ಶುಕ್ರವಾರ, ಏಪ್ರಿಲ್ 23, 2021
23 °C
ಜಂಬೂ ದ್ವೀಪ ಜನಸೇವಾ ಸಂಘದ ವತಿಯಿಂದ ‘ನೃತ್ಸೋತ್ಸವ- 2019’ ಕಾರ್ಯಕ್ರಮ

ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಮೂಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಪೋಷಕರು ಮಕ್ಕಳಿಗೆ ಚಿಕ್ಕಂದಿನಿಂದಲೇ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳ ಬಗ್ಗೆ ಆಸಕ್ತಿ ಮೂಡಿಸಬೇಕು. ಸಂಗೀತ, ನೃತ್ಯ, ಸಾಹಿತ್ಯ, ಕಥೆ, ಕಾದಂಬರಿ ಓದುವ ಹವ್ಯಾಸವನ್ನು ರೂಢಿಸಬೇಕು’ ಎಂದು ಹಿರಿಯ ಕವಿ ಕಾಗತಿ ವೆಂಕಟರತ್ನಂ ತಿಳಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ಜಂಬೂ ದ್ವೀಪ ಜನಸೇವಾ ಸಂಘದ 5ನೇ ವರ್ಷದ ವಿಶ್ವ ಪರಿಸರ ದಿನ ಹಾಗೂ ವಿಶ್ವ ನೃತ್ಯದಿನ ಪ್ರಯುಕ್ತ ಆಯೋಜಿಸಿದ್ದ ‘ನೃತ್ಸೋತ್ಸವ- 2019’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇತ್ತೀಚೆಗೆ ಅಭಿವೃದ್ಧಿ ಹೆಸರಿನಲ್ಲಿ ಪರಿಸರ ಹನನ ಹೆಚ್ಚಾಗಿದೆ. ಇದರ ಪರಿಣಾಮ ಪರಿಸರ ಮಾಲಿನ್ಯ ಉಲ್ಭಣಗೊಳ್ಳುತ್ತಿದೆ. ಈ ಬಗ್ಗೆ ಪ್ರತಿಯೊಬ್ಬರೂ ಗಂಭೀರ ಚಿಂತನೆ ಮಾಡಬೇಕಿದೆ. ನಾವು ಅಂಗಡಿಗೆ ತರಕಾರಿ ಹಾಗೂ ವಿವಿಧ ಪದಾರ್ಥಗಳನ್ನು ಖರೀದಿಸಲು ಹೋದಾಗ ಮನೆಯಿಂದ ಒಂದು ಬಟ್ಟೆ ಚೀಲವನ್ನು ತೆಗೆದುಕೊಂಡು ಹೋಗುವುದು ರೂಢಿಸಿಕೊಂಡು ಪ್ಲಾಸ್ಟಿಕ್‌ ಬ್ಯಾಗ್‌ಗಳ ಬಳಕೆ ಕಡಿಮೆ ಮಾಡಬೇಕು’ ಎಂದು ಹೇಳಿದರು.

‘ಪರಿಸರ ಸಂರಕ್ಷಣೆ ಎಲ್ಲರ ಹೊಣೆಯಾಗಿದೆ. ಇಂದಿನ ಶುದ್ಧ ಪರಿಸರವನ್ನು ಉಳಿಸಿ, ಬೆಳೆಸಿ ಮುಂದಿನ ಜನಾಂಗಕ್ಕೆ ಹಸ್ತಾಂತರಿಸುವುದು ಮಹತ್ವದ ಜವಾಬ್ದಾರಿ. ಇದನ್ನು ಎಲ್ಲರೂ ಪ್ರಾಮಾಣಿಕವಾಗಿ ನಿರ್ವಹಿಸಬೇಕಿದೆ. ಸಾಲು ಮರದ ತಿಮ್ಮಕ್ಕ ಅವರ ಮಾದರಿಯಲ್ಲಿ ಪ್ರತಿಯೊಬ್ಬರೂ ಗಿಡ ನೆಟ್ಟು, ಪೋಷಿಸುವುದನ್ನು ಜೀವನದ ಭಾಗವಾಗಿ ರೂಢಿಸಿಕೊಳ್ಳಬೇಕು. ಹೂ, ಹಣ್ಣಿನ ಗಿಡಗಳನ್ನು ಬೆಳೆಸುವುದರಿಂದ ಪಕ್ಷಿ, ಪ್ರಾಣಿ ಸಂಕುಲದ ಹಸಿವನ್ನು ನೀಗಬಹುದು’ ಎಂದರು.

‘ಇವತ್ತು ನಮ್ಮ ಭಾಗದಲ್ಲಿ ಪರಿಸರ ಮಾಲಿನ್ಯ ಹೆಚ್ಚು ಕಂಡುಬರುತ್ತಿದೆ. ಪರಿಣಾಮ, ಹಲವು ಸಾಂಕ್ರಾಮಿಕ ರೋಗಗಳು ಕಾಡತೊಡಗಿದೆ. ಹಾಗಾಗಿ, ಪ್ರತಿಯೊಬ್ಬರು ಮನೆಗೊಂದರಂತೆ ಗಿಡ ನೆಟ್ಟು, ಅದಕ್ಕೆ ನೀರು ಹಾಕಿ ಪೋಷಿಸಬೇಕು. ಪರಿಸರ ಉಳಿಸಿ ಬೆಳೆಸುವ ಮೂಲಕ ಮುಂದಿನ ಭವಿಷ್ಯದಲ್ಲಿ ಎದುರಾಗುವ ಅನೇಕ ಅಪಾಯಗಳನ್ನು ತಪ್ಪಿಸಬಹುದು’ ಎಂದು ಹೇಳಿದರು.

ಅಬಕಾರಿ ಇಲಾಖೆ ಉಪ ಅಧೀಕ್ಷಕ ಟಿ.ಬಿ ಯೋಗಾನಂದ, ಕವಿ ಪ್ರೆಸ್ ಸುಬ್ಬರಾಯಪ್ಪ, ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಅಧ್ಯಕ್ಷ ಎಂ.ಚಲಪತಿಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ನಾಗಭೂಷಣರೆಡ್ಡಿ, ಬಿಜೆಪಿ ಜಿಲ್ಲಾ ಘಟಕದ ಮಹಿಳಾ ಕಾರ್ಯದರ್ಶಿ ಪ್ರೇಮಲೀಲಾ ವೆಂಕಟೇಶ್, ಸಾಹಿತಿ ಲತಾ ಮೋಹನ್, ಜಂಬೂ ದ್ವೀಪ ಜನಸೇವಾ ಸಂಘ ಸಂಚಾಲಕ ರಮಣ್ ಅಕೇಶ್ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.