ಸೋಮವಾರ, ಏಪ್ರಿಲ್ 19, 2021
32 °C
‘ವಿಶ್ವ ತಂಬಾಕು ರಹಿತ ದಿನ’ ಕಾರ್ಯಕ್ರಮ

ತಂಬಾಕು ರಹಿತ ದೇಶ ನಿರ್ಮಿಸಿ: ನ್ಯಾಯಾಧೀಶ ಎಸ್.ಎಚ್.ಕೋರಡ್ಡಿ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ತಂಬಾಕು ಪದಾರ್ಥಗಳ ಸೇವನೆಯಿಂದ ಜನರು ಅನೇಕ ಬಗೆಯ ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಆದ್ದರಿಂದ ತಂಬಾಕು ಸೇವನೆ ನಿಷೇಧಿಸಿ, ತಂಬಾಕು ರಹಿತ ದೇಶ ಮತ್ತು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಮುಂದಾಗಬೇಕು’ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಎಚ್.ಕೋರಡ್ಡಿ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಆರೋಗ್ಯ ಇಲಾಖೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ‘ವಿಶ್ವ ತಂಬಾಕು ರಹಿತ ದಿನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ತಂಬಾಕು ಮನುಷ್ಯನ ಜೀವನಕ್ಕೆ ಅಪಾಯ ಎಂದು ತಿಳಿದರೂ ಯುವ ಜನತೆ ಆ ಚಟಕ್ಕೆ ಬಿದ್ದು ಹಾಳಾಗುತ್ತಿರುವುದು ಆತಂಕದ ವಿಚಾರ. ಪ್ರತಿ ವರ್ಷ 10 ಲಕ್ಷಕ್ಕಿಂತ ಹೆಚ್ಚು ಜನರು ತಂಬಾಕು ಸಂಬಂಧಿ ರೋಗಗಳಿಂದ ಮರಣ ಹೊಂದುತ್ತಿದ್ದಾರೆ. ಸರ್ಕಾರಗಳು ತಂಬಾಕು ಉತ್ಪನ್ನಗಳ ಬಳಕೆ ಕಡಿಮೆಯಾಗಲಿ ಎಂಬ ಉದ್ದೇಶಕ್ಕೆ ಬೆಲೆ ಏರಿಕೆ ಮಾಡಿದರೂ ತಂಬಾಕು ಸೇವನೆ ಮಾಡುವವರ ಸಂಖ್ಯೆ ಇಳಿಮುಖವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಆರೋಗ್ಯವಂತ ಮನುಷ್ಯ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಲ್ಲ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಅದನ್ನು ಜೋಪಾನ ಮಾಡಿದರೆ ಕುಟುಂಬ ನಿರ್ವಹಣೆ ಚೆನ್ನಾಗಿರುತ್ತದೆ. ತಂಬಾಕು ವ್ಯಸನಕ್ಕೆ ಒಳಗಾದವರು ಸಾವು–ನೋವು ಅನುಭವಿಸಬೇಕಾಗುತ್ತದೆ. ಆದ್ದರಿಂದ ತಂಬಾಕು ಸೇವನೆಯ ಹವ್ಯಾಸ ಹೊಂದಿರುವವರು ಕೆಟ್ಟ ಚಟದಿಂದ ಹೊರ ಬಂದಾಗ ಸುಂದರ ಸಮಾಜ ಸಾಧ್ಯ’ ಎಂದು ಹೇಳಿದರು.

ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಕೆ.ಎನ್. ರೂಪಾ ಮಾತನಾಡಿ, ‘ಕಠಿಣ ಕಾನೂನುಗಳು ಜಾರಿಯಾದಾಗ ಮಾತ್ರ ತಂಬಾಕು ಉತ್ಪನ್ನಗಳ ಸೇವನೆ ನಿಯಂತ್ರಿಸಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಯುವಕರು ಹೆಚ್ಚಾಗಿ ತಂಬಾಕು ಸೇವನೆಯನ್ನು ಚಟವಾಗಿ ರೂಢಿಸಿಕೊಂಡಿದ್ದು, ಧೂಮಪಾನ, ಗುಟ್ಕಾ ಸೇವನೆಯಿಂದ ಅತ್ಯಮೂಲ್ಯ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ’ ಎಂದು ತಿಳಿಸಿದರು.

‘ಶಾಲಾ–ಕಾಲೇಜು, ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು, ಗುಟಕಾ, ಮದ್ಯ, ಮಾದಕ ವಸ್ತುಗಳು ಮಾರಾಟಕ್ಕೆ ನಿರ್ಬಂಧವಿದೆ. ಯಾರಾದರೂ ಮಾರಾಟ ಮಾಡಿದ್ದು ಕಂಡುಬಂದರೆ ಸಾರ್ವಜನಿಕರು ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಮಾರಾಟಗಾರರ ವಿರುದ್ಧ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು’ ಎಂದರು.

ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ.ವಿಜಯ್ ಕುಮಾರ್, ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಚ್ ತಮ್ಮೇಗೌಡ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಎಂ. ರವಿಶಂಕರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕೆ.ಬಾಬು ರೆಡ್ಡಿ, ಜಿಲ್ಲಾ ಆರೋಗ್ಯ ಮತ್ತು ಶಿಕ್ಷಣಾಧಿಕಾರಿ ಮಹೇಶ್ ಉಪಸ್ಥಿತರಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು