ಚರಂಡಿ ಪಾಲಾಗುತ್ತಿರುವ ಕುಡಿಯುವ ನೀರು: ಪೈಪ್‌ಲೈನ್‌ ಸರಿಪಡಿಸುವಂತೆ ಆಗ್ರಹ

ಭಾನುವಾರ, ಮೇ 26, 2019
30 °C
ನಗರದ 26ನೇ ವಾರ್ಡಿನಲ್ಲಿ ರೊಚ್ಚು ನೀರು ಮಿಶ್ರಣದಿಂದ ನೀರು ಕುಡಿಯಲು ಜನರ ಹಿಂದೇಟು

ಚರಂಡಿ ಪಾಲಾಗುತ್ತಿರುವ ಕುಡಿಯುವ ನೀರು: ಪೈಪ್‌ಲೈನ್‌ ಸರಿಪಡಿಸುವಂತೆ ಆಗ್ರಹ

Published:
Updated:
Prajavani

ಚಿಕ್ಕಬಳ್ಳಾಪುರ: ನಗರದ 26ನೇ ವಾರ್ಡಿನಲ್ಲಿ ಜಕ್ಕಲ ಮಡುಗು ಜಲಾಶಯದ ಪೈಪ್‌ಲೈನ್‌ಗೆ ಹಾನಿಯಾಗಿ, ಕುಡಿಯುವ ನೀರಿಗೆ ಕೊಳಚೆ ನೀರು ಮಿಶ್ರಣಗೊಳ್ಳುತ್ತಿದ್ದು, ನಗರಸಭೆ ಅಧಿಕಾರಿಗಳು ಸಮಸ್ಯೆ ಬಗೆಹರಿಸಲು ಮುಂದಾಗದ ಕಾರಣ ಸ್ಥಳೀಯರು ಕೊಳಚೆ ನೀರು ಸಂಗ್ರಹಿಸುವ ಸ್ಥಿತಿ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಚರಂಡಿಯಲ್ಲಿ ಪೈಪ್‌ಲೈನ್‌ ಒಡೆದ ಕಾರಣಕ್ಕೆ ಅಪಾರ ಪ್ರಮಾಣದಲ್ಲಿ ಕುಡಿಯುವ ನೀರು ಚರಂಡಿ ಪಾಲಾಗುತ್ತಿರುವ ಜತೆಗೆ ನೀರು ಪೂರೈಕೆ ಸ್ಥಗಿತಗೊಂಡ ಸಮಯದಲ್ಲಿ ಚರಂಡಿಯಲ್ಲಿನ ರೊಚ್ಚು ನೀರು ಕುಡಿಯುವ ನೀರಿನ ಮಾರ್ಗ ಸೇರಿ ಮನೆಗಳಿಗೆ ಪೂರೈಕೆಯಾಗುತ್ತಿದೆ. ಇದರಿಂದಾಗಿ ನೀರಿನ ಹಾಹಾಕಾರದ ನಡುವೆ ಸಿಗುತ್ತಿರುವ ಅಲ್ಪಪ್ರಮಾಣದ ನೀರನ್ನು ಕೂಡ ಜನರು ಸೇವಿಸಲು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗುತ್ತಿದೆ.

ಪ್ರಸ್ತುತ ಬಡಾವಣೆಗೆ ನಾಲ್ಕೈದು ದಿನಗಳಿಗೊಮ್ಮೆ ನೀರು ಸರಬರಾಜು ಮಾಡುತ್ತಿದ್ದು, ಇಲ್ಲಿನ ನಿವಾಸಿಗಳು ವಿಧಿ ಇಲ್ಲದೆ ಕೊಳಚೆ ಬೆರೆತ ನೀರನ್ನೇ ಹಿಡಿದು ಕುದಿಸಿ ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ದುರಸ್ತಿಯಾದ ಪೈಪ್‌ಲೈನ್‌ನಿಂದಾಗಿ ಅಮಾಯಕ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಾರೆ ಎನ್ನುವ ಆತಂಕ ಪ್ರಜ್ಞಾವಂತರಲ್ಲಿ ಮನೆ ಮಾಡಿದೆ.

ಸದ್ಯ ನಗರ ಸ್ಥಳೀಯ ಸಂಸ್ಥೆಗಳ ಆಡಳಿತ ಮಂಡಳಿ ಅಧಿಕಾರ ಅವಧಿ ಕೊನೆಗೊಂಡಿದ್ದು, ಹೀಗಾಗಿ ನಾಗರಿಕರು ಸ್ಥಳೀಯ ಜನಪ್ರತಿನಿಧಿಗಳಿಗೂ ಸಮಸ್ಯೆ ಹೇಳಿಕೊಂಡರೂ ಪ್ರಯೋಜನವಿಲ್ಲದಂತಾಗಿದೆ. ಇನ್ನೊಂದೆಡೆ ದೂರು ನೀಡಿದರೂ ನಗರಸಭೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬ ಬೇಸರ ಜನರಲ್ಲಿ ಮನೆ ಮಾಡಿದೆ.

‘ಅನೇಕ ದಿನಗಳಿಂದ ಜಕ್ಕಲಮಡುಗು ಜಲಾಶಯದ ಕುಡಿಯುವ ನೀರಿಗೆ ಚರಂಡಿ ನೀರು ಮಿಶ್ರಣಗೊಂಡು ನೀರು ಕುಡಿಯಲು ವಾಕರಿಗೆ ಬರುವ ಸನ್ನಿವೇಶ ಸೃಷ್ಟಿಯಾಗಿದೆ. ಈ ಬಗ್ಗೆ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿಸುವ ಕೆಲಸ ಮಾಡಿಲ್ಲ. ಗಲೀಜು ನೀರು ಕುಡಿದು ಜನರು ಸಾಂಕ್ರಾಮಿಕ ರೋಗಗಳಿಗೆ ತುತ್ತಾದರೆ ಯಾರು ಹೊಣೆ’ ಎಂದು ಸ್ಥಳೀಯ ನಿವಾಸಿ ಪುಟಾಣೆ ಮಂಜುನಾಥ್‌ ಪ್ರಶ್ನಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !