ಚಿಕ್ಕಬಳ್ಳಾಪುರ: ಗೃಹ ರಕ್ಷಕನ ಮೇಲೆ ಹಲ್ಲೆ, ಬಂಧನ

ಚಿಕ್ಕಬಳ್ಳಾಪುರ: ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಜಲ್ಲಿ ತುಂಬಿಕೊಂಡು ಹೊರಟಿದ್ದ ಟಿಪ್ಪರ್ ಅನ್ನು ತಾಲ್ಲೂಕಿನ ಕಣಿವೆನಾರಾಯಣಪುರ ಚೆಕ್ ಪೋಸ್ಟ್ ಬಳಿ ತಡೆದ ಗೃಹ ರಕ್ಷಕ ದಳದ ಸಿಬ್ಬಂದಿಯೊಬ್ಬರನ್ನು ಅವಾಚ್ಯವಾಗಿ ನಿಂದಿಸಿ, ಹಲ್ಲೆ ಮಾಡಿದ ರವಿ ಎಂಬಾತನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ನಂದಿ ಗಿರಿಧಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹನುಮಂತಪುರ ನಿವಾಸಿ, ಗೃಹ ರಕ್ಷಕ ಅನಿಲ್ ಎಂಬುವರು ಮೇ 10 ರಂದು ಕಣಿವೆನಾರಾಯಣಪುರ ಚೆಕ್ ಪೋಸ್ಟ್ ಬಳಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಅನಿಲ್ ಮೇಲೆ ರವಿ ನಡೆಸಿದ ದುಂಡಾವರ್ತನೆಯನ್ನು ಪ್ರತ್ಯಕ್ಷದರ್ಶಿಯೊಬ್ಬರು ಮೊಬೈಲ್ನಲ್ಲಿ ಚಿತ್ರೀಕರಿಸಿದ್ದು, ಆ ದೃಶ್ಯಾವಳಿಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಈ ಕುರಿತು ಪ್ರತಿಕ್ರಿಯಿಸಿದ ಎಸ್ಪಿ ಕೆ.ಸಂತೋಷ್ ಬಾಬು, ‘ಗೃಹರಕ್ಷಕ ದಳದ ಸಿಬ್ಬಂದಿ ಮೇಲೆ ನಡೆದ ಹಲ್ಲೆಯ ಘಟನೆಯ ವಿಡಿಯೊ ನನಗೆ ಸೋಮವಾರ ರಾತ್ರಿ ಲಭ್ಯವಾಗಿದೆ. ಆ ಕೂಡಲೇ ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಆರೋಪಿ ರವಿ ವಿರುದ್ಧ ಐಪಿಸಿ ಸೆಕ್ಷನ್ 353 (ಪೊಲೀಸರ ಕರ್ತವ್ಯಕ್ಕೆ ಅಡ್ಡಿ), 307 (ಕೊಲೆಗೆ ಯತ್ನ) ಮತ್ತು ಅಟ್ರಾಸಿಟಿ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ತಿಳಿಸಿದರು.
‘ಮಂಗಳವಾರ ಬೆಳಿಗ್ಗೆ ಆರೋಪಿಯನ್ನು ಬಂಧಿಸಿ, ವೈದ್ಯಕೀಯ ತಪಾಸಣೆಗೆ ಒಳಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು’ ಎಂದು ಹೇಳಿದರು. ಬಂಧಿತ ರವಿ ನಗರಸಭೆ ಮಾಜಿ ಸದಸ್ಯ, ಶಾಸಕ ಡಾ.ಕೆ.ಸುಧಾಕರ್ ಅವರ ಆಪ್ತ ಗಜೇಂದ್ರ ಅವರ ಸಹೋದರ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.