ಭಾನುವಾರ, ಸೆಪ್ಟೆಂಬರ್ 20, 2020
23 °C
ಕಿಂಗ್ಸ್ ಕಪ್‌ ಫುಟ್‌ಬಾಲ್‌: ಭಾರತಕ್ಕೆ ಮೂರನೇ ಸ್ಥಾನ

ಸ್ಟಿಮ್ಯಾಚ್‌ ತರಬೇತಿಯಲ್ಲಿ ಮೊದಲ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬುರಿರಾಮ್‌ (ಪಿಟಿಐ): ನೂತನ ಕೋಚ್‌ ಇಗೊರ್‌ ಸ್ಟಿಮ್ಯಾಚ್‌ ನೇತೃತ್ವದಲ್ಲಿ ಭಾರತ ಫುಟ್‌ಬಾಲ್‌ ತಂಡ ಮೊದಲ ಜಯ ಕಂಡಿದೆ. ಕಿಂಗ್ಸ್ ಕಪ್‌ ಟೂರ್ನಿಯಲ್ಲಿ ಆತಿಥೇಯ ಥಾಯ್ಲೆಂಡ್‌ ತಂಡವನ್ನು 1–0 ಗೋಲುಗಳಿಂದ ಸುನಿಲ್‌ ಚೆಟ್ರಿ ಪಡೆ ಸೋಲಿಸಿದೆ. ಆ ಮೂಲಕ ಟೂರ್ನಿಯಲ್ಲಿ ಮೂರನೇ ಸ್ಥಾನ ಪಡೆದಿದೆ.

ಅನಿರುದ್ಧ ಥಾಪಾ ತಂಡದ ಪರ ಏಕೈಕ ಗೋಲು ಗಳಿಸಿದರು. ಸ್ಟಿಮ್ಯಾಚ್‌, ಈ ಪಂದ್ಯಕ್ಕೆ ತಂಡದಲ್ಲಿ ಎಂಟು ಬದಲಾವಣೆಗಳನ್ನು ಮಾಡಿದ್ದರು. ಮುಖ್ಯ ಆಟಗಾರರಾದ ನಾಯಕ ಸುನಿಲ್‌ ಚೆಟ್ರಿ, ಉದಾಂತ ಸಿಂಗ್, ಗುರುಪ್ರೀತ್‌ ಸಿಂಗ್‌ ಸಂಧು ಅವರಿಗೆ ವಿಶ್ರಾಂತಿ ನೀಡಿದ್ದರು.

ಸಂದೇಶ್‌ ಜಿಂಗಾನ್‌ ನಾಯಕತ್ವ ವಹಿಸಿದ್ದರೆ, ರಾಹುಲ್‌ ಭೆಕೆ ಹಾಗೂ ಸುಭಾಶಿಸ್‌ ಬೋಸ್‌ ತಂಡದಲ್ಲಿದ್ದರು. ಮಿಡ್‌ಫೀಲ್ಡರ್‌ ಥಾಪಾ ಅವರು 17ನೇ ನಿಮಿಷ ಗೋಲು ಗಳಿಸಿದರು.

ಥಾಯ್ಲೆಂಡ್‌ ವಿರುದ್ಧ ಭಾರತ ಈ ವರ್ಷ ದಾಖಲಿಸಿದ ಎರಡನೇ ಜಯ ಇದು. ಜನವರಿಯಲ್ಲಿ ಯುಎಇನಲ್ಲಿ ನಡೆದ ಏಷ್ಯಾಕಪ್‌ ಟೂರ್ನಿಯಲ್ಲಿ ಥಾಯ್ಲೆಂಡ್‌ ತಂಡವನ್ನು ಮಣಿಸಿತ್ತು.

ಏಷ್ಯಾಕಪ್‌ ಟೂರ್ನಿಯ ಪಂದ್ಯದಲ್ಲೂ ಥಾಯ್ಲೆಂಡ್‌ ವಿರುದ್ಧ ಗೋಲು ಬಾರಿಸಿದ್ದ ಥಾಪಾ ಇಲ್ಲಿಯೂ ಮಿಂಚಿನ ಆಟವಾಡಿದರು. ಆದಿಲ್‌ ಖಾನ್‌ ನೀಡಿದ ಪಾಸ್‌ನಲ್ಲಿ ಮುನ್ನುಗ್ಗಿದ ಅವರು ಭಾರತಕ್ಕೆ ಮುನ್ನಡೆ ತಂದುಕೊಟ್ಟರು.

ಆದಾಗ್ಯೂ ಆದಿಲ್‌ ಅವರಿಗೆ ಆರನೇ ನಿಮಿಷದಲ್ಲೇ ಗೋಲಿನ ಅವಕಾಶವಿತ್ತು. ಆದರೆ ಅವರು ಗೋಲಿನತ್ತ ಹೆಡ್‌ ಮಾಡಿದ ಚೆಂಡು ಗೋಲುಪೆಟ್ಟಿಗೆಯ ಮೇಲೆ ಹಾದುಹೋಯಿತು. 21ನೇ ನಿಮಿಷ ಥಾಯ್ಲೆಂಡ್‌ ತಂಡದ ನಾಯಕ ದಾಂಗ್ಡಾ ಬಾರಿಸಿದ ಚೆಂಡು ಗೋಲುಪೆಟ್ಟಿಗೆ ಸೇರಿದರೂ ಆಫ್‌ಸೈಡ್‌ ಆಗಿತ್ತು.

ಆ ಬಳಿಕ ಇತ್ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದರೂ ಗೋಲು ದಕ್ಕಲಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು