ಶನಿವಾರ, ಏಪ್ರಿಲ್ 17, 2021
31 °C
ಜುಲೈ 13ರಿಂದ ಹಲವು ತಂಡಗಳಲ್ಲಿ ಪ್ರಯಾಣಕ್ಕೆ ಸಿದ್ಧತೆ

ಕುವೈತ್‌ ಸಂತ್ರಸ್ತರು ಶೀಘ್ರ ತವರಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಉದ್ಯೋಗಕ್ಕಾಗಿ ಕುವೈತ್‌ಗೆ ತೆರಳಿ ವಂಚನೆಗೊಳಗಾಗಿ ಸಂಕಷ್ಟಕ್ಕೆ ಸಿಲುಕಿರುವ 73 ಮಂದಿ ಭಾರತೀಯ ಸಂತ್ರಸ್ತ ನೌಕರರ 44 ಮಂದಿ ಇದೇ 13ರಿಂದ ಹಲವು ತಂಡಗಳಲ್ಲಿ ತಾಯ್ನಾಡಿಗೆ ಮರಳಲಿದ್ದಾರೆ.ಈ ಕಾರ್ಮಿಕರು ಭಾರತಕ್ಕೆ ಹಿಂದಿರುಗಲು ಅಗತ್ಯವಿದ್ದ ಪ್ರಕ್ರಿಯೆಗಳು ಬುಧವಾರ ಸಂಜೆಯ ವೇಳೆಗೆ ಬಹುತೇಕ ಪೂರ್ಣಗೊಂಡಿವೆ.

ಉದ್ಯೋಗವಿಲ್ಲದೆ ಸಂತ್ರಸ್ತರಾಗಿದ್ದ 73 ಮಂದಿ ಪೈಕಿ 10 ಮಂದಿ ಈವರೆಗೂ ಪತ್ತೆಯಾಗಿಲ್ಲ. ಉಳಿದ 63 ಮಂದಿಯಲ್ಲಿ 44 ಮಂದಿ ಸ್ವದೇಶಕ್ಕೆ ಹಿಂದಿರುಗಲು ಅಲ್ಲಿನ ಆಡಳಿತದಿಂದ ಒಪ್ಪಿಗೆ ಪತ್ರ ದೊರೆತಿದೆ. ಟ್ರಾವೆಲ್‌ ಏಜೆನ್ಸಿಯ ಮೂಲಕ ಈ ಕಾರ್ಮಿಕರ ಪ್ರಯಾಣಕ್ಕೆ ವಿಮಾನ ಟಿಕೆಟ್‌ ಕೂಡ ಕಾಯ್ದಿರಿಸಲಾಗಿದೆ. 44 ಮಂದಿಯಲ್ಲಿ ಆರು ಮಂದಿಯ ಮೊದಲ ತಂಡ ಇದೇ 13ರಂದು ವಿಮಾನದ ಮೂಲಕ ಮುಂಬೈಗೆ ಬಂದಿಳಿಯಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ನಾಲ್ವರು ಹಾಗೂ ತಮಿಳುನಾಡಿನ ಇಬ್ಬರು ಮೊದಲ ತಂಡದಲ್ಲಿ ಬರಲಿದ್ದಾರೆ.

ಜುಲೈ 15ರಂದು ಆಂಧ್ರಪ್ರದೇಶದ 15 ಕಾರ್ಮಿಕರು ಹಿಂದಿರುಗುವರು. ಜುಲೈ 17ರಂದು 23 ಜನರ ಮೂರನೇ ತಂಡ ಸ್ವದೇಶಕ್ಕೆ ಬರಲಿದೆ. ಈ ಎಲ್ಲರ ಪ್ರಯಾಣಕ್ಕೆ ಅಗತ್ಯವಿರುವ ಸಿದ್ಧತೆಗಳನ್ನು ಕುವೈತ್‌ನಲ್ಲಿನ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳ ನೆರವಿನಲ್ಲಿ ಅಲ್ಲಿರುವ ಅನಿವಾಸಿ ಭಾರತೀಯ ಉದ್ಯಮಿಗಳ ತಂಡ ಮಾಡಿದೆ.

ಶಾಸಕ, ಉದ್ಯಮಿಗಳ ನೆರವು: ಕುವೈತ್‌ನಲ್ಲಿ ಸಂಕಷ್ಟದಲ್ಲಿರುವ ನೌಕರರ ಬಿಡುಗಡೆಗೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ಹಾಗೂ ಕುವೈತ್‌ನಲ್ಲಿರುವ ಅನಿವಾಸಿ ಭಾರತೀಯ ಉದ್ಯಮಿಗಳು ಶ್ರಮಿಸಿದ್ದಾರೆ.

19 ಮಂದಿಗೆ ಶಾಸಕ ವೇದವ್ಯಾಸ ಕಾಮತ್ ವಿಮಾನ ಪ್ರಯಾಣಕ್ಕೆ ಟಿಕೆಟ್‌ ವ್ಯವಸ್ಥೆ ಮಾಡಿದ್ದಾರೆ. 15 ಮಂದಿಗೆ ಉದ್ಯಮಿ ಆಕಾಶ್ ಪನ್ವರ್, ಇಬ್ಬರಿಗೆ ಉದ್ಯಮಿಗಳಾದ ಮೋಹನದಾಸ್ ಕಾಮತ್ ಮತ್ತು ಬಿನು ಫಿಲಿಪ್, ಇನ್ನಿಬ್ಬರಿಗೆ ಕುವೈಟ್ ಬಂಟರ ಸಂಘದ ನೆರವಿನಿಂದ ಟಿಕೆಟ್ ಖರೀದಿಸಲಾಗಿದೆ. ಉಳಿದ ಆರು ಮಂದಿ ತಮಿಳುನಾಡಿನ ಕಾರ್ಮಿಕರಿಗೆ ಅವರ ಸಂಬಂಧಿಕರು ಟಿಕೆಟ್ ವ್ಯವಸ್ಥೆ ಮಾಡಿದ್ದರು.

ವೀಸಾ ರದ್ದು ಬಾಕಿ: ‘ಈ 44 ಮಂದಿ ಸಂತ್ರಸ್ತರ ವೀಸಾ ರದ್ದುಗೊಳಿಸುವ ಪ್ರಕ್ರಿಯೆ ಗುರುವಾರ ಸಂಜೆಯೊಳಗೆ ಪೂರ್ಣಗೊಳ್ಳಲಿದೆ. ಆ ಬಳಿಕ ವರ ಪಾಸ್‌ಪೋರ್ಟ್‌ಗಳನ್ನು ಹಿಂದಿರುಗಿಸಲಾಗುತ್ತದೆ. ಬಳಿಕ ಅವರ ಪ್ರಯಾಣಕ್ಕೆ ಅನುಮತಿ ದೊರಕುತ್ತದೆ’ ಎಂದು ಕುವೈತ್‌ನಲ್ಲಿರುವ ಉದ್ಯಮಿ ಮೋಹನದಾಸ್‌ ಕಾಮತ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

19 ಮಂದಿ ಸಂಕಷ್ಟದಲ್ಲಿ: 19 ಮಂದಿ ಸ್ವದೇಶಕ್ಕೆ ಮರಳಲು ಉದ್ಯೋಗ ನೀಡಿದ್ದ ಕಂಪೆನಿ ಅನುಮತಿ ನೀಡಿಲ್ಲ. ಹತ್ತು ಮಂದಿಗೆ ಕಂಪೆನಿ ವಿವಿಧ ರೂಪದಲ್ಲಿ ದಂಡ ವಿಧಿಸಿದ್ದು, ಆ ಮೊತ್ತವನ್ನು ಪಾವತಿಸಲು ಅವರಿಗೆ ಸಾಧ್ಯವಾಗಿಲ್ಲ. ತಮಿಳುನಾಡಿನ ಇಬ್ಬರು ಕಾರ್ಮಿಕರಿಗೆ ನೀಡಿದ್ದ ಬೈಕ್‌ಗಳು ಕಳವಾಗಿವೆ. ಇದರಿಂದ ಅವರ ಬಿಡುಗಡೆಗೆ ತೊಡಕಾಗಿದೆ. ಉಳಿದ ಕಾರ್ಮಿಕರ ಗುರುತಿನ ಚೀಟಿಗಳನ್ನು ಕಂಪೆನಿ ಹಿಂದಿರುಗಿಸದಿರುವುದು ಅವರ ಬಿಡುಗಡೆಗೆ ಅಡ್ಡಿಯಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು