ಮಂಗಳವಾರ, ಸೆಪ್ಟೆಂಬರ್ 21, 2021
26 °C
ಈದ್ಗಾ ಮೈದಾನದಲ್ಲಿ ಜಾತ್ರೆಯ ವಾತಾವರಣ; ದಾನ ನೀಡಿದ ಮುಸ್ಲಿಮರು

ಈದ್‌ ಉಲ್‌ ಫಿತ್ರ್: ಸಾಮೂಹಿಕ ಪ್ರಾರ್ಥನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಶಾಂತಿ ಸೌಹಾರ್ದ ಸಾರುವ ಈದ್‌–ಉಲ್‌–ಫಿತ್ರ್‌ ಆಚರಣೆ ಅಂಗವಾಗಿ ಸಾವಿರಾರು ಮುಸ್ಲಿಮರು ಬುಧವಾರ ನಗರದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ರಂಜಾನ್‌ ಮಾಸದಲ್ಲಿ ತಿಂಗಳಕಾಲ ಉಪವಾಸ ಆಚರಣೆ ಮಾಡಿದ್ದ ಮುಸ್ಲಿಮರು ಮಂಗಳವಾರ ವಿಶೇಷ ಪೂಜೆ ಸಲ್ಲಿಸುವ ಮೂಲಕ ರೋಜಾ ಪೂರ್ಣಗೊಳಿಸಿದರು. ಸಂಜೆ ವೇಳೆ ಚಂದ್ರನ ದರ್ಶನ ಮಾಡಿ ಉಪವಾಸ ಅಂತ್ಯಗೊಳಿಸಿದರು. ಹೊಳಲು ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ 10 ಸಾವಿರಕ್ಕೂ ಹೆಚ್ಚು ಮಸ್ಲಿಮರು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.

ಗಾಂಧಿನಗರ, ಬೀಡಿ ಕಾರ್ಮಿಕರ ಕಾಲೊನಿಯಲ್ಲಿ ಭಕ್ತಿಪೂರ್ವಕ ವಾತಾವರಣ ನಿರ್ಮಾಣವಾಗಿತ್ತು. ಮನೆಯ ಮಂದಿಯೆಲ್ಲಾ ಹೊಸ ಉಡುಗೆ ತೊಟ್ಟು ಆಚರಣೆಗೆ ಮತ್ತಷ್ಟು ಮೆರುಗು ತುಂಬಿದರು. ಮಹಿಳೆಯರು ಮನೆಯಲ್ಲಿ ಪ್ರಾರ್ಥನೆ ಸಲ್ಲಿಸಿದರೆ, ಮಕ್ಕಳು ಹಾಗೂ ಪುರುಷರು ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆ ಮುಕ್ತಾಯವಾಗುತ್ತಿದ್ದಂತೆ ಪರಸ್ಪರ ಹಸ್ತಲಾಘವ, ಅಪ್ಪಿಕೊಳ್ಳುವ ಮೂಲಕ ಆಚರಣೆಯ ಶುಭಾಶಯ ಕೋರಿದರು.

ಈದ್ಗಾ ಮೈದಾನ ರಸ್ತೆಯಲ್ಲಿ ಜಾತ್ರೆಯ ವಾತಾವರಣ ಇತ್ತು. ಹಬ್ಬಕ್ಕೆ ಬೇಕಾದ ವಸ್ತುಗಳ ಮಾರಾಟ ಒಂದೆಡೆಯಾದರೆ, ಮಕ್ಕಳಿಗೆ ಬೇಕಾದ ಆಟಿಕೆ, ಜ್ಯೂಸ್ ಹಾಗೂ ಐಸ್‌ಕ್ರೀಮ್ ಮಾರಾಟ ಭರ್ಜರಿಯಾಗಿ ನಡೆಯಿತು. ದಾನ ಮಾಡುವುದು ಈ ಮಾಸದ ಇನ್ನೊಂದು ವಿಶೇಷವಾಗಿದ್ದು, ಹಿಂದೂ ಮುಸ್ಲಿಂ ಎನ್ನದೆ ಎಲ್ಲರಿಗೂ ದಾನ ಮಾಡುವ ದೃಶ್ಯಗಳು ಸಾಮಾನ್ಯವಾಗಿದ್ದವು.

‘ಈದ್‌ ಉಪವಾಸ ವಯಸ್ಕರಿಗೆ ಮತ್ತು ಆರೋಗ್ಯವಂತರಿಗೆ ಕಡ್ಡಾಯವಾಗಿದೆ. ಚಿಕ್ಕ ಮಕ್ಕಳು, ಗರ್ಭಿಣಿಯರು, ಮಾನಸಿಕ ಅಸ್ವಸ್ಥರು, ದೈಹಿಕ ಅಸಮರ್ಥರು, ಬಾಣಂತಿಯರಿಗೆ ವಿನಾಯಿತಿ ನೀಡಲಾಗಿದೆ. ರಂಜಾನ್ ಅವಧಿಯಲ್ಲಿ ಪ್ರತಿದಿನ ಐದು ಬಾರಿ ಪ್ರಾರ್ಥನೆ ಹಾಗೂ ಖುರಾನ್ ಪಠಣ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ’ಎಂದು ಈದ್ಗಾ ಮೈದಾನದ ಜಂಟಿ ಕಾರ್ಯದರ್ಶಿ ರೆಹಮತ್–ಉಲ್ಲಾ–ಷರೀಫ್ ಹೇಳಿದರು.

ಸಾಮೂಹಿಕ ಪ್ರಾರ್ಥನೆ ನಂತರ ಆಶೀರ್ವಚನ ನೀಡಿದ ಮೌಲ್ವಿ ಅಕ್ಬರ್‌ಸಾಬ್ ‘ಮುಸ್ಲಿಮರ ಪಾಲಿಗೆ ರಂಜಾನ್ ಮಾಸ ಅತ್ಯಂತ ಪವಿತ್ರ. ಈ ಮಾಸದಲ್ಲಿ ಸುಳ್ಳು ಹೇಳುವುದು, ಲಾಭ ಮಾಡಿಕೊಳ್ಳುವುದು, ಇನ್ನೊಬ್ಬರಿಗೆ ನೋವು ನೀಡುವುದು, ಕಳ್ಳತನ ಮಾಡುವುದು ಸಲ್ಲದು. ಎಲ್ಲಾ ಬಯಕೆಗಳನ್ನು ಮೂಲದಲ್ಲಿಯೇ ಹತ್ತಿಕ್ಕುವುದೇ ರಂಜಾನ್ ತಿಂಗಳ ಪ್ರಮುಖ ಉದ್ದೇಶವಾಗಿದೆ. ರಂಜಾನ್ ಸಮಯದ ಉಪವಾಸದ ಕಠಿಣ ತರಬೇತಿ ಪಡೆದವರು ವರ್ಷದುದ್ದಕ್ಕೂ ಯಾವ ತಪ್ಪು ಕೆಲಸದ ಬಗ್ಗೆ ಚಿಂತನೆಯನ್ನೂ ಮಾಡುವುದಿಲ್ಲ. ಇದೇ ಅಲ್ಲಾಹನು ತನ್ನ ಮಕ್ಕಳಿಗಾಗಿ ನೀಡಿರುವ ಪಾಠವಾಗಿದೆ’ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು