ದುಗುಡ ಮರೆತು, ‘ಸಂಭ್ರಮ’ದಲ್ಲಿ ಬೆರೆತು

ಬುಧವಾರ, ಜೂನ್ 19, 2019
23 °C
ಎಸ್‌ಜೆಸಿಐಟಿ ಕ್ಯಾಂಪಸ್‌ನಲ್ಲಿ ಕಳೆಗಟ್ಟಿದ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು

ದುಗುಡ ಮರೆತು, ‘ಸಂಭ್ರಮ’ದಲ್ಲಿ ಬೆರೆತು

Published:
Updated:
Prajavani

ಚಿಕ್ಕಬಳ್ಳಾಪುರ: ಸದಾ ತರಗತಿಗಳು, ಸಿಲೇಬಸ್‌, ಹೋಂವರ್ಕ್‌, ಅಸೈನ್‌ಮೆಂಟ್‌ಗಳ ಮಾತುಗಳಿಂದ ಗಂಭೀರವಾಗಿರುತ್ತಿದ್ದ ಆ ಕ್ಯಾಂಪಸ್‌ನಲ್ಲಿ ಶನಿವಾರ ‘ಸಂಭ್ರಮ’ ಮನೆ ಮಾಡಿತ್ತು. ದೈನಂದಿನ ಚಿತ್ರಣ ಕಾಣೆಯಾಗಿ, ವಿಭಿನ್ನ ಲೋಕವೊಂದು ಅನಾವರಣಗೊಂಡು ಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಯಿತು.

ನಗರದ ಹೊರವಲಯದ ಶ್ರೀಜಗದ್ಗುರು ಚಂದ್ರಶೇಖರನಾಥ ಸ್ವಾಮೀಜಿ ತಾಂತ್ರಿಕ ಸಂಸ್ಥೆಯಲ್ಲಿ (ಎಸ್‌ಜೆಸಿಐಟಿ) ಆಯೋಜಿಸಿದ್ದ ‘ಸಂಭ್ರಮ-’ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯವಿದು.

ವಿದ್ಯಾರ್ಥಿಗಳು ನಡೆಸಿಕೊಟ್ಟ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ಕ್ಯಾಂಪಸ್‌ನಲ್ಲಿ ಅಕ್ಷರಶಃ ‘ಸಂಭ್ರಮ’ ಉಂಟು ಮಾಡಿದ್ದವು. ನೃತ್ಯ, ಫ್ಯಾಷನ್‌ ಶೋ, ವಿಚಿತ್ರ ವೇಷಭೂಷಣಗಳ ಪ್ರದರ್ಶನಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಆದಿಚುಂಚನಗಿರಿಯ ಚಿಕ್ಕಬಳ್ಳಾಪುರ ಶಾಖಾಮಠದ ಮಂಗಳಾನಂದನಾಥ ಸ್ವಾಮೀಜಿ, ‘ವಿದ್ಯಾರ್ಥಿಗಳು ಪ್ರತಿ ಸಂದರ್ಭದಲ್ಲಿ ಹೊಸ ವಿಚಾರಗಳಲ್ಲಿ ಶೋಧನೆ ಮಾಡುವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಓದಿನಲ್ಲಿ ಯೋಜನೆ ಹಾಕಿಕೊಳ್ಳಬೇಕು. ತಮಗಿಷ್ಟವಾದ ಪದವಿ ಆಯ್ಕೆ ಮಾಡಿಕೊಂಡು ಅಧ್ಯಯನಕ್ಕೆ ಹೆಚ್ಚಿನ ಸಮಯ ಮೀಸಲಿಡಬೇಕು ಆಗ ಮಾತ್ರ ಯಶಸ್ಸು ದೊರೆತು, ಶಿಕ್ಷಣಕ್ಕೆ ಒಂದು ಒಳ್ಳೆಯ ಅರ್ಥ ಸಿಗುತ್ತದೆ’ ಎಂದು ಹೇಳಿದರು.

‘ಕಲಿಕೆ ಕಾಲೇಜು, ತರಗತಿಗಳಿಗೆ ಮಾತ್ರ ಸೀಮಿತಗೊಳ್ಳದೆ. ಜೀವನ ಪರ್ಯಂತ ಮುಂದುವರಿಯಬೇಕು. ಕಲಿಕೆ ನಿಂತ ನೀರಾಗಬಾರದು ನದಿಯಾಗಬೇಕು. ಆದ್ದರಿಂದ ಪ್ರತಿಯೊಬ್ಬರೂ ಸಾಯುವವರೆಗೂ ಏನಾದರೂ ಕಲಿಯುತ್ತಲೇ ಇರಬೇಕು. ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್ ಓದಿ ಗಳಿಸಿಕೊಳ್ಳುವ ಜ್ಞಾನದ ಜತೆಗೆ ದೇಶದ ಬೆಳವಣಿಗೆ ಬಗ್ಗೆ ಕಲ್ಪನೆ ಇರಬೇಕು’ ಎಂದು ತಿಳಿಸಿದರು.

‘ಇವತ್ತು ವಿಫುಲ ಉದ್ಯೋಗಾವಕಾಶಗಳಿವೆ. ಆದರೆ ಎಲ್ಲರಿಗೂ ಕೆಲಸ ಸಿಗುವುದಿಲ್ಲ. ಉತ್ತಮ ಕೌಶಲ ತೋರುವವರಿಗೆ ಮಾತ್ರ ಕೆಲಸ ದೊರೆಯುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಕೌಶಲ ಕಲಿಯಲು ಆದ್ಯತೆ ನೀಡಬೇಕು’ ಎಂದರು.

ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಪ್ರದಾನ ಮಾಡಲಾಯಿತು. ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿ ಎನ್.ಶಿವರಾಮರೆಡ್ಡಿ, ಎಸ್‌ಜೆಸಿಐಟಿ ಕಾಲೇಜು ಪ್ರಾಂಶುಪಾಲ ಕೆ.ಎಂ.ರವಿಕುಮಾರ್, ಎಸ್‌ಜೆಸಿಐಟಿಯ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ ನಿರ್ದೇಶಕ ಟಿ.ಮುನಿಕೆಂಚೇಗೌಡ ಹಾಗೂ ಕಾಲೇಜಿನ ಸಿಬ್ಬಂದಿ ಉಪಸ್ಥಿತರಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !