ಗುರುವಾರ , ಸೆಪ್ಟೆಂಬರ್ 19, 2019
29 °C
ಖರ್ಗೆ ಪರ ಎಚ್‌ಡಿಕೆ ಬ್ಯಾಟಿಂಗ್‌: ರೇವಣ್ಣ ಹೆಸರು ಹರಿಬಿಟ್ಟ ಸಿದ್ದರಾಮಯ್ಯ

ಮುಖ್ಯಮಂತ್ರಿ ಹುದ್ದೆ: ರಂಗೇರಿದ ಚರ್ಚೆ

Published:
Updated:

ಬೆಂಗಳೂರು/ ಹುಬ್ಬಳ್ಳಿ: ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲದೇ ಇದ್ದರೂ ಈ ಸ್ಥಾನದಲ್ಲಿ ಯಾರನ್ನು ಕೂರಿಸಬೇಕು ಎಂಬ ವಿಷಯದ ಚರ್ಚೆ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ರಾಜಕೀಯ ವಲಯದಲ್ಲಿ ವಾಗ್ವಾದ ರಂಗೇರಿದೆ.

ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಬೇಕು ಎಂಬ ಒತ್ತಾಸೆಯನ್ನು ಕಾಂಗ್ರೆಸ್‌ನ ಅವರ ಅಭಿಮಾನಿ ಸಚಿವರು, ಶಾಸಕರು ಪದೇ ಪದೇ ಪ್ರಸ್ತಾಪಿಸಿದ್ದರು. ‘ಸದ್ಯ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ; ಈ ಚರ್ಚೆ ಈಗ ಅಪ್ರಸ್ತುತ’ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.

ಉಪ ಚುನಾವಣೆ ನಡೆಯುತ್ತಿರುವ ಚಿಂಚೋಳಿ ವಿಧಾನಸಭೆ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಪರ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು, ‘ಕಾಂಗ್ರೆಸ್ ಪಕ್ಷಕ್ಕಾಗಿ ಸಾಕಷ್ಟು ದುಡಿದಿರುವ ಸಂಸದ ಮಲ್ಲಿಕಾರ್ಜುನ ಖರ್ಗೆಯವರ ಹೋರಾಟ ಹಾಗೂ ಅವರ ಹಿನ್ನೆಲೆಯನ್ನು ಗಮನಿಸಿದರೆ ಅವರು ಯಾವತ್ತೋ ಮುಖ್ಯಮಂತ್ರಿಯಾಗಬೇಕಿತ್ತು. ಅವರಿಗೆ ಆ ಹುದ್ದೆ ಸಿಗಲಿಲ್ಲ ಎಂಬ ನೋವು ನಮಗೂ ಇದೆ’ ಎಂದು ಹೇಳಿದ್ದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕು ಎಂಬ ಕಾಂಗ್ರೆಸ್ ನಾಯಕರ ಬೇಡಿಕೆಗೆ ಮುಖ್ಯಮಂತ್ರಿ ಹೊಸ ಅಸ್ತ್ರ ಬಿಟ್ಟಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆದಿತ್ತು. ‘ದಲಿತ ಸಮುದಾಯದವರನ್ನು ಕಾಂಗ್ರೆಸ್‌ ನಾಯಕರು ಮುಖ್ಯಮಂತ್ರಿ ಮಾಡಲಿಲ್ಲ ಎಂದು ದೂಷಿಸಿದ್ದ ಬಿಜೆಪಿ ನಾಯಕರು, ಕುಮಾರಸ್ವಾಮಿ ಕೂಡಲೇ ರಾಜೀನಾಮೆ ನೀಡಿ ಖರ್ಗೆಯವರಿಗೆ ಹುದ್ದೆ ಬಿಟ್ಟುಕೊಡಲಿ’ ಎಂದೂ ಆಗ್ರಹಿಸಿದ್ದರು. 

ರೇವಣ್ಣ ಅಸ್ತ್ರ: ಈ ವಿಷಯ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಗುರುವಾರ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಕುಮಾರಸ್ವಾಮಿ ಅವರ ಅಣ್ಣ ರೇವಣ್ಣ ಸೇರಿದಂತೆ ಜೆಡಿಎಸ್–ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿಯಾಗುವ ಅರ್ಹತೆ ಇರುವ ಬಹಳ ಜನ ಇದ್ದಾರೆ’ ಎಂದು ಪ್ರತಿಪಾದಿಸಿದ್ದಾರೆ.

‘ಕುಮಾರಸ್ವಾಮಿ ಹೇಳಿದ್ದು ಸರಿಯಾಗಿದೆ. ಮಲ್ಲಿಕಾರ್ಜುನ‌ ಖರ್ಗೆಯವರಿಗೆ ಮುಖ್ಯಮಂತ್ರಿ ಸ್ಥಾನ ಮಾತ್ರವಲ್ಲ, ಅದಕ್ಕಿಂತಲೂ ಉನ್ನತ ಸ್ಥಾನದ ಅರ್ಹತೆಯಿದೆ’ ಎಂದೂ ಅವರು ಪ್ರತಿಪಾದಿಸಿದ್ದಾರೆ. 

‘ಇದು ಅಣ್ಣ ತಮ್ಮನ ಮಧ್ಯೆ ಜಗಳ ಹಚ್ಚಿ ಹಾಕುವ ಕೆಲಸ. ಅನಗತ್ಯ ಗೊಂದಲ ಮೂಡಿಸುವ ಕೆಲಸವನ್ನು ಸಿದ್ದರಾಮಯ್ಯ ಮಾಡಿದ್ದಾರೆ’ ಎಂಬ ಟೀಕೆ ರಾಜಕೀಯ ವಲಯದಲ್ಲಿ ವ್ಯಕ್ತವಾಗಿದೆ.

ಇದಕ್ಕೆ ಪ್ರತಿಕ್ರಿಯೆ ರೂಪದಲ್ಲಿ ಎರಡು ಟ್ವೀಟ್ ಮಾಡಿರುವ ಕುಮಾರಸ್ವಾಮಿ, ‘ನಾಡಿನ ಹಿರಿಯ ರಾಜಕಾರಣಿ ಹಾಗೂ ಮುತ್ಸದ್ದಿ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿಯಾಗಬೇಕಿತ್ತು ಎಂಬ ನನ್ನ ಹೇಳಿಕೆ ಕರ್ನಾಟಕದ ಹಲವು ದಶಕಗಳ ರಾಜಕೀಯ ವಾಸ್ತವತೆಯನ್ನು ಆಧರಿಸಿದ ಮನದಾಳದ ಮಾತು. ಈ ಹೇಳಿಕೆಗೆ ರಾಜಕೀಯದ ಬಣ್ಣಕಟ್ಟಿ ಅಪಾರ್ಥ ಕಲ್ಪಿಸುವಂತೆ ವಿಶ್ಲೇಷಿಸುವುದು ಆರೋಗ್ಯಕರವಲ್ಲ’ ಎಂದು ಕುಟುಕಿದ್ದಾರೆ.

‘ಸಮ್ಮಿಶ್ರ ಸರ್ಕಾರದಲ್ಲಿ ದಲಿತ ಸಮುದಾಯದ ಮಲ್ಲಿಕಾರ್ಜುನ ಖರ್ಗೆ ಅಥವಾ ಪರಮೇಶ್ವರ ಅವರನ್ನು ಮುಖ್ಯಮಂತ್ರಿ ಮಾಡಲಿ’ ಎಂದು ಬಿಜೆಪಿ ಶಾಸಕ ಶ್ರೀರಾಮುಲು ಸಲಹೆ ನೀಡಿದ್ದಾರೆ. 

ಎಲ್ಲ ಸಮುದಾಯದವರಿಗೂ ಅವಕಾಶ ನೀಡಲಾಗಿದೆ. ಈಗ ಉಳಿದಿರುವುದು ದಲಿತರು ಹಾಗೂ ವಾಲ್ಮೀಕಿ ಜನಾಂಗದವರು ಮಾತ್ರ. ಪರಮೇಶ್ವರ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗಲಿಲ್ಲ ಎಂದು ಕಣ್ಣೀರು ಹಾಕುತ್ತಿದ್ದರು. ಬೇಕಾದರೆ ಅವರನ್ನೇ ಮುಖ್ಯಮಂತ್ರಿ ಮಾಡಲಿ ಎಂದರು.

 

Post Comments (+)