ಶುಕ್ರವಾರ, ಏಪ್ರಿಲ್ 23, 2021
22 °C

ಟಿಸಿಎಸ್ ವಿಶ್ವ 10ಕೆ ಮಾರ್ಗದಲ್ಲಿ ಬದಲಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಇದೇ ಭಾನುವಾರ (ಮೇ 19) ಇಲ್ಲಿ ನಡೆಯಲಿರುವ ಟಿಸಿಎಸ್‌ ವಿಶ್ವ ಟೆನ್ ಕೆ ಓಟದ ಮಾರ್ಗದಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ.

ಬುಧವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ರೇಸ್‌ನ ನಿರ್ದೇಶಕ ಹ್ಯೂ ಜೋನ್ಸ್‌, ‘ಓಟದ ಒಂದು ಹಂತದಲ್ಲಿ ಕಂಠೀರವ ಕ್ರೀಡಾಂಗಣದ ಒಳಗಡೆ ಕೆಲವು ಸುತ್ತುಗಳನ್ನು ನಿಗದಿಪಡಿಸಲಾಗಿತ್ತು. ಆದರೆ ಅದರ ಪೈಕಿ 200 ಮೀಟರ್ಸ್‌ ದೂರವನ್ನು ಕಡಿಮೆ ಮಾಡಲಾಗಿದೆ. ಅದರಿಂದಾಗಿ ಕಾಮರಾಜ್ ರಸ್ತೆಯ ಟರ್ನಿಂಗ್ ಪಾಯಿಂಟ್ ಅಂತರವನ್ನು ಹೆಚ್ಚು ಮಾಡಲಾಗಿದೆ’ ಎಂದರು.

‘ಒಂದು ದಶಕದಿಂದ ಸ್ಪರ್ಧೆ ನಡೆಯುತ್ತಿದೆ. ಆರಂಭಿಕ ವರ್ಷಗಳಲ್ಲಿ ನಗರದಲ್ಲಿ ಮೆಟ್ರೊ ಕಾಮಗಾರಿಗಳು ನಡೆಯುತ್ತಿದ್ದರಿಂದ ರಸ್ತೆಯಲ್ಲಿ ಮಾರ್ಗ ನಿರ್ಧಾರ ಮಾಡುವುದು ಸವಾಲಾಗಿತ್ತು. ಆದರೆ ಈ ಸಲ ಅಂತಹ ಸಮಸ್ಯೆ ಇಲ್ಲ. ಎಲ್ಲ ರಸ್ತೆಗಳೂ ಉತ್ತಮವಾಗಿವೆ. ವಾತಾವರಣವೂ ಚೆನ್ನಾಗಿದೆ. ಇದರಿಂದಾಗಿ ಅಥ್ಲೀಟ್‌ಗಳು ಈ ಓಟದ ಸಂಫೂರ್ಣ ಲಾಭ ಪಡೆಯುವುದು ಖಚಿತ’ ಎಂದರು.

‘ಸುಮಾರು 24 ಸಾವಿರ ಓಟಗಾರರು ಸ್ಪರ್ಧಿಸಲಿದ್ದಾರೆ. ಎಲೀಟ್ ವಿಭಾಗದ ಸ್ಪರ್ಧೆಯು ಬೆಳಿಗ್ಗೆ 7.10ರಿಂದ 8ರವರೆಗೆ ನಡೆಯಲಿದೆ. ಈ ವಿಭಾಗದಲ್ಲಿ ಯಾವುದೇ ಸಮಯ ಬದಲಾವಣೆ ಇಲ್ಲ. ಈ ಓಟವು ಕಂಠೀರವ ಕ್ರೀಡಾಂಗಣದಿಂದ ಆರಂಭವಾಗಿ ಎಂ.ಜಿ. ರಸ್ತೆ ಮೂಲಕ ಕಸ್ತೂರಬಾ ರಸ್ತೆಗೆ ಬರಲಿದೆ’ ಎಂದು ತಿಳಿಸಿದರು

ಈ ಸಂದರ್ಭದಲ್ಲಿ ಹಾಜರಿದ್ದ ಫೋರ್ಟಿಸ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ವಿವೇಕ್ ಜವಳಿ, ‘ಪ್ರತಿವರ್ಷದಂತೆ ಈ ಬಾರಿಯೂ ಓಟಕ್ಕೆ ಸುಸಜ್ಜಿತವಾದ ವೈದ್ಯಕೀಯ ವ್ಯವಸ್ಥೆ ಮಾಡಲಾಗುತ್ತಿದೆ. ನುರಿತ ವೈದ್ಯಕೀಯ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು