ಶನಿವಾರ, ಸೆಪ್ಟೆಂಬರ್ 18, 2021
21 °C
ಸಚಿವರ ನಿರೀಕ್ಷೆಯಲ್ಲಿ ಬಿಸಿಲಲ್ಲಿ ಬೆಂದು ಹೋದ ಕೂಲಿ ಕಾರ್ಮಿಕರು

ಉದ್ಯೋಗ ಖಾತರಿ; ಹೀಗೊಂದು ‘ಪ್ರಹಸನ’

ವೆಂಕಟೇಶ್ ಜಿ.ಎಚ್. Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಇಡೀ ಊರಿಗೆ ಊರೇ ಅಲ್ಲಿಗೆ ನೆರೆದಿತ್ತು. ಹೆಣ್ಣು–ಗಂಡು ಎಂಬ ಬೇಧವಿಲ್ಲದೇ ನೂರಾರು ಮಂದಿ ಗುದ್ದಲಿ, ಸಲಿಕೆ, ಪುಟ್ಟಿ ಹಿಡಿದು ಲಘು–ಬಗೆಯಿಂದ ಕೆಲಸ ಮಾಡುತ್ತಿದ್ದರು. ಹೊಲದ ಬದು, ಹೊಂಡಗಳ ನಿರ್ಮಾಣಕ್ಕೆ ಕೈ ಜೋಡಿಸಿದ್ದರು. ಉರಿ ಬಿಸಿಲಿನ ತಾಪಕ್ಕೆ ಕೈ–ಕಾಲು ಸೋತರೂ ಕೆಲಸ ಹೊತ್ತಿನಲ್ಲಿಯೇ ಬರಲಿದ್ದ ಮಂತ್ರಿಗಳ ದಿಬ್ಬಣ ಮರಳಿ ಹೋಗುವವರೆಗೂ ಕೆಲಸ ಮಾಡುವ ಅನಿವಾರ್ಯತೆ ಅವರನ್ನು ಅಲ್ಲಿ ಕಟ್ಟಿ ಹಾಕಿತ್ತು.

ಪಕ್ಕದಲ್ಲಿಯೇ ಇದ್ದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾದು ಹೋಗುವವರು, ವಾಹನ ಸವಾರರು ಕೆಲ ಕಾಲ ನಿಂತು ಈ ಸಾಮೂಹಿಕ ಶ್ರಮದಾನದ ಕಣ್ತುಂಬಿಕೊಂಡರು. ಕೆಲವರು ಕುತೂಹಲದಿಂದ ಅದೇನೆಂದು ವಿಚಾರಿಸಿ ಮುಂದಕ್ಕೆ ತೆರಳಿದರು.

ಜಿಲ್ಲೆಯಲ್ಲಿ ಬರ ಪರಿಹಾರ ಕಾಮಗಾರಿ ಪರಿಶೀಲನೆಗೆ ಶನಿವಾರ ಖುದ್ದು ಕಂದಾಯ ಮಂತ್ರಿ ಆರ್.ವಿ.ದೇಶಪಾಂಡೆ ಭೇಟಿ ನೀಡಲಿದ್ದ ಕಾರಣ ಬಾದಾಮಿ ತಾಲ್ಲೂಕಿನ ಅಗಸನಕೊಪ್ಪದಲ್ಲಿ ಹೀಗೊಂದು ಉದ್ಯೋಗ ಖಾತರಿಯಡಿ ನಿರಂತರ ಕೆಲಸದ ‘ಪ್ರಹಸನ’ ನಡೆಯಿತು. ಅಧಿಕಾರಿಗಳೇ ಮುಂದೆ ನಿಂತು ಪ್ರಹಸನ ನಿರ್ದೇಶಿಸಿದ್ದರು. ಸಚಿವರು ಕೇಳಬಹುದಾದ ಪ್ರಶ್ನೆ ಅದಕ್ಕೆ ಕೊಡಬೇಕಾದ ಉತ್ತರದ ಬಗ್ಗೆಯೂ ಕೂಲಿ ಕಾರ್ಮಿಕರಿಗೆ ಗಿಳಿಪಾಠ ಹೇಳಿಕೊಟ್ಟಿದ್ದರು.

ಬಿಸಿಲಿನ ತಾಪ ಹೈರಾಣಾಗಿಸಿದೆ:

‘ಉದ್ಯೋಗ ಖಾತರಿಯಡಿ ಮುಂಜಾನೆ 6 ಗಂಟೆಗೆ ಕೆಲಸ ಆರಂಭಿಸುವಂತೆ ಅಧಿಕಾರಿಗಳಿಗೆ ಕೇಳುತ್ತೇವೆ. ಅವರು 10ರ ನಂತರವೇ ಆರಂಭಿಸುತ್ತಾರೆ. ತಂಪು ಹೊತ್ತಿನಲ್ಲಿ ಕೆಲಸ ಕೊಡಿ ಎಂದರೆ ಕೇಳುವುದಿಲ್ಲ. ಬಿಸಿಲಿಗೆ ನಾವು ಹೈರಾಣಾಗಿದ್ದೇವೆ’ ಎಂದು ಅಲ್ಲಿ ಕೆಲಸ ಮಾಡುತ್ತಿದ್ದ ಶಿವಪ್ಪ ಮಾದರ ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು. 

ಜಾಬ್ ಕಾರ್ಡ್ ಕೊಟ್ಟಿಲ್ಲ: ಗ್ರಾಮದಲ್ಲಿ 100ಕ್ಕೂ ಹೆಚ್ಚು ಮಂದಿಗೆ ಜಾಬ್‌ ಕಾರ್ಡ್ ಕೊಟ್ಟಿಲ್ಲ. ಐದು ತಿಂಗಳ ಹಿಂದೆಯೇ ಅರ್ಜಿ ಸಲ್ಲಿಸಿರುವೆ ಇನ್ನೂ ಸಿಕ್ಕಿಲ್ಲ. ಗ್ರಾಮ ಪಂಚಾಯ್ತಿಯಲ್ಲಿ ಕೇಳಿದರೆ ತಾಲ್ಲೂಕು ಪಂಚಾಯ್ತಿಯತ್ತ ಕೈ ತೋರುತ್ತಾರೆ. ಅಲ್ಲಿ ಕೇಳಿದರೆ ಊರಿಗೆ ಮರಳಿ ಕಳುಹಿಸುತ್ತಾರೆ. ನಾನು ಜನವರಿ ತಿಂಗಳಲ್ಲಿಯೇ ಅರ್ಜಿ ಸಲ್ಲಿಸಿದ್ದೇನೆ. ಇನ್ನೂ ಕೊಟ್ಟಿಲ್ಲ ಎಂದು ಪರಶುರಾಮ ಬಿಂಕದಕಟ್ಟಿ ಹೇಳಿದರು.

ವಿಶೇಷವೆಂದರೆ ಪರಶುರಾಮ ತನ್ನ ಅಕ್ಕನ ಗಂಡ ದೇವರಡ್ಡಿ ಕೊಣ್ಣೂರ ಅವರ ಹೆಸರಿನ ಜಾಬ್‌ಕಾರ್ಡ್‌ ತೆಗೆದುಕೊಂಡು ಬಂದು ಅದರಲ್ಲಿ ಕೆಲಸ ಮಾಡುತ್ತಿದ್ದರು. 

‘ಉದ್ಯೋಗ ಖಾತರಿ ಅಡಿ ಪಗಾರ ಕೊಟ್ಟು 8ರಿಂದ 10 ತಿಂಗಳು ಆಗಿತ್ತು. ಮೂರು ದಿನಗಳ ಹಿಂದೆ ಸಿಇಒ ಮೇಡಮ್ ಬಂದು ಗಲಾಟೆ ಮಾಡಿದ ಮೇಲೆ ಅಧಿಕಾರಿಗಳು ನಮ್ಮ ಖಾತೆಗೆ ಹಣ ಜಮಾ ಮಾಡಿದ್ದಾರೆ’ ಎಂದು ಕೂಲಿಕಾರ್ಮಿಕರು ಹೇಳಿಕೊಂಡರು.

‘ನಾವು 15 ದಿನಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಕಾರ್ಮಿಕ ಮಹಿಳೆಯರು ಹೇಳಿಕೊಂಡರೆ ಇನ್ನೂ ಕೆಲವರು ಬಹಳ ಹಿಂದಿನಿಂದಲೂ ಕೆಲಸ ಕೊಟ್ಟಿದ್ದಾರೆ ಎಂದು ಹೇಳಿದರು. ಆದರೆ ಅಲ್ಲಿ ಆಟವಾಡುತ್ತಿದ್ದ ಕಾರ್ಮಿಕರ ಮಕ್ಕಳು ಮಾತ್ರ ಮೂರು ದಿನಗಳಿಂದ ನಮ್ಮ ಪೋಷಕರು ಇಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದು ವಾಸ್ತವ ಬಿಚ್ಚಿಟ್ಟರು.

130ಕ್ಕೂ ಹೆಚ್ಚು ಮಂದಿ ಇಂದು ಕೆಲಸ ಮಾಡುತ್ತಿದ್ದೇವೆ. 10x10 ಅಳತೆಯ ಗುಂಡಿ ತೆಗೆಯುವ ಜೊತೆಗೆ ಬದು ನಿರ್ಮಾಣ ಕಾರ್ಯದಲ್ಲೂ ತೊಡಗಿದ್ದೇವೆ ಎಂದರು.

ಅಚ್ಚರಿಯೆಂದರೆ ಉದ್ಯೋಗ ಖಾತರಿಯಡಿ ಇಷ್ಟೆಲ್ಲಾ ಕೆಲಸದ ಪ್ರಹಸನದ ನಡುವೆಯೂ ಅಗಸನಕೊಪ್ಪದಲ್ಲಿ 50ಕ್ಕೂ ಹೆಚ್ಚು ಮಂದಿ ಗೋವಾ, ಮಂಗಳೂರಿಗೆ ಕೆಲಸ ಅರಸಿ ಗುಳೇ ಹೋಗಿರುವುದು ‘ಪ್ರಜಾವಾಣಿ’ ಗ್ರಾಮಕ್ಕೆ ಭೇಟಿ ನೀಡಿದಾಗ ಗೊತ್ತಾಯಿತು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು