರ ರಚಿಸಲು ಆಹ್ವಾನಿಸಬೇಕು ಎಂಬ ಬೇಡಿಕೆಯನ್ನು ಈ ಗುಂಪು ಹೊಂದಿದೆ.

‘ಸಂಖ್ಯಾ ಬಲ ಇದೆ ಎಂಬುದನ್ನು ತೋರಿಸುವುದು ನಮ್ಮ ಉದ್ದೇಶ. ಸಹಿ ಮಾಡಿರುವ ಪತ್ರದ ಜತೆಗೆ ಹೊಸದಾಗಿ ಆಯ್ಕೆಯಾದ ಸಂಸದರನ್ನು ರಾಷ್ಟ್ರಪತಿ ಮುಂದೆ ಹಾಜರುಪಡಿಸುತ್ತೇವೆ’ ಎಂದು ಮುಖಂಡರೊಬ್ಬರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು