ಸೋಮವಾರ, ಸೆಪ್ಟೆಂಬರ್ 16, 2019
21 °C
ಬಿಸಿಸಿಐ ಹಂಗಾಮಿ ಅಧ್ಯಕ್ಷರ ವಿರುದ್ಧ ಡಯಾನಾ ಎಡುಲ್ಜಿ ಕಿಡಿ

ಪ್ರಶಸ್ತಿ ಪ್ರದಾನ ದಲ್ಲಿ ಶಿಷ್ಟಾಚಾರ ಉಲ್ಲಂಘನೆ

Published:
Updated:
Prajavani

ನವದೆಹಲಿ (ಪಿಟಿಐ): ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್‌ ನಂತರ ವಿಜೇತ ತಂಡಕ್ಕೆ ಟ್ರೋಫಿ ಪ್ರದಾನ ಮಾಡುವ ವಿಷಯದಲ್ಲಿ ಬಿಸಿಸಿಐ ಹಂಗಾಮಿ ಅಧ್ಯಕ್ಷರು ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಎಂದು ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ಕ್ರಿಕೆಟ್ ಆಡಳಿತ ಸಮಿತಿಯ ಸದಸ್ಯೆ ಡಯಾನಾ ಎಡುಲ್ಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೋದ ಭಾನುವಾರ ಹೈದರಾಬಾದ್‌ನಲ್ಲಿ ನಡೆದಿದ್ದ ಫೈನಲ್‌ನಲ್ಲಿ ಗೆದ್ದಿದ್ದ ಮುಂಬೈ ಇಂಡಿಯನ್ಸ್‌ ತಂಡವು ಪ್ರಶಸ್ತಿ ಗೆದ್ದಿತ್ತು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ. ಖನ್ನಾ ಅವರು ವಿಜೇತ ತಂಡಕ್ಕೆ ಟ್ರೋಫಿ ನೀಡಿದ್ದರು. ಈ ಕ್ರಮವನ್ನು ಎಡುಲ್ಜಿ ವಿರೋಧಿಸಿದ್ದಾರೆ.

‌‘ಕೋರ್ಟ್‌ ನಿಯಮದ ಪ್ರಕಾರ ಬಿಸಿಸಿಐನ ಸರಣಿಗಳ ಮತ್ತು ಟೂರ್ನಿಗಳಲ್ಲಿ ಸಿಒಎ ಮುಖ್ಯಸ್ಥರು ಅಥವಾ ಸದಸ್ಯರು ಟ್ರೋಫಿ ಪ್ರದಾನ ಮಾಡಬೇಕು. ಈ ಹಿಂದೆ ದೆಹಲಿಯಲ್ಲಿ ನಡೆದಿದ್ದ ಭಾರತ ಮತ್ತು ಆಸ್ಟ್ರೇಲಿಯಾ ಏಕದಿನ ಕ್ರಿಕೆಟ್ ಸರಣಿ ಸಂದರ್ಭದಲ್ಲಿಯೂ ಖನ್ನಾ ಅವರು ಶಿಷ್ಟಾಚಾರ ಉಲ್ಲಂಘಿಸಿದ್ದರು. ಆ ಕುರಿತು ಹೋದ ಏಪ್ರಿಲ್‌ 8ರಂದು ನಡೆದಿದ್ದ ಸಿಒಎ ಸಭೆಯಲ್ಲಿ ನಾನು ಮಾತನಾಡಿದ್ದೆ. ಆದರೂ ಮತ್ತೊಮ್ಮೆ ಅವರು ಅಗೌರವ ತೋರಿದ್ದಾರೆ’ ಎಂದು ಎಡುಲ್ಜಿ ಹೇಳಿದರು.

‘ಈ ಬಾರಿಯ ಐಪಿಎಲ್ ಟ್ರೋಫಿಯನ್ನು ಸಿಒಎ ಮುಖ್ಯಸ್ಥ ವಿನೋದ್ ರಾಯ್ ಅವರು ನೀಡಬೇಕೆಂದು ಸಲಹೆ ಕೊಟ್ಟಿದ್ದೆ. ಆದರೆ, ಪ್ರಶಸ್ತಿ ಪ್ರದಾನದ ದಿನದಂಧು ತಾವು ಇರುವುದಿಲ್ಲವೆಂದು ರಾಯ್ ತಿಳಿಸಿದ್ದರು. ಆದ್ದರಿಂದ ನಮ್ಮ ಇನ್ನೊಬ್ಬ ಸದಸ್ಯರಾದ ಲೆಫ್ಟಿನೆಂಟ್ ಜನರ್ ತೋಡ್ಗೆ ಅಥವಾ ನಾನು ಟ್ರೋಫಿ ನೀಡುವುದು ಎಂದು ನಿರ್ಧಾರವಾಗಿತ್ತು’ ಎಂದು ಸ್ಪಷ್ಟಪಡಿಸಿದರು.

‘ಈ ಹಿಂದೆ ನಡೆದಿದ್ದ ಆಸ್ಟ್ರೇಲಿಯಾ ಎದುರಿನ ಸರಣಿಯ ಮುಕ್ತಾಯದ ಸಂದರ್ಭದಲ್ಲಿ ಇನ್ನೊಂದು ಎಡವಟ್ಟಾಗಿತ್ತು. ಅಲ್ಲಿ ಖನ್ನಾ ತಾವು ಪ್ರಶಸ್ತಿ ನೀಡಿರಲಿಲ್ಲ. ಬದಲಿಗೆ ಡಿಡಿಸಿಎ ಅಧ್ಯಕ್ಷ ರಜತ್ ಶರ್ಮಾ ಅವರಿಂದ ಕೊಡಿಸಿದ್ದರು. ಆ ಕುರಿತು ವಿವರಣೆ ನೀಡುವಂತೆ ನಾವು ಹಾಕಿದ ಪತ್ರಗಳಿಗೆ ಇನ್ನೂ ಸರಿಯಾದ ಉತ್ತರಗಳನ್ನು ಖನ್ನಾ ಅವರು ಕೊಟ್ಟಿಲ್ಲ. ಆದರೆ, 2017ರಲ್ಲಿ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿಯವರು ಹಾಕಿದ್ದ ಇಮೇಲ್ ತೋರಿಸುತ್ತಿದ್ದಾರೆ. ಅದರಲ್ಲಿ ಬಿಸಿಸಿಐ ಅಧ್ಯಕ್ಷರೇ ಟ್ರೋಫಿ ನೀಡಬೇಕು ಎಂದು ಆ ಇಮೇಲ್‌ನಲ್ಲಿ ಉಲ್ಲೇಖವಾಗಿತ್ತು’ ಎಂದು ಎಡುಲ್ಜಿ ಆಕ್ರೋಶ ವ್ಯಕ್ತಪಡಿಸಿದರು.

‘ಬಿಸಿಸಿಐನಲ್ಲಿರುವ ಕೆಲವು ಕಾಣದ ಕೈಗಳು ಕೂಡ ಈ ಕಾರ್ಯಕ್ಕೆ ಕುಮ್ಜಕ್ಜು ನೀಡಿವೆ. ನಾನು ಪ್ರಶಸ್ತಿ ಪ್ರದಾನ ಮಾಡದಂತೆ ತಡೆದಿವೆ’ ಎಂದು ಅವರು ಆರೋಪಿಸಿದರು.

Post Comments (+)