ಕೆಪಿಎಸ್‌ಸಿ ನೇಮಕ ಸುಗ್ರೀವಾಜ್ಞೆಗೆ ಆತುರ ಸಲ್ಲದು

ಬುಧವಾರ, ಜೂನ್ 19, 2019
32 °C
ಅಕ್ರಮ ಸಾಬೀತಾದ ನಂತರವೂ ಅಂತಹ ನೇಮಕಾತಿಯನ್ನು ಸುಗ್ರೀವಾಜ್ಞೆ ಮೂಲಕ ಸಕ್ರಮ ಮಾಡುವುದು ಸಾರ್ವಜನಿಕವಾಗಿ ತಪ್ಪು ಸಂದೇಶವನ್ನು ರವಾನಿಸುತ್ತದೆ

ಕೆಪಿಎಸ್‌ಸಿ ನೇಮಕ ಸುಗ್ರೀವಾಜ್ಞೆಗೆ ಆತುರ ಸಲ್ಲದು

Published:
Updated:
Prajavani

ಹೈಕೋರ್ಟ್ ತೀರ್ಪಿನಿಂದ ಹುದ್ದೆ ಕಳೆದುಕೊಳ್ಳುವ ಭೀತಿ ಎದುರಿಸುತ್ತಿರುವ ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳಿಗೆ ಸೇವಾ ಭದ್ರತೆ ಒದಗಿಸುವುದಕ್ಕಾಗಿ ಹಾಗೂ ಹಿಂಬಡ್ತಿ ಆತಂಕ ಎದುರಿಸುತ್ತಿರುವ ಅಧಿಕಾರಿಗಳಿಗೆ ರಕ್ಷಣೆ ನೀಡುವುದಕ್ಕಾಗಿ ಸುಗ್ರೀವಾಜ್ಞೆ ಹೊರಡಿಸಲು ರಾಜ್ಯ ಸರ್ಕಾರ ಮುಂದಾಗಿದೆ. 1998ನೇ ಸಾಲಿನ ಕೆಎಎಸ್ ಅಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದಂತೆ ಅನರ್ಹರನ್ನು ಕೈಬಿಟ್ಟು ಅರ್ಹರನ್ನಷ್ಟೇ ನೇಮಕ ಮಾಡಿಕೊಳ್ಳುವಂತೆ ಹೈಕೋರ್ಟ್ ತೀರ್ಪು ನೀಡಿದೆ. ಹೀಗಿದ್ದರೂ ರಾಜ್ಯ ಸರ್ಕಾರವು 1998, 1999 ಹಾಗೂ 2004ರ ಸಾಲಿನಲ್ಲಿ ನೇಮಕವಾದ ಎಲ್ಲರನ್ನೂ ರಕ್ಷಿಸಲು ಮುಂದಾಗಿದೆ. ಇದು ಆತುರದ ನಿರ್ಧಾರ. ಮರುಪರಿಶೀಲನೆ ಮಾಡಬೇಕಾದ ಅಗತ್ಯ ಇದೆ. ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದಂತೆ ಸುಮಾರು ಎರಡು ದಶಕಗಳಿಂದ ಕಾನೂನು ಹೋರಾಟ ನಡೆಯುತ್ತಿದೆ. 1998ರ ಸಾಲಿನ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿರುವುದರಿಂದ 28 ಅಧಿಕಾರಿಗಳನ್ನು ಕೆಲಸದಿಂದ ತೆಗೆಯಬೇಕು. 140 ಮಂದಿಯ ಹುದ್ದೆಗಳನ್ನು ಬದಲಾಯಿಸಬೇಕು ಎಂದು ಹೈಕೋರ್ಟ್ ತೀರ್ಪು ನೀಡಿತ್ತು. ಅನರ್ಹರು ಆಯ್ಕೆಯಾಗಿರುವುದರಿಂದ 1998ನೇ ಸಾಲಿನ ನೇಮಕಾತಿ ಪಟ್ಟಿಯನ್ನು ಪರಿಷ್ಕರಿಸಿ ಅರ್ಹರಾದ 28 ಮಂದಿಗೆ ಉದ್ಯೋಗ ನೀಡಬೇಕು ಎಂದೂ ಹೈಕೋರ್ಟ್ ಸೂಚಿಸಿತ್ತು. ತೀರ್ಪು ಅನುಷ್ಠಾನಗೊಂಡರೆ 7 ಮಂದಿ ಐಎಎಸ್ ಅಧಿಕಾರಿಗಳೂ ಹಿಂಬಡ್ತಿ ಪಡೆಯಬೇಕಾಗುತ್ತದೆ. ಈ ಎಲ್ಲರನ್ನೂ ರಕ್ಷಣೆ ಮಾಡಲು ಈಗ ಸರ್ಕಾರ ಮುಂದಾಗಿದೆ. ನೇಮಕಾತಿ ಪ್ರಾಧಿಕಾರ ಮಾಡಿದ ತಪ್ಪಿಗಾಗಿ ಅಭ್ಯರ್ಥಿಗಳಿಗೆ ಶಿಕ್ಷೆ ವಿಧಿಸುವುದು ಸರಿಯಲ್ಲ ಎಂದು ರಾಜ್ಯ ಸರ್ಕಾರವು ಸುಗ್ರೀವಾಜ್ಞೆಯ ತೀರ್ಮಾನವನ್ನು ಸಮರ್ಥಿಸಿಕೊಂಡಿದೆ. ಅನರ್ಹರನ್ನು ರಕ್ಷಿಸಲು ಹೊರಟಿರುವ ಸರ್ಕಾರ, ತಪ್ಪು ಮಾಡಿದ ನೇಮಕಾತಿ ಪ್ರಾಧಿಕಾರವನ್ನು ಶಿಕ್ಷಿಸುವ ಅಥವಾ ಸುಧಾರಿಸುವ ಯಾವುದೇ ಮಾತನ್ನೂ ಆಡುತ್ತಿಲ್ಲ. ಎರಡು ದಶಕಗಳಿಂದ ಹೋರಾಟ ನಡೆಸಿದ ಅಭ್ಯರ್ಥಿಗಳ ಬಗ್ಗೆಯೂ ಮಾತನಾಡುತ್ತಿಲ್ಲ. ಯಾವುದೇ ನೇಮಕಾತಿ ಪ್ರಕ್ರಿಯೆಯಲ್ಲಿ ನೇಮಕಾತಿ ಪ್ರಾಧಿಕಾರ ಮಾತ್ರ ತಪ್ಪು ಮಾಡಲು ಸಾಧ್ಯವಿಲ್ಲ. ಅಭ್ಯರ್ಥಿಗಳೂ ಅದರಲ್ಲಿ ಕೈಜೋಡಿಸಿರಬೇಕಾಗುತ್ತದೆ. ಇವುಗಳ ಬಗ್ಗೆ ಸರ್ಕಾರವು ಜಾಣಕುರುಡು ಪ್ರದರ್ಶಿಸುತ್ತಿದೆ. ಅಕ್ರಮ ನಡೆದಿದೆ ಎನ್ನುವುದು ಸಾಬೀತಾದ ನಂತರವೂ ಅಂತಹ ನೇಮಕಾತಿಯನ್ನು ಸುಗ್ರೀವಾಜ್ಞೆ ಮೂಲಕ ಸಕ್ರಮ ಮಾಡುವುದು ಸಾರ್ವಜನಿಕವಾಗಿ ತಪ್ಪು ಸಂದೇಶವನ್ನು ರವಾನಿಸುತ್ತದೆ. ಹೈಕೋರ್ಟ್ ತೀರ್ಪಿನಲ್ಲಿರುವ ಅಂಶಗಳಿಗೆ ವಿರುದ್ಧವಾಗಿ ಸುಗ್ರೀವಾಜ್ಞೆ ಹೊರಡಿಸುವುದು ನ್ಯಾಯಾಂಗಕ್ಕೆ ಸಲ್ಲಿಸುವ ಗೌರವ ಅಲ್ಲ. ಅಲ್ಲದೆ, ಈ ಕ್ರಮ  ನ್ಯಾಯಾಂಗ ಮತ್ತು ಕಾರ್ಯಾಂಗದ ಮೇಲೆ ಜನರು ವಿಶ್ವಾಸ ಕಳೆದುಕೊಳ್ಳುವಂತೆಯೂ ಮಾಡುತ್ತದೆ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ತೀರ್ಪುಗಳ ಆಶಯದ ವಿರುದ್ಧ ಸುಗ್ರೀವಾಜ್ಞೆಗಳನ್ನು ತರುತ್ತಾ ಹೋದರೆ ನ್ಯಾಯಾಲಯಗಳ ತೀರ್ಪಿಗೆ ಕಿಮ್ಮತ್ತು ಏನು ಉಳಿಯುತ್ತದೆ? 

ಅಕ್ರಮ ನೇಮಕಾತಿ ಸಕ್ರಮಗೊಳಿಸಲು ಸುಗ್ರೀವಾಜ್ಞೆ ಹೊರಡಿಸುವುದನ್ನು ವಿಧಾನಸಭೆ ಅಧ್ಯಕ್ಷ ರಮೇಶ್ ಕುಮಾರ್ ವಿರೋಧಿಸಿದ್ದಾರೆ. ‘ರಾಜ್ಯ ಸರ್ಕಾರದ ಈ ನಡೆಯ ಬಗ್ಗೆ ಬಹಳಷ್ಟು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆ ಶಾಸಕರ ಅಭಿಪ್ರಾಯವನ್ನಷ್ಟೇ ನಾನು ತಿಳಿಸುತ್ತಿದ್ದೇನೆ’ ಎಂದು ಅವರು ಮುಖ್ಯಮಂತ್ರಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ. ‘ನೌಕರರ ಸೇವಾ ಜೇಷ್ಠತೆಯನ್ನು ಪರಿಗಣಿಸುವಾಗ ರಾಜ್ಯ ಸರ್ಕಾರವು ಜಾಗರೂಕತೆಯಿಂದ ಹೆಜ್ಜೆ ಇಡಬೇಕು. ಸದುದ್ದೇಶದಿಂದ ಮಾಡುವ ಕೆಲಸಗಳಿಂದ ಕೆಲವೊಮ್ಮೆ ನಿರಪರಾಧಿಗಳಿಗೆ ತೊಂದರೆಯಾಗುತ್ತದೆ. ಹಾಗೆ ಆಗದ ಹಾಗೆ ನೋಡಿಕೊಳ್ಳಬೇಕು. ಈ ವಿಷಯದಲ್ಲಿ ಮುಂದಿನ ಹೆಜ್ಜೆ ಇಡುವುದಕ್ಕೆ ಮುನ್ನ ರಾಜ್ಯ ಸರ್ಕಾರವು ಶಾಸಕರ ಅಭಿಪ್ರಾಯಗಳ ಬಗ್ಗೆ ಗಮನ ನೀಡಬೇಕು’ ಎಂದು ಅವರು ಮುಖ್ಯಮಂತ್ರಿಗೆ ಕಿವಿಮಾತು ಹೇಳಿದ್ದಾರೆ. ಮುಖ್ಯಮಂತ್ರಿ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ತರಾತುರಿಯಲ್ಲಿ ನಿರ್ಧಾರ ಕೈಗೊಳ್ಳಬಾರದು. ಕರ್ನಾಟಕ ಲೋಕಸೇವಾ ಆಯೋಗ ಇತ್ತೀಚಿನ ದಿನಗಳಲ್ಲಿ ಉತ್ತಮ ಕಾರಣಗಳಿಗಾಗಿ ಸುದ್ದಿಯಾಗಿದ್ದು ಕಡಿಮೆ. ಬಹಳಷ್ಟು ಬಾರಿ ಅದು ಕೆಟ್ಟ ಕಾರಣಗಳಿಗಾಗಿಯೇ ಸುದ್ದಿಯಾಗುತ್ತಿದೆ. ಆಯೋಗವು ಪದೇ ಪದೇ ತಪ್ಪು ಮಾಡುತ್ತಿರುವುದರಿಂದ ಅದು ವಿಶ್ವಾಸವನ್ನೂ ಕಳೆದುಕೊಂಡಿದೆ. ಲೋಕಸೇವಾ ಆಯೋಗವನ್ನು ಸರಿದಾರಿಗೆ ತರುವುದಕ್ಕಾಗಿಯೇ ಈ ಹಿಂದಿನ ಸರ್ಕಾರವು ಪಿ.ಸಿ.ಹೋಟಾ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಆ ಸಮಿತಿ ನೀಡಿದ ವರದಿಯನ್ನು ರಾಜ್ಯ ಸರ್ಕಾರ ಸಂಪೂರ್ಣವಾಗಿ ಅನುಷ್ಠಾನ ಮಾಡಿಲ್ಲ. ಆ ಮೂಲಕ ಆಯೋಗವನ್ನು ಸರಿದಾರಿಗೆ ತರುವ ಅವಕಾಶದಿಂದಲೂ ಅದು ವಂಚಿತವಾಯಿತು. ಅಕ್ರಮವನ್ನು ಸಕ್ರಮಗೊಳಿಸಲು ಸುಗ್ರೀವಾಜ್ಞೆ ಹೊರಡಿಸಿದರೆ ಅದೇ ಒಂದು ಚಾಳಿ ಆಗಬಹುದು. ಇಂತಹ ನಡೆ, ಸರ್ಕಾರಕ್ಕೆ ಭೂಷಣವಲ್ಲ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 22

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !