ಬರಿದಾದ ಅಂತಃಕರಣ ಬೆತ್ತಲಾದ ಮನುಷ್ಯತ್ವ | ಮಾನಸಿಕ ಅಸ್ವಸ್ಥರು ಯಾರು?

ಮಂಗಳವಾರ, ಜೂನ್ 25, 2019
22 °C

ಬರಿದಾದ ಅಂತಃಕರಣ ಬೆತ್ತಲಾದ ಮನುಷ್ಯತ್ವ | ಮಾನಸಿಕ ಅಸ್ವಸ್ಥರು ಯಾರು?

Published:
Updated:
Prajavani

ದಲಿತ ವ್ಯಕ್ತಿಯ ಮೇಲೆ ಮಾರಕ ಹಲ್ಲೆ ನಡೆಸಿ, ಬೆತ್ತಲೆ ಮೆರವಣಿಗೆ ನಡೆಸಿರುವ ಪ್ರಕರಣವು ಸಾರ್ವಜನಿಕ ಜೀವನದಲ್ಲಿ ಮಾನವೀಯ ಮೌಲ್ಯಗಳು ನಶಿಸುತ್ತಿರುವುದಕ್ಕೆ ಹೊಸ ನಿದರ್ಶನದಂತಿದೆ. ಚಾಮರಾಜನಗರ ಜಿಲ್ಲೆಯ, ಗುಂಡ್ಲುಪೇಟೆ ತಾಲ್ಲೂಕಿನ ವೀರನಪುರದಲ್ಲಿ ನಡೆದಿರುವ ಈ ಘಟನೆ, ನಾಗರಿಕ ಸಮಾಜ ತಲೆತಗ್ಗಿಸುವಂತಹದ್ದು. ವ್ಯಕ್ತಿಯೊಬ್ಬನನ್ನು ಬೆತ್ತಲೆಗೊಳಿಸಿ, ಕೈಗೆ ಹಗ್ಗ ಕಟ್ಟಿ ನಡುರಸ್ತೆಯಲ್ಲಿ ನಡೆಸಿಕೊಂಡು ಹೋಗುವಷ್ಟು ಕ್ರೌರ್ಯ ನಮ್ಮ ಸಮಾಜದಲ್ಲಿದೆ ಎನ್ನುವುದು ಆತಂಕಕಾರಿ. ಇಂಥ ಹೀನ ಕೃತ್ಯವನ್ನು ಪ್ರಜ್ಞಾವಂತರೆಲ್ಲ ಒಕ್ಕೊರಲಿನಿಂದ ಖಂಡಿಸಬೇಕು. ಈ ಪ್ರಕರಣದಲ್ಲಿ ಹಲ್ಲೆಗೊಳಗಾಗಿರುವ ವ್ಯಕ್ತಿ ದಲಿತ ಎನ್ನುವುದನ್ನು ಮರೆತು ನೋಡಿದರೂ ಈ ವಿದ್ಯಮಾನವು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಮತ್ತು ಮಾನವೀಯತೆಯ ಮೇಲಿನ ಪ್ರಹಾರವಾಗಿದೆ.

ಘಟನೆಗೆ ಸಂಬಂಧಿಸಿದಂತೆ ಬೇರೆ ಬೇರೆ ರೀತಿಯ ಹೇಳಿಕೆಗಳು ಪ್ರಕಟವಾಗಿವೆ. ಪ್ರತಾಪ್‌ ಎನ್ನುವ ವ್ಯಕ್ತಿ ಮೇಲೆ ಹಲ್ಲೆ ನಡೆದಿರುವುದು ನಿಜ. ಆದರೆ, ಅವರು ದಲಿತ ಎನ್ನುವ ಕಾರಣಕ್ಕಾಗಿ ಹಲ್ಲೆ ನಡೆದಿಲ್ಲ ಎಂದು ವಾದಿಸಲಾಗುತ್ತಿದೆ. ಮಾನಸಿಕ ಅಸ್ವಸ್ಥತೆಯಿಂದಾಗಿ ಪ್ರತಾಪ್‌ ತಾವೇ ಬಟ್ಟೆಗಳನ್ನು ಕಳಚಿ ದೇವಾಲಯದಲ್ಲಿ ಆಶ್ರಯ ಪಡೆದಿದ್ದರು. ಅಲ್ಲಿನ ಕೆಲವು ಪೂಜಾಸಾಮಗ್ರಿಯನ್ನು ಚೆಲ್ಲಾಪಿಲ್ಲಿಗೊಳಿಸಿದ್ದರು ಎನ್ನಲಾಗುತ್ತಿದೆ. ಘಟನೆಯ ಆಯಾಮ ಏನೇ ಇರಲಿ, ವ್ಯಕ್ತಿಯ ಮೇಲೆ ಹಲ್ಲೆ ನಡೆದಿರುವುದು ಹಾಗೂ ಆತನನ್ನು ಅವಮಾನಿಸಿರುವುದನ್ನು ವಿಡಿಯೊ ತುಣುಕುಗಳು ಅನುಮಾನಕ್ಕೆ ಆಸ್ಪದವಿಲ್ಲದಂತೆ ಸ್ಪಷ್ಟಪಡಿಸುತ್ತಿವೆ. ಯಾರಾದರೂ ತಪ್ಪು ಮಾಡಿದಾಗ ಅವರನ್ನು ಪೊಲೀಸರಿಗೆ ಒಪ್ಪಿಸಬೇಕೇ ವಿನಾ, ಕಾನೂನನ್ನು ಕೈಗೆ ತೆಗೆದುಕೊಂಡು ಥಳಿಸುವುದಕ್ಕೆ ಯಾರಿಗೂ ಅಧಿಕಾರ ಇಲ್ಲ. ಬೆತ್ತಲಾಗಿರುವ ವ್ಯಕ್ತಿಯನ್ನು ಸಾರ್ವಜನಿಕರು ಮರಕ್ಕೆ ಬಿಗಿದು ದಂಡಿಸುವುದು, ಕೈಗೆ ಹಗ್ಗ ಬಿಗಿದು ಪ್ರಾಣಿಯಂತೆ ರಸ್ತೆಯಲ್ಲಿ ನಡೆಸಿಕೊಂಡು ಹೋಗುವುದು ಮೃಗೀಯ ನಡವಳಿಕೆಗಳು. ವ್ಯಕ್ತಿ ಮಾನಸಿಕ ಸ್ಥಿಮಿತ ಕಳೆದುಕೊಂಡು ಬೆತ್ತಲಾಗಿದ್ದರೆ, ಬಟ್ಟೆ ತೊಡಿಸುವುದು ನಾಗರಿಕ ಸಮಾಜದ ಕರ್ತವ್ಯ. ರಕ್ಷಣೆ ನೀಡಬೇಕಾದ ಪೊಲೀಸ್‌ ಕೂಡ ಹಲ್ಲೆಗೊಳಗಾದ ವ್ಯಕ್ತಿಯನ್ನು ಸಾರ್ವಜನಿಕವಾಗಿ ಒದೆಯುವ ಮೂಲಕ ಕರ್ತವ್ಯಲೋಪ ಎಸಗಿದ್ದಾರೆ. ಇವೆಲ್ಲ ಘಟನೆಗಳನ್ನು ಮೊಬೈಲ್‌ ಫೋನ್‌ಗಳಲ್ಲಿ ಚಿತ್ರೀಕರಿಸಿ, ಪ್ರಸಾರ ಮಾಡಿರುವುದು ವಿಕೃತ ಮನಃಸ್ಥಿತಿಯ ದ್ಯೋತಕ.

ವೀರನಪುರದ ಘಟನೆಯೊಂದಿಗೆ ದೇಗುಲ ಮತ್ತು ದೇವರನ್ನು ತಳಕು ಹಾಕಲಾಗಿದೆ. ಅಶಕ್ತರು ಹಾಗೂ ಅಸಹಾಯಕರ ಸಾಂತ್ವನದ ನೆಲೆಗಳಾಗಬೇಕಿದ್ದ ಮಂದಿರ ಮತ್ತು ದೈವವು ಪ್ರಸಕ್ತ ಘಟನೆಯಲ್ಲಿ ಹಿಂಸೆಗೆ ಕಾರಣವಾಗಿವೆ. ಬೆತ್ತಲಾಗಿದ್ದ ಪ್ರತಾಪ್‌ ಅವರನ್ನು ಮೊದಲಿಗೆ ಜೈನಮುನಿ ಎಂದು ಕೈಮುಗಿದವರೇ, ಆನಂತರ ಜಾತಿಯ ಹಿನ್ನೆಲೆ ತಿಳಿದು ಥಳಿಸಿದ್ದಾರೆ ಎನ್ನಲಾಗಿದೆ. ಇದು ನಿಜವೇ ಆಗಿದ್ದರೆ ಅಕ್ಷಮ್ಯ. ವ್ಯಕ್ತಿಯೊಬ್ಬ ಮಾನಸಿಕವಾಗಿ ಸ್ವಸ್ಥನಾಗಿ ಇಲ್ಲದಿದ್ದಾಗ, ಆ ಅಸ್ವಸ್ಥತೆ ಆತನ ಕುರಿತು ಕಾಳಜಿಗೆ ಕಾರಣವಾಗಬೇಕೇ ಹೊರತು ಹಲ್ಲೆ ನಡೆಸುವುದಕ್ಕೆ ಪ್ರೇರಣೆಯಾಗಬಾರದು. ಪ್ರತಾಪ್‌ ವಿಷಯದಲ್ಲಂತೂ ಮಾನಸಿಕ ಅಸ್ವಸ್ಥತೆಯ ಕುರಿತ ಹೇಳಿಕೆಗಳು ಅನುಮಾನಕ್ಕೆ ಆಸ್ಪದ ಕಲ್ಪಿಸುವಂತಿವೆ.

ನಡೆದಿರುವ ಹಿಂಸೆ, ನಿಜವಾದ ಮಾನಸಿಕ ಅಸ್ವಸ್ಥರು ಯಾರು ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿದೆ. ಪ್ರತಾಪ್‌, ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು ಹಾಗೂ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದರು ಎನ್ನುವ ಸಂಗತಿಗಳೇ ಅವರು ಮಾನಸಿಕ ಅಸ್ವಸ್ಥ ಎನ್ನುವುದರ ಬಗ್ಗೆ ಅನುಮಾನ ಮೂಡಿಸಿವೆ. ಪ್ರತಾಪ್‌ ಅವರ ಮಾನಸಿಕ ಆರೋಗ್ಯದ ಬಗ್ಗೆ ಜಿಲ್ಲಾಧಿಕಾರಿ, ಪೊಲೀಸ್‌ ಅಧಿಕಾರಿಗಳು ಹಾಗೂ ಗ್ರಾಮಸ್ಥರು ತಜ್ಞರಂತೆ ಮಾತನಾಡುತ್ತಿರುವುದು ಪ್ರಕರಣದ ಏಕಮುಖ ವ್ಯಾಖ್ಯಾನದಂತೆ ಕಾಣಿಸುತ್ತದೆ. ಇದನ್ನು ನಿರ್ಧರಿಸಬೇಕಿರುವುದು ತಜ್ಞ ವೈದ್ಯರೇ ವಿನಾ ಯಾವತ್ತೋ ನೀಡಿದ ಸರ್ಟಿಫಿಕೇಟ್‌ ಅಲ್ಲ. ಹಲ್ಲೆ–ಬೆತ್ತಲೆ ಮೆರವಣಿಗೆಗೆ ಸಂಬಂಧಿಸಿದಂತೆ ಪೊಲೀಸರು ಆರು ಜನರನ್ನು ಬಂಧಿಸಿ, ಆರೋಪಿಗಳ ಮೇಲೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಈ ತನಿಖೆ ವಸ್ತುನಿಷ್ಠವಾಗಿ ನಡೆದು, ಸತ್ಯ ಶೀಘ್ರ ಬೆಳಕಿಗೆ ಬರಬೇಕು. ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವುದು ಸರ್ಕಾರದ ಮತ್ತು ಸಮಾಜದ ಎಲ್ಲ ವರ್ಗಗಳ ಜವಾಬ್ದಾರಿ. ಅಪರಿಚಿತರ ವಿಚಾರದಲ್ಲಿ ಸಾರ್ವಜನಿಕರು ದುಂಡಾವರ್ತಿ ತೋರುವುದನ್ನು ನಿಯಂತ್ರಿಸಲು ಸಮಾಜವನ್ನು ಸಂವೇದನಾಶೀಲಗೊಳಿಸುವ ಅಗತ್ಯವೂ ಇದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 87

  Happy
 • 2

  Amused
 • 1

  Sad
 • 1

  Frustrated
 • 3

  Angry

Comments:

0 comments

Write the first review for this !