ಮಂಗಳವಾರ, ಆಗಸ್ಟ್ 3, 2021
21 °C
₹5 ಕೋಟಿ ದಂಡ: ಪ್ರಯಾಣಿಕರು, ಸಿಬ್ಬಂದಿಗೆ ವಿತರಿಸಲು ಎನ್‌ಐಎ ವಿಶೇಷ ನ್ಯಾಯಾಲಯ ಆದೇಶ

ವಿಮಾನ ಅಪಹರಣ ಬೆದರಿಕೆ: ಉದ್ಯಮಿಗೆ ಜೀವಾವಧಿ ಶಿಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಹಮದಾಬಾದ್‌: ಜೆಟ್‌ ಏರ್‌ವೇಸ್‌ ವಿಮಾನ ಅಪಹರಣದ ಭೀತಿ ಸೃಷ್ಟಿಸಿದ್ದ ಮುಂಬೈನ ಉದ್ಯಮಿ ಬಿರ್ಜು ಸಲ್ಲಾ ಅವರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ನ್ಯಾಯಾಲಯ ಸಾಯುವವರೆಗೂ ಜೀವಾವಧಿ ಶಿಕ್ಷೆ ಮತ್ತು ₹5 ಕೋಟಿ ದಂಡ ವಿಧಿಸಿದೆ.

ಅಪಹರಣ ನಿಗ್ರಹ ಕಾಯ್ದೆ–2016ರ ಅಡಿಯಲ್ಲಿ ಬಂಧಿಸಿ, ಶಿಕ್ಷೆಗೆ ಒಳಗಾದ ಮೊದಲ ವ್ಯಕ್ತಿ ಈ ಉದ್ಯಮಿ.

2017ರ ಅಕ್ಟೋಬರ್‌ 30ರಂದು ಬಿರ್ಜು ಸಲ್ಲಾ, ಮುಂಬೈನಿಂದ ದೆಹಲಿಗೆ ತೆರಳುತ್ತಿದ್ದ ಜೆಟ್‌ ಏರ್‌ವೇಸ್‌ನ ವಿಮಾನದ ಶೌಚಾಲಯ ಪೆಟ್ಟಿಗೆಯೊಂದರಲ್ಲಿ ಇಂಗ್ಲಿಷ್‌ ಮತ್ತು ಉರ್ದುನಲ್ಲಿ ವಿಮಾನ ಅಪಹರಿಸುವ ಬೆದರಿಕೆಯ ಸಂದೇಶ ಪತ್ರ ಬರೆದಿಟ್ಟಿದ್ದರು ಎಂದು ಆರೋಪಿಸಲಾಗಿತ್ತು.

‘ವಿಮಾನವನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಕೊಂಡೊಯ್ಯಬೇಕು. ವಿಮಾನ ಇಳಿಸುವ ಪ್ರಯತ್ನ ಮಾಡಿದರೆ ಪ್ರಯಾಣಿಕರು ಸಾವಿಗೀಡಾಗುವ ಶಬ್ದ ಕೇಳಿಸುತ್ತದೆ. ಇದನ್ನು ತಮಾಷೆಯಾಗಿ ತೆಗೆದುಕೊಳ್ಳಬೇಡಿ’ ಎಂದು ಪತ್ರದಲ್ಲಿ ಬರೆದಿದ್ದರು. ಕೊನೆಯಲ್ಲಿ ‘ಅಲ್ಲಾಹು ಶ್ರೇಷ್ಠ’ ಎಂದು ಬರೆಯಲಾಗಿತ್ತು. ಇಂಗ್ಲಿಷ್‌ನಲ್ಲಿ ಬರೆದಿರುವುದನ್ನೇ ಗೂಗಲ್‌ ಅನುವಾದದ ಮೂಲಕ ಉರ್ದುಗೆ ಭಾಷಾಂತರಿಸಲಾಗಿತ್ತು.

ಬೆದರಿಕೆ ಪತ್ರದಿಂದಾಗಿ, ಮಾರ್ಗ ಬದಲಾಯಿಸಿ ಅಹಮದಾಬಾದ್‌ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ವಿಮಾನವನ್ನು ಇಳಿಸಲಾಯಿತು. ಬಳಿಕ, ಸಲ್ಲಾನನ್ನು ಅಹಮದಾಬಾದ್‌ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದರು.

ಈ ಘಟನೆ ಬಳಿಕ ಸಲ್ಲಾಗೆ ದೇಶದಲ್ಲಿ ವಿಮಾನ ಪ್ರಯಾಣ ಕೈಗೊಳ್ಳದಂತೆ ನಿಷೇಧ ಹೇರಲಾಗಿತ್ತು. ಈ ರೀತಿ ’ರಾಷ್ಟ್ರೀಯ ನಿಷೇಧ’ಕ್ಕೆ ಒಳಗಾಗಿದ್ದ ಮೊದಲ ವ್ಯಕ್ತಿ ಇವರಾಗಿದ್ದರು. ಜತೆಗೆ, ಸಲ್ಲಾ ವಿರುದ್ಧ ವಿಮಾನ ಅಪಹರಣ ನಿಗ್ರಹ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಕಳೆದ ವರ್ಷ ಜನವರಿಯಲ್ಲಿ ಎನ್‌ಐಎ, ಸಲ್ಲಾ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು. ಬಂಧನದ ಬಳಿಕ ಒಂದು ಬಾರಿಯೂ ಸಲ್ಲಾಗೆ ಜಾಮೀನು ಸಿಕ್ಕಿರಲಿಲ್ಲ.

ಸಲ್ಲಾ ಪಾವತಿಸುವ ದಂಡದ ಮೊತ್ತವನ್ನು ಆ ದಿನ ವಿಮಾನದಲ್ಲಿದ್ದ ಸಿಬ್ಬಂದಿ ಮತ್ತು ಪ್ರಯಾಣಿಕರಿಗೆ ವಿತರಿಸಲು ವಿಶೇಷ ಎನ್‌ಐಎ ನ್ಯಾಯಾಲಯದ ನ್ಯಾಯಾಧೀಶ ಕೆ.ಎಂ. ದವೆ ಆದೇಶಿಸಿದ್ದಾರೆ.

ಪ್ರೇಯಸಿಗಾಗಿ ಅಪಹರಿಸಿದ್ದ!
ವಿಮಾನ ಅಪರಹರಣ ಬೆದರಿಕೆ ಪತ್ರವನ್ನು ತಾನೇ ಬರೆದಿರುವುದಾಗಿ ಸಲ್ಲಾ ತನಿಖಾಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದ.

ಈ ರೀತಿ ಮಾಡುವುದರಿಂದ, ಜೆಟ್‌ ಏರ್‌ವೇಸ್‌ ದೆಹಲಿಯಿಂದ ಕಾರ್ಯನಿರ್ವಹಿಸುವುದನ್ನು ಸ್ಥಗಿತಗೊಳಿಸುತ್ತದೆ. ಆಗ ದೆಹಲಿಯ ಜೆಟ್‌ ಏರ್‌ವೇಸ್‌ನಲ್ಲಿ ಕೆಲಸ ಮಾಡುವ ತನ್ನ ಪ್ರೇಯಸಿ ಮುಂಬೈಗೆ ಬರುತ್ತಾಳೆ ಎಂದು ಭಾವಿಸಿ ಈ ಕೃತ್ಯವೆಸಗಿರುವುದಾಗಿ ತಿಳಿಸಿದ್ದ. ಈ ಮಹಿಳೆಯೊಂದಿಗೆ ಸಲ್ಲಾ ಸಂಬಂಧ ಹೊಂದಿದ್ದ ಎನ್ನಲಾಗಿದೆ.

ಸಲ್ಲಾಗೆ ಮದುವೆಯಾಗಿದ್ದು, ಇಬ್ಬರು ಗಂಡು ಮಕ್ಕಳಿದ್ದಾರೆ. ಹಿರಿಯ ಮಗ 14 ವರ್ಷದವನಿದ್ದಾನೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು