ಶುಕ್ರವಾರ, ಏಪ್ರಿಲ್ 10, 2020
19 °C
ಜೂನ್‌ನಲ್ಲಿ ಸಭೆ ಕರೆದು ನೀರಾವರಿ ಹೋರಾಟಗಾರರ ಅಹವಾಲು ಆಲಿಸುವಂತೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ಆಗ್ರಹ

ಮುಖ್ಯಮಂತ್ರಿ ಶಾಶ್ವತ ನೀರಾವರಿ ಹೋರಾಟಗಾರರ ಸಭೆ ಕರೆಯದಿದ್ದರೆ ಜನಾಂದೋಲನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ‘ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜೂನ್ ಒಳಗೆ ಶಾಶ್ವತ ನೀರಾವರಿ ಹೋರಾಟಗಾರರ ಸಭೆ ಕರೆದು ನೀರಾವರಿ ಯೋಜನೆಗಳ ಬಗ್ಗೆ ಚರ್ಚೆ ಮಾಡಬೇಕು. ಇಲ್ಲದಿದ್ದರೆ ಜುಲೈನಿಂದ ಬೃಹತ್‌ ಜನಾಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ’ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ಹೇಳಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮತನಾಡಿದ ಅವರು, ‘ಈ ಹಿಂದೆ ನಾವು ಶಾಶ್ವತ ನೀರಾವರಿ ಹೋರಾಟ ಮಾಡುವ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ನಮಗೆ ನೈತಿಕ ಬೆಂಬಲ ನೀಡಿ, ಬಯಲುಸೀಮೆ ಜಿಲ್ಲೆಗಳ ನೀರಿನ ಸಮಸ್ಯೆಯನ್ನು ಪರಿಹರಿಸುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ ಅವರೇ ಮುಖ್ಯಮಂತ್ರಿಯಾಗಿ ಒಂದು ವರ್ಷ ಕಳೆದರೂ ನೀರಾವರಿ ಬಗ್ಗೆ ಚಕಾರ ಎತ್ತುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಎತ್ತಿನಹೊಳೆ ಯೋಜನೆಯಿಂದ ಚಿಕ್ಕಬಳ್ಳಾಪುರ ಜಿಲ್ಲೆಗೆ ಒಂದೇ ಒಮದು ಹನಿ ನೀರು ಹರಿಯುವುದಿಲ್ಲ. ಸುಳ್ಳು ಯೋಜನಾ ವರದಿಗಳು ಸೃಷ್ಟಿಸಿ ಗುತ್ತಿಗೆದಾರರನ್ನು ಶ್ರೀಮಂತರನ್ನಾಗಿ ಮಾಡಲು ಅಂತಹದೊಂದು ಯೋಜನೆ ರೂಪಿಸಲಾಗಿದೆ. ಕೆ.ಸಿ ವ್ಯಾಲಿ ಮತ್ತು ಎಚ್.ಎನ್ ವ್ಯಾಲಿ ನೀರನ್ನು ಮೂರನೇ ಹಂತದ ಶುದ್ಧೀಕರಣ ಮಾಡದೆ ನಮ್ಮ ಕೆರೆಗಳಿಗೆ ಹರಿಸಿದರೆ ಅನಾಹುತ ತಪ್ಪಿದ್ದಲ್ಲ’ ಎಂದು ತಿಳಿಸಿದರು.

‘ಕೆರೆ ತುಂಬಿಸುವ ನೀರಾವರಿ ಯೋಜನೆಗಳ ಬಗ್ಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜನಸಾಮಾನ್ಯರಿಗೆ ತಪ್ಪು ಮಾಹಿತಿ ನೀಡಿ ಮೋಸ ಮಾಡುತ್ತಿದ್ದಾರೆ. ವ್ಯಾಲಿಗಳ ನೀರು ತಂದು ಈ ಭಾಗ ಹಸಿರೀಕರಣ ಮಾಡುತ್ತೇವೆ ಎಂದು ಹೇಳಿದವರು ಇದೀಗ ಶುದ್ಧಗೊಳಿಸದ ಹಸಿರು ನೀರು ಕೆರೆಗಳಿಗೆ ಹರಿಸುತ್ತಿದ್ದಾರೆ. ಜಲತಜ್ಞ ಪರಮಶಿವಯ್ಯ ಅವರ ವರದಿ ಶಿಫಾರಸುಗಳು ಜಾರಿಯಾಗದ ಹೊರತು ನಮ್ಮ ಕೆರೆಗಳಿಗೆ, ಜೀವರಾಶಿಗೆ ಶುದ್ಧ ಕುಡಿಯುವ ನೀರು ಸಿಗುವುದಿಲ್ಲ’ ಎಂದು ಹೇಳಿದರು.

ಶಾಶ್ವತ ಹೋರಾಟ ಸಮಿತಿ ಮುಖಂಡರಾದ ಲಕ್ಷ್ಮಯ್ಯ, ಮಳ್ಳೂರು ಹರೀಶ್, ಸುಷ್ಮಾ ಶ್ರೀನಿವಾಸ್‌, ನಾರಾಯಣಸ್ವಾಮಿ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು