ಸಂಸದ ನಳಿನ್‌ ಗಡೀಪಾರಿಗೆ ಕಾಂಗ್ರೆಸ್‌ ಆಗ್ರಹ

ಮಂಗಳವಾರ, ಜೂನ್ 18, 2019
31 °C
ಗೋಡ್ಸೆ ಬೆಂಬಲಿಸಿ ಟ್ವೀಟ್‌ ವಿರೋಧಿಸಿ ಪ್ರತಿಭಟನೆ

ಸಂಸದ ನಳಿನ್‌ ಗಡೀಪಾರಿಗೆ ಕಾಂಗ್ರೆಸ್‌ ಆಗ್ರಹ

Published:
Updated:
Prajavani

ಮಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ನಾಥೂರಾಮ್‌ ಗೋಡ್ಸೆಯನ್ನು ಸಮರ್ಥಿಸಿ ಟ್ವೀಟ್‌ ಮಾಡಿದ ದಕ್ಷಿಣ ಕನ್ನಡ ಸಂಸದ ನಳಿನ್‌ಕುಮಾರ್‌ ಕಟೀಲ್‌ ಅವರನ್ನು ದೇಶದಿಂದಲೇ ಗಡೀಪಾರು ಮಾಡಬೇಕು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆಗ್ರಹಿಸಿದರು.

ಗೋಡ್ಸೆಯನ್ನು ಬೆಂಬಲಿಸಿರುವ ನಳಿನ್‌ಕುಮಾರ್‌ ಕಟೀಲ್‌, ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮತ್ತು ಸಾಧ್ವಿ ಪ್ರಜ್ಞಾ ಸಿಂಗ್‌ ವಿರುದ್ಧ ಕಾಂಗ್ರೆಸ್‌ ಪಕ್ಷದ ವತಿಯಿಂದ ನಗರದಲ್ಲಿ ಶನಿವಾರ ನಡೆಸಿದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

‘ಗಾಂಧೀಜಿಯವರನ್ನು ಅವಮಾನಿಸಿದ ನಳಿನ್‌ಕುಮಾರ್‌ ನಮ್ಮ ಸಂಸದರು ಎಂದು ಹೇಳಿಕೊಳ್ಳಲು ನಾಚಿಕೆ ಆಗುತ್ತದೆ. ಇಂತಹವರಿಗೆ ದೇಶದಲ್ಲಿ ಬದುಕುವ ಅವಕಾಶ ನೀಡಬಾರದು. ಸಾಮಾಜಿಕ ಕ್ಷೇತ್ರದಿಂದ ಇವರನ್ನು ಹೊರಗಿಡಬೇಕು. ಜನರೇ ಬಹಿಷ್ಕರಿಸಿ, ಗಡೀಪಾರು ಮಾಡುವ ಕೆಲಸ ಮಾಡಬೇಕು’ ಎಂದರು.

ಗಾಂಧೀಜಿ ಜಗತ್ತಿಗೆ ಮಾದರಿಯಾದ ವ್ಯಕ್ತಿತ್ವ ಹೊಂದಿದ್ದವರು. ಜಗತ್ತಿನ ಹಲವು ರಾಷ್ಟ್ರಗಳ ಜನರು ಅವರನ್ನು ಗೌರವಿಸುತ್ತಿದ್ದಾರೆ. 140 ರಾಷ್ಟ್ರಗಳಲ್ಲಿ ಗಾಂಧೀಜಿಯವರ ಪ್ರತಿಮೆ ಸ್ಥಾಪಿಸಲಾಗಿದೆ. ಆದರೆ, ಬಿಜೆಪಿಯ ಮುಖಂಡರು ಗಾಂಧೀಜಿಯವರ ಚಾರಿತ್ರ್ಯಕ್ಕೆ ಕಳಂಕ ತರುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

‘ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ಅವಮಾನಿಸುವ ಮತ್ತು ಇತಿಹಾಸವನ್ನು ತಿರುಚುವ ಕೆಲಸ ಮಾಡುತ್ತಿರುವವರಿಗೆ ಬಿಜೆಪಿಯ ನಾಯಕರು ಬೆಂಬಲ ನೀಡುತ್ತಿದ್ದಾರೆ. ಗಾಂಧೀಜಿಯವರ ಹತ್ಯೆಯನ್ನು ಸಮರ್ಥಿಸುವುದು ಹೀನ ಕೆಲಸ. ಈಗ ರಾಜೀವ್‌ ಗಾಂಧಿಯವರ ಸಾವಿನ ವಿಚಾರವನ್ನೂ ಬಿಜೆಪಿ ಮುಖಂಡರು ರಾಜಕೀಯಕ್ಕೆ ಬಳಸುತ್ತಿದ್ದಾರೆ. ಇವರಿಗೆ ಜನರು ತಕ್ಕ ಪಾಠ ಕಲಿಸಬೇಕು’ ಎಂದರು.

ಜಿಲ್ಲೆಯ ಮಾನ ಹರಾಜು: ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಐವನ್‌ ಡಿಸೋಜ ಮಾತನಾಡಿ, ಬಿಜೆಪಿಗೆ ಗಾಂಧೀಜಿಯವರ ಬಗ್ಗೆ ಗೌರವ ಇದ್ದರೆ ನಳಿನ್‌ಕುಮಾರ್‌ ಅವರನ್ನು ಪಕ್ಷದಿಂದ ಉಚ್ಛಾಟಿಸಲಿ. ಗೋಡ್ಸೆಯನ್ನು ಸಮರ್ಥಿಸುವ ಹೇಳಿಕೆಗೆ ಬೆಂಬಲ ನೀಡುವುದಾದರೆ ಬೃಹತ್‌ ರ‍್ಯಾಲಿ ನಡೆಸಲಿ. ಈ ವಿಚಾರದಲ್ಲಿ ತನ್ನ ನಿಲುವು ಏನು ಎಂಬುದನ್ನು ಬಿಜೆಪಿ ಸ್ಪಷ್ಟಪಡಿಸಬೇಕು ಎಂದು
ಆಗ್ರಹಿಸಿದರು.

ಕಾಂಗ್ರೆಸ್ ಮುಖಂಡರಾದ ಸುರೇಶ್ ಬಲ್ಲಾಳ್, ಶಶಿಧರ ಹೆಗ್ಡೆ, ಬಲರಾಜ್ ರೈ, ಬೇಬಿ ಕುಂದರ್, ಸದಾಶಿವ ಶೆಟ್ಟಿ, ವಿಶ್ವಾಸ್ ಕುಮಾರ್ ದಾಸ್, ಅಪ್ಪಿ, ಜೆಸಿಂತಾ ಆಲ್ಫ್ರೆಡ್‌, ಆಶಾ ಡಿಸಿಲ್ವ, ಎ.ಸಿ.ವಿನಯರಾಜ್, ರಮಾನಂದ ಪೂಜಾರಿ, ನೀರಜ್‍ಪಾಲ್, ಟಿ.ಕೆ.ಸುಧೀರ್‌, ಸಂತೋಷ್ ಕುಮಾರ್ ಶೆಟ್ಟಿ, ನಝೀರ್ ಬಜಾಲ್, ಎಂ.ಪಿ.ಮನುರಾಜ್, ಬಿ.ಎ.ಮುಹಮ್ಮದ್ ಹನೀಫ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !