ಶಿವಳ್ಳಿ ಹೆಸರು ಶಾಶ್ವತಗೊಳಿಸಲು ಶ್ರಮ

ಶುಕ್ರವಾರ, ಜೂನ್ 21, 2019
22 °C
ಕುಂದಗೋಳ ವಿಧಾನಸಭಾ ಕ್ಷೇತ್ರದ ನೂತನ ಶಾಸಕಿ ಕುಸುಮಾವತಿ ಅಭಿಮತ

ಶಿವಳ್ಳಿ ಹೆಸರು ಶಾಶ್ವತಗೊಳಿಸಲು ಶ್ರಮ

Published:
Updated:
Prajavani

ಹುಬ್ಬಳ್ಳಿ: ಸಚಿವರಾಗಿದ್ದ ಸಿ.ಎಸ್‌.ಶಿವಳ್ಳಿ ಅವರ ಹಠಾತ್‌ ನಿಧನದಿಂದ ತೆರವಾದ ಕುಂದಗೋಳ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿರುವ ಕುಸುಮಾವತಿ ಶಿವಳ್ಳಿ ತಮಗೆ ಅನಿರೀಕ್ಷಿತವಾಗಿ ಒದಗಿಬಂದ ರಾಜಕೀಯ ಸ್ಥಾನಮಾನ, ಕೌಟುಂಬಿಕ ಜವಾಬ್ದಾರಿ, ಚುನಾವಣೆಯಲ್ಲಿ ಗೆಲುವಿಗೆ ರೂಪಿಸಿದ ತಂತ್ರಗಾರಿಕೆ ಹಾಗೂ ಮುಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ಕ್ಷೇತ್ರದಲ್ಲಿ ತಾವು ಕೈಗೊಳ್ಳಬೇಕೆಂದಿರುವ ಯೋಜನೆಗಳ ಕುರಿತು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

*ನಿಮ್ಮ ಗೆಲುವಿನ ಗುಟ್ಟೇನು?

ಕುಸುಮಾತಿ: ಕ್ಷೇತ್ರದಲ್ಲಿ ಸಾಹೇಬ್ರು(ಪತಿ ಸಿ.ಎಸ್‌.ಶಿವಳ್ಳಿ) ಮಾಡಿರುವ ಅಭಿವೃದ್ಧಿ ಕಾರ್ಯಗಳು, ಬಡವರ ಪರ ಧೋರಣೆ ಹಾಗೂ ಅವರ ನಿಧನದಿಂದ ಉಂಟಾದ ಅನುಕುಂಪದ ಅಲೆಯಿಂದಾಗಿ ಗೆಲುವು ಸಾಧಿಸಿದ್ದೇನೆ. ಜೊತೆಗೆ ಮುಖಂಡರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಸೇರಿದಂತೆ ಕಾಂಗ್ರೆಸ್‌, ಜೆಡಿಎಸ್‌ ಮುಖಂಡರು, ಕಾರ್ಯಕರ್ತರು ಒಂದಾಗಿ ನನ್ನ ಗೆಲುವಿಗೆ ಹಗಲಿರುಳು ಶ್ರಮಿಸಿದ್ದಾರೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ಕ್ಷೇತ್ರದ ಅಭಿವೃದ್ಧಿಯಾಗುತ್ತದೆ ಎಂಬ ಕಾರಣಕ್ಕೂ ಜನರು ಗೆಲ್ಲಿಸಿದ್ದಾರೆ.

*ಗೆಲುವಿನ ಅಂತರ ಬಹಳ ಕಡಿಮೆ ಇರುವುದರಿಂದ ಕ್ಷೇತ್ರದಲ್ಲಿ ಅನುಕಂಪದ ಅಲೆ ಇತ್ತು ಎನಿಸುತ್ತದೆಯೇ?

ಕುಸುಮಾತಿ: ಅನುಕಂಪ ಇಲ್ಲದೇ ಇದ್ದರೆ ನನ್ನ ಗೆಲುವು ಕಷ್ಟವಾಗುತ್ತಿತ್ತು. ಇದರಲ್ಲಿ ಎರಡು ಮಾತಿಲ್ಲ. ಸಾಹೇಬ್ರು ಪಕ್ಷ, ರಾಜಕೀಯ ಮೀರಿ ಬಡವರು, ದೀನ ದಲಿತರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ಜಾತಿ, ಧರ್ಮೀಯರ ಪ್ರೀತಿ, ವಿಶ್ವಾಸ ಗಳಿಸಿದ್ದರು. ಪಕ್ಷ, ಜಾತಿ ಮೀರಿ ಕೆಲಸ ಮಾಡಿದ್ದರು. ಇದಲ್ಲದೇ ಅವರ ರಾಜಕೀಯ ಜೀವನದಲ್ಲಿ ಎಲ್ಲಿಯೂ ಕಪ್ಪು ಚುಕ್ಕೆ ಇರಲಿಲ್ಲ. ಭ್ರಷ್ಟಾಚಾರ, ಸ್ವಜನ ಪಕ್ಷಪಾತದ ಆರೋಪವಿರಲಿಲ್ಲ. ಅವರ ಹಠಾತ್‌ ಅಗಲಿಕೆಯ ನೋವು ಕ್ಷೇತ್ರದ ಜನರಲ್ಲಿ ಗಾಢವಾಗಿತ್ತು. ನನ್ನ ಗೆಲುವಿಗೆ ಅನುಕಂಪವೇ ಮುಖ್ಯ ಕಾರಣ.

*ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೀರಾ?

ಕುಸುಮಾವತಿ: ಖಂಡಿತಾ ಇಲ್ಲ. ಇದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ.

*ನಾಲ್ಕು ವರ್ಷದ ಅಧಿಕಾರವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ನೀವು ಯಾವ ಯೋಜನೆ ರೂಪಿಸಿದ್ದೀರಿ?

ಕುಸುಮಾವತಿ: ಕ್ಷೇತ್ರದ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಆದ್ಯತೆ ನೀಡುತ್ತೇನೆ. ಗ್ರಾಮೀಣ ರಸ್ತೆ, ಚರಂಡಿ ನಿರ್ಮಾಣಕ್ಕೂ ಮುಂದಾಗುತ್ತೇನೆ. ಜೊತೆಗೆ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡವರಿಗೆ ಸೂರಿಲ್ಲ. ಅಂಥವರನ್ನು ಪ್ರಾಮಾಣಿಕವಾಗಿ ಗುರುತಿಸಿ, ಮನೆಗಳನ್ನು ನಿರ್ಮಿಸಿಕೊಡುತ್ತೇನೆ. 

*ಪತಿ ಸಿ.ಎಸ್‌.ಶಿವಳ್ಳಿ ಅನುಪಸ್ಥಿತಿಯಲ್ಲಿ ಶಾಸಕ ಸ್ಥಾನದ ಜವಾಬ್ದಾರಿ ಜೊತೆ ಕುಟುಂಬ ನಿರ್ವಹಣೆ ಕಷ್ಟವಾಗುವುದಿಲ್ಲವೇ?

ಕುಸುಮಾವತಿ: ಕೌಟುಂಬಿಕ ಮತ್ತು ರಾಜಕೀಯ ಜವಾಬ್ದಾರಿ ಎರಡನ್ನೂ ಸರಿದೂಗಿಸಿಕೊಂಡು ಹೋಗುವ ಸವಾಲು ನನ್ನ ಮೇಲಿದೆ. ಮಕ್ಕಳು ಓದುತ್ತಿದ್ದಾರೆ. ರಾಜಕೀಯ ಚಟುವಟಿಕೆಗಳ ನಡುವೆ ಅವರ ಭವಿಷ್ಯಕ್ಕೆ ಹೆಚ್ಚು ಆದ್ಯತೆ ನೀಡಬೇಕಾಗಿದೆ. ಕುಟುಂಬದವರು ಮತ್ತು ಪಕ್ಷದ ಮುಖಂಡರ ಸಹಕಾರದಿಂದ ಎರಡನ್ನೂ ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುವ ವಿಶ್ವಾಸ ಇದೆ.

*ರಾಜಕೀಯ ಕ್ಷೇತ್ರ ಹೇಗನಿಸುತ್ತದೆ?

ಕುಸುಮಾವತಿ: ನನಗೆ ರಾಜಕೀಯ ಹಳೆಯದು, ಅಧಿಕಾರ ಮಾತ್ರ ಹೊಸದು. ಈ ಹಿಂದೆಯೂ ಸಾಹೇಬ್ರು ಚುನಾವಣೆಗೆ ನಿಂತಾಗ ಅವರ ಪರ ಪ್ರಚಾರಕ್ಕೆ ಹೋಗಿದ್ದೆ. ಸಾಮೂಹಿಕ ವಿವಾಹ ಮತ್ತಿತರ ಸಭೆ, ಸಮಾರಂಭಗಳಲ್ಲಿ ಪಾಲ್ಗೊಂಡಿದ್ದೇನೆ. ಹೀಗಾಗಿ ಕ್ಷೇತ್ರದ ಬಹುತೇಕ ಜನರ ಪರಿಚಯ ಚೆನ್ನಾಗಿದೆ. ರಾಜಕೀಯ ಹೊಸದು ಎನಿಸುತ್ತಿಲ್ಲ.

*ಸಿ.ಎಸ್‌. ಶಿವಳ್ಳಿ ಅವರ ಹೆಸರು ಚಿರಸ್ಥಾಯಿಗೊಳಿಸುವ ಯೋಜನೆ ಏನಾದರೂ ಇದೆಯಾ?

ಕುಸುಮಾವತಿ: ಖಂಡಿತಾ, ಸಾಹೇಬ್ರ ಹೆಸರನ್ನು ಜನ ಮಾನಸದಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡಬೇಕು ಎಂಬುದು ನನ್ನ ಆಶಯವಾಗಿದೆ. ಅವರು ಹಾಕಿಕೊಟ್ಟಿರುವ ರಾಜಕೀಯ ಮಾರ್ಗದಲ್ಲೇ ಹೆಜ್ಜೆ ಇಡುತ್ತೇನೆ. ಎಲ್ಲಿಯೂ ಅವರ ಹೆಸರಿಗೆ ಕಳಂಕ ಬರದಂತೆ ಎಚ್ಚರ ವಹಿಸುತ್ತೇನೆ. ಕ್ಷೇತ್ರದ ಜನರಿಗೆ ಅನುಕೂಲವಾಗುವಂತ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಆದ್ಯತೆ ನೀಡುತ್ತೇನೆ.

*ಕೇವಲ ಮುಂದಿನ ನಾಲ್ಕು ವರ್ಷಗಳಿಗೆ ಮಾತ್ರ ನಿಮ್ಮ ರಾಜಕೀಯ ಸೀಮಿತವಾಗಿರುತ್ತಾ ಅಥವಾ ಬಳಿಕವೂ ಮುಂದುವರಿಯುವ ಆಸಕ್ತಿ ಇದೆಯಾ?

ಕುಸುಮಾವತಿ: ಈಗಲೇ ಭವಿಷ್ಯದ ನಡೆಯನ್ನು ಹೇಳಲಾಗದು. ಸದ್ಯ ಸಿಕ್ಕಿರುವ ಅವಕಾಶ, ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ. ನಾಲ್ಕು ವರ್ಷಗಳ ಬಳಿಕದ ಸನ್ನಿವೇಶಗಳನ್ನು ಅರಿತು ಅವಕಾಶ ಸಿಕ್ಕರೆ ರಾಜಕೀಯದಲ್ಲೇ ಮುಂದುವರೆಯುವ ಇಚ್ಛೆ ಇದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !