‘₹ 80 ಕೋಟಿಗೆ ಬೇಡಿಕೆ ಇಟ್ಟಿದ್ದ ರಮೇಶ ಜಾರಕಿಹೊಳಿ’

ಮಂಗಳವಾರ, ಜೂಲೈ 23, 2019
22 °C
ಪಿರಿಯಾಪಟ್ಟಣ ಶಾಸಕ ಮಹದೇವ್ ಆರೋ‍ಪ

‘₹ 80 ಕೋಟಿಗೆ ಬೇಡಿಕೆ ಇಟ್ಟಿದ್ದ ರಮೇಶ ಜಾರಕಿಹೊಳಿ’

Published:
Updated:
Prajavani

ಮೈಸೂರು: ‘ಶಾಸಕ ರಮೇಶ ಜಾರಕಿಹೊಳಿ ಅವರು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ₹ 80 ಕೋಟಿ ನೀಡಿದರೆ ನಿಮ್ಮ ಜತೆ ಇರುವುದಾಗಿ ನನ್ನ ಎದುರಿಗೇ ಹೇಳಿದ್ದರು’ ಎಂದು ಪಿರಿಯಾಪಟ್ಟಣದ ಜೆಡಿಎಸ್‌ ಶಾಸಕ ಕೆ.ಮಹದೇವ್‌ ಗಂಭೀರ ಆರೋಪ ಮಾಡಿದ್ದಾರೆ.

ಚಿಟ್ಟೇನಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘ಎಲ್ಲ ಶಾಸಕರನ್ನು ಮುಖ್ಯಮಂತ್ರಿ ಒಟ್ಟಿಗೇ ಕರೆದೊಯ್ಯಬೇಕು; ಇಲ್ಲದಿದ್ದರೆ ಹಣದ ಬೇಡಿಕೆ ಇಡುತ್ತಾರೆ. ದುಡ್ಡು ಕೊಡದಿದ್ದರೆ ರಾಜೀನಾಮೆ ಕೊಡುತ್ತೇನೆ ಎಂದು ಕೆಲವರು ಮುಖ್ಯಮಂತ್ರಿ ಅವರನ್ನು ಬೆದರಿಸುವ ಕೆಲಸ ಮಾಡುತ್ತಿದ್ದಾರೆ’  ಎಂದು ಅವರು ಹೇಳಿದ್ದಾರೆ.

₹ 40 ಕೋಟಿ ಆಮಿಷ: ‘ಬಿಜೆಪಿಯವರು ನನಗೆ ₹ 30 ಕೋಟಿಯಿಂದ ₹ 40 ಕೋಟಿ ಕೊಡುವ ಆಮಿಷ ಒಡ್ಡಿದ್ದರು. ಮೂರು ಸಲ ಹಣ ತಂದು ನನ್ನ ಕೊಠಡಿಯಲ್ಲಿಟ್ಟಿದ್ದರು. ಹಣ ತೆಗೆದುಕೊಂಡು ಹೋಗುತ್ತೀರೋ ಅಥವಾ ಎಸಿಬಿಗೆ ದೂರು ನೀಡಬೇಕೋ ಎಂದು ಅವರಿಗೆ ಎಚ್ಚರಿಕೆ ಕೊಟ್ಟಿದ್ದೆ’ ಎಂದಿದ್ದಾರೆ.

‘₹ 40 ಕೋಟಿ ತೆಗೆದುಕೊಂಡು ಪಿರಿಯಾಪಟ್ಟಣ ಕ್ಷೇತ್ರ ಹಾಗೂ ರಾಜಕೀಯವನ್ನೇ ಬಿಟ್ಟು ಎಲ್ಲಾದರೂ ನೆಮ್ಮದಿಯಿಂದ ಇರಬಹುದಿತ್ತು. ಆದರೆ ನನ್ನನ್ನು ಹಣಕ್ಕೆ ಮಾರಿಕೊಳ್ಳಬಾರದು ಎಂಬುದು ನನ್ನ ನಿರ್ಧಾರ. ನಾವು ಸತ್ತಾಗ ದೇಹಕ್ಕೆ ಮಣ್ಣು ಹಾಕಿಕೊಂಡು ಹೋಗುವುದು. ಹಣ ಹಾಕಿಕೊಂಡು ಹೋಗುವುದಿಲ್ಲ’ ಎಂದು ಹೇಳಿರುವುದು ವಿಡಿಯೊದಲ್ಲಿದೆ.

ಮಾತನಾಡಿದ್ದು ನಿಜ: ‘ಚಿಟ್ಟೇನಹಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾನು ಆ ರೀತಿ ಹೇಳಿಕೆ ನೀಡಿದ್ದು ನಿಜ. ಹಳ್ಳಿಗಳಲ್ಲಿ ಮಾತನಾಡಿದ್ದನ್ನು ನೀವು ಅಷ್ಟು ಸೀರಿಯಸ್ಸಾಗಿ ಏಕೆ ತೆಗೆದುಕೊಳ್ಳುತ್ತೀರಿ’ ಎಂದು ಮಹದೇವ್‌ ಅವರು ಬುಧವಾರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ್ದಾರೆ.

‘ಪಕ್ಷ ಬಿಡುವುದಾಗಿ ನಾನು ಯಾರಿಗೂ ಹೇಳಿಲ್ಲ. ಆದರೆ ಮಾಧ್ಯಮಗಳು ಸುಳ್ಳು ಸುದ್ದಿ ಬಿತ್ತರಿಸುತ್ತಿವೆ. ಸಾರ್ವಜನಿಕ ಸಭೆಗಳಲ್ಲಿ ಮಾತನಾಡುವ ವಿಷಯಗಳನ್ನು ಅತಿರಂಜಿತವಾಗಿ ತೋರಿಸುತ್ತಿವೆ. ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಮತ್ತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ನಾನು ಎಂದೂ ದ್ರೋಹ ಬಗೆಯುವುದಿಲ್ಲ’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !