ಭಾನುವಾರ, ಸೆಪ್ಟೆಂಬರ್ 26, 2021
28 °C

ಭ್ರಷ್ಟ ರಾಜನಿಂದ ದೇಶಕ್ಕೆ ಅಪಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಹಳ ಹಿಂದೆ ಭರು ರಾಜ್ಯದಲ್ಲಿ ಭರುರಾಜ ಆಡಳಿತ ನಡೆಸುತ್ತಿದ್ದ. ಆಗ ಬೋಧಿಸತ್ವ ಹಿಮಾಲಯದಲ್ಲಿ ತಪಸ್ಸು ಮಾಡುತ್ತಿದ್ದ. ಅವನಿಗೆ ಐದು ಅಭಿಜ್ಞಾ ಹಾಗೂ ಎಂಟು ಸಮಾಪತ್ತಿಗಳು ಪ್ರಾಪ್ತವಾಗಿದ್ದವು. ಈ ತಪಸ್ವಿಗೆ ಐದುನೂರು ಜನ ತಪಸ್ವಿಗಳು ಶಿಷ್ಯರಾಗಿದ್ದರು. ಒಂದು ಬಾರಿ ಉಪ್ಪು, ಹುಳಿ ತಿನ್ನುವ ಅಪೇಕ್ಷೆಯಿಂದ ತನ್ನ ಶಿಷ್ಯರೆಲ್ಲರನ್ನೂ ಕರೆದುಕೊಂಡು ಬೋಧಿಸತ್ವ ಹಿಮಾಲಯದಿಂದ ಕೆಳಗಿಳಿದು ಭರು ನಗರಕ್ಕೆ ಬಂದ. ಊರಲ್ಲೆಲ್ಲ ಭಿಕ್ಷೆ ಬೇಡಿ ನಗರದ ಉತ್ತರದ ತುದಿಯಲ್ಲಿದ್ದ ಒಂದು ದೊಡ್ಡವೃಕ್ಷದ ಕೆಳಗೆ ಕುಳಿತು ಊಟ ಮಾಡಿದರು. ಅನೇಕ ದೊಡ್ಡ ದೊಡ್ಡ ಕೊಂಬೆಗಳಿಂದ ಕೂಡಿದ ವೃಕ್ಷ ತುಂಬ ವಿಶಾಲವಾದ್ದರಿಂದ ಅದರ ಕೆಳಗೆಯೇ ಅವರು ವಾಸ ಮಾಡತೊಡಗಿದರು.

ಕೆಲವು ದಿನಗಳ ನಂತರ ಮತ್ತೊಬ್ಬ ಹಿಮಾಲಯದ ತಪಸ್ವಿ ತನ್ನ ಐದುನೂರು ತಪಸ್ವಿ ಶಿಷ್ಯರನ್ನು ಕರೆದುಕೊಂಡು ಇದೇ ನಗರಕ್ಕೆ ಬಂದ. ನಗರದಲ್ಲೆಲ್ಲ ಸುತ್ತಾಡಿ ಭಿಕ್ಷೆ ಬೇಡಿ ನಗರದ ದಕ್ಷಿಣದ ತುದಿಯಲ್ಲಿದ್ದ ಮತ್ತೊಂದು ವಟವೃಕ್ಷದ ಕೆಳಗೆ ಊಟ ಮಾಡಿ ಅಲ್ಲಿಯೇ ನೆಲೆಸಿದರು. ಒಂದೆರಡು ತಿಂಗಳುಗಳ ನಂತರ ಎರಡೂ ಋಷಿಗಳ ಗುಂಪುಗಳು ಮರಳಿ ಹಿಮಾಲಯಕ್ಕೆ ಹೊರಟು ಹೋದವು.

ಮರುವರ್ಷ ದಕ್ಷಿಣದ ತುದಿಯಲ್ಲಿದ್ದು ಹೋದವರು ಮೊದಲು ಬಂದರು. ಆದರೆ ಕಳೆದ ವರ್ಷ ಅವರು ಆಶ್ರಯ ಪಡೆದಿದ್ದ ವೃಕ್ಷ ಸಿಡಿಲಿಗೆ ತುತ್ತಾಗಿ ಸುಟ್ಟುಹೋಗಿತ್ತು. ಆದ್ದರಿಂದ ಅವರು ಉತ್ತರ ತುದಿಯಲ್ಲಿದ್ದ ವಟವೃಕ್ಷದ ಕೆಳಗೆ ತಮ್ಮ ವಸತಿಯನ್ನು ಹೂಡಿದರು. ಎರಡನೆಯ ಗುಂಪಿನವರೂ ಮರಳಿ ಬಂದು ತಾವು ಕಳೆದ ವರ್ಷ ವಾಸಿಸಿದ್ದ ಮರದ ಕೆಳಗೆ ಮತ್ತೊಂದು ಗುಂಪು ಬಂದು ಕುಳಿತದ್ದನ್ನು ಕಂಡು ವ್ಯಥೆ ಪಟ್ಟರು. ‘ಇದು ನಮ್ಮ ಮರ’, ನಾವು ಕಳೆದ ವರ್ಷ ಇದರಡಿಯೇ ಬದುಕಿದ್ದೆವು’ ಎಂದು ಒಂದು ಗುಂಪು ಹೇಳಿದರೆ, ‘ನಾವು ಮೊದಲು ಬಂದು ಆಶ್ರಯಿಸಿದ್ದೇವೆ, ಆದ್ದರಿಂದ ಇದು ನಮ್ಮ ಮರ’ ಎಂದು ಮತ್ತೊಂದು ಗುಂಪು ವಾದಿಸಿತು. ಈ ಪ್ರಸಂಗ ಜಗಳಕ್ಕೇ ಹೋಯಿತು. ಎರಡೂ ಗುಂಪಿನ ಸನ್ಯಾಸಿಗಳು ಮರದ ನೆರಳಿನ ಒಡೆತನಕ್ಕೆ ಹೋರಾಡುತ್ತ ರಾಜ ಭರುವಿನ ಕಡೆಗೆ ಬಂದರು. ಆತ ಕಳೆದ ವರ್ಷ ಆಶ್ರಯ ಪಡೆದಿದ್ದ ಗುಂಪಿನವರೇ ಅದಕ್ಕೆ ಬಾಧ್ಯರು ಎಂದು ಹೇಳಿದ. ಇನ್ನೊಂದು ಗುಂಪಿನವರಿಗೆ ಸೋಲುವುದು ಬೇಕಿರಲಿಲ್ಲ. ಅದಕ್ಕೆ ಅವರು ತಮ್ಮ ತಪಃಶಕ್ತಿಯಿಂದ ರಾಜನಿಗೆ ಒಂದು ಸುವರ್ಣಖಚಿತವಾದ ರಥವನ್ನು ಮಾಡಿ ಲಂಚವಾಗಿ ನೀಡಿದರು. ರಾಜ ಅದನ್ನು ಪಡೆದು ಎರಡೂ ಗುಂಪುಗಳಿಗೂ ಮರದ ಕೆಳಗೆ ಇರುವ ಅರ್ಹತೆ ಇದೆ ಎಂದು ನಿರ್ಣಯ ನೀಡಿದ. ಈ ವಿಷಯ ಇನ್ನೊಂದು ತಂಡಕ್ಕೆ ಗೊತ್ತಾಗಿ ಅವರೂ ತಮ್ಮ ತಪಃಶಕ್ತಿಯಿಂದ ರಥದ ಮೇಲೆ ಒಂದು ರತ್ನಖಚಿತವಾದ ಸಿಂಹಾಸನವನ್ನು ಮಾಡಿಕೊಟ್ಟು ತಮ್ಮನ್ನು ಮರದ ನೆರಳಿನ ಅಧಿಕಾರಿಗಳು ಎಂದು ನಿರ್ಣಯ ಕೊಡುವಂತೆ ಕೇಳಿದರು. ರಾಜ ತನ್ನ ನಿರ್ಣಯವನ್ನು ಮತ್ತೆ ಬದಲಾಯಿಸಿ ಅವರು ಹೇಳಿದಂತೆ ಮಾಡಿದ.

ಎರಡೂ ಗುಂಪಿನ ಸನ್ಯಾಸಿಗಳುg ಒಂದೆಡೆಗೆ ಕುಳಿತು ತಮ್ಮ ಮೂರ್ಖತನದ ಬಗ್ಗೆ ಪಶ್ಚಾತ್ತಾಪಪಟ್ಟರು. ಎಲ್ಲವನ್ನೂ ಬಿಟ್ಟು ಹಿಮಾಲಯಕ್ಕೆ ಹೋದವರಿಗೆ ಮರದ ನೆರಳಿನ ಹಕ್ಕು ಏಕೆ ಬೇಕಿತ್ತು? ಅವರು ನಾಚಿಕೆಪಟ್ಟು ಹಿಮಾಲಯಕ್ಕೆ ಮರಳಿ ಹೋದರು. ರಾಜನ ಲಂಚದ ಪ್ರವೃತ್ತಿಯನ್ನು ಕಂಡ ದೇವತೆಗಳು ಬಿರುಗಾಳಿಯನ್ನೆಬ್ಬಿಸಿ ಭರು ರಾಜ್ಯವನ್ನು ನಾಶ ಮಾಡಿಬಿಟ್ಟರು. ರಾಜ ಭ್ರಷ್ಟನಾದರೆ ದೇಶವೇ ಹಾಳಾಗುತ್ತದೆ. ಇದು ಎರಡೂವರೆ ಸಾವಿರ ವರ್ಷಗಳ ಹಿಂದಿನ ಕಥೆಯಾದರೂ ಇಂದಿಗೂ ನಮ್ಮ ನಾಯಕರಿಗೆ ಮಾರ್ಗದರ್ಶಿಯಲ್ಲವೆ? 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು