ಫುಲ್‌ಮೀಲ್ಸ್ ಡ್ರಾಮಾ

ಭಾನುವಾರ, ಜೂಲೈ 21, 2019
25 °C

ಫುಲ್‌ಮೀಲ್ಸ್ ಡ್ರಾಮಾ

Published:
Updated:
Prajavani

‘ನೋಡ್ಲಾ... ಮಲ್ಯ, ನೀರವ್, ಚೋಕ್ಸಿ ಆಯ್ತು ಈಗ ಇನ್ನೊಬ್ಬ ಪಂಟ್ರು ಜನರ ಮನಸೂರೆಗೊಂಡು ಓಡೋಗವ್ನೆ’ ಅಂದರು ಶಿವಾಜಿನಗರದಲ್ಲಿ ಮಟನ್ ಬಿರಿಯಾನಿ ಬಾಯಿ

ಗಿಟ್ಟುಕೊಳ್ಳುತ್ತಾ ತುರೇಮಣೆ.

‘ಇವರೆಲ್ಲಾ ನಮ್ಮ ಪುಣ್ಯಕೋಟಿಗಳ ಬಾಯಿಗೆ ಮಣ್ಣಾಕಿ ಎಲ್ಲಿಗೆ ಓಡಿ ಹೋಗಿರತರೆ ಸಾರ್?’ ಅಂದೆ ನಾನು.

‘ಬಹುಶಃ ಇವರೆಲ್ಲಾ ಸೇರಿ ಇಂಟರ್‌ನ್ಯಾಷನಲ್ ಮನೆಹಾಳ್ ಏಜೆನ್ಸಿ ಅಂತ ಟೀಂ ಮಾಡ್ತಾ ಇರಬೇಕು ಕಣೋ’ ಅಂದವರೇ ಎದ್ದು ವಿಧಾನಸೌಧದ ಕಡೆಗೆ ಕರೆದೊಯ್ದರು.

ಅಲ್ಲೂ ಗದ್ದಲ ಆರಂಭವಾಗಿತ್ತು. ನನಗ್ಯಾಕೆ ಕೊಟ್ಟಿಲ್ಲ, ನನಗೂ ಕೊಡಬೇಕಾಗಿತ್ತು, ನಾನೇನು ಸೀನಿಯರಲ್ವಾ, ನೀವೇ ಕೊಡಬೇಕಾಗಿತ್ತು, ಎಲ್ಲಿದೆ ನೈತಿಕತೆ, ನಾನು ಹೊಂಟೋಯ್ತಿನಿ ಅಂತ ರೆಬೆಲ್ಲುಗಳು ಉಗ್ರಾವತಾರದಲ್ಲಿ ಕುಣಿಯುತ್ತಿದ್ದರು. ಇದ್ದಕ್ಕಿದ್ದ ಹಾಗೇ ಬಂದ ಸಿದ್ದಣ್ಣಕುಮಾರಣ್ಣ ಇಬ್ಬರನ್ನೂ ಸ್ಟೇಜು ಹಿಂಭಾಗಕ್ಕೆ ಹೊತ್ಕೊಂಡೋದರು.

‘ಇದೇನ್ಸಾ ಏನಂತೆ ಇವರದ್ದು?’ ಅಂದೆ. ‘ಇವರದ್ದೂ ಒಂಥರಾ ಐಎಂಎ ವ್ಯಥೆ ಕಣಪ್ಪಾ, ಪಾಪ! ಜನರ ಸೇವೆ ಮಾಡಿ ಮನಸೂರೆಗೊಳ್ಳಕ್ಕೆ ಮಂತ್ರಿಯಾಗಬೇಕು ಅಂತ ತುಡಿತಾವರೆ. ಈಗ ನೀನು ಒಂದು ಹತ್ತು ಜನ ಹಾಲಿ ಮಂತ್ರಿಗಳ ಹೆಸರೇಳು’ ಅಂದರು ತುರೇಮಣೆ. ಹಾಳಾದ್ದು ಒಂದು ಹೆಸರೂ ಬಾಯಿಗೆ ಬರವಲ್ದು!

ಅಷ್ಟೊತ್ತಿಗೆ ಎಲ್ಲಾ ರೆಬೆಲ್ಲುಗಳೂ ಒಟ್ಟಿಗೆ ‘ಡ್ರಾಮ ಸೀನಿಯರ್ಸ್, ಡ್ರಾಮ ಸೀನಿಯರ್ಸ್, ನಾವು ಹುಟ್ಟಿರದೇ ಮಂತ್ರಿಯಾಗಕೇ!’ ಅಂತ ಗಾನ ಶುರು ಮಾಡಿದ್ದರು. ‘ಬಾಯಲ್ಲಿ ಹೇಳಿ ಕೇಸರಿ’ ಅಂತ ಕೂಗ್ತಾ ಬಂದ ಕೆಲವರು, ಕುಣಿತಿದ್ದೋರ ಅಂಗಿಗೆ ನೋಟು ಸಿಕ್ಕಿಸಿ ಕುಣಿತಕ್ಕೆ ರಂಗೇರಿಸತೊಡಗಿದ್ದರು. ‘ನಮ್ಮ ಕಂಪನೀಗೆ ಬಂದ್ರೆ ಫುಲ್‍ಮೀಲ್ಸ್ ಕೊಡ್ತೀವಿ’ ಅಂತ ಕಣ್ಣು ಹೊಡೆದು ಕರೀತಿದ್ದರು. ಕೆಲವು ರೆಬೆಲ್ಲುಗಳು ಕಣ್ಣೋಟಕ್ಕೆ ಸಿಕ್ಕಿ ಲೀಫ್‌-ಲೋಟಸ್- ಪರ್ಲ್- ಅಂಬ್ರೆಲ್ಲ ಅಂತ ಕಡದು ಹೋಗಕೆ ರೆಡಿಯಾದ್ರು. ಈ ಪಕ್ಷಗಾನವ ನೋಡಲಾರದ ನಾವು ಮರದ ಕೆಳಗೆ ಕುಂತೊ.

‘ನಾನೇನು ಸೀನಿಯರಲ್ಲವಾ. ದೊಡ್ಡೋರಿಗೆ ಬಾಯಿ ಬಿಟ್ಟು ಹೇಳಬೇಕಾ. ನಾನು ರಾಜೀನಾಮೆ ಕೊಟ್ಟಿದ್ದೇ ಅದಕ್ಕೆ’ ಅಂತ ಮರದ ಮೇಲೆ ಕೂತಿದ್ದ ಹಳ್ಳಿ ಹಕ್ಕಿಯೊಂದು ಕಣ್ಣೀರು ಹಾಕುತ್ತಿತ್ತು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !