ಶನಿವಾರ, ಏಪ್ರಿಲ್ 17, 2021
32 °C
ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಎಸ್‌. ಕುಂದರ್‌

ಸಂತ್ರಸ್ತೆಗೆ ಹೊರ ಜಿಲ್ಲೆಯಲ್ಲಿ ಶಿಕ್ಷಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಪುತ್ತೂರು ತಾಲ್ಲೂಕಿನಲ್ಲಿ ನಡೆದಿರುವ ಸಾಮೂಹಿಕ ಅತ್ಯಾಚಾರ ‍ಪ್ರಕರಣದ ಸಂತ್ರಸ್ತೆಗೆ ಹೊರ ಜಿಲ್ಲೆಯಲ್ಲಿ ಶಿಕ್ಷಣ ಮುಂದುವರಿಸಲು ಅವಕಾಶ ಕಲ್ಪಿಸಲು ರಾಷ್ಟ್ರೀಯ ಮಹಿಳಾ ಆಯೋಗ ಕ್ರಮ ಕೈಗೊಳ್ಳಲಿದೆ ಎಂದು ಆಯೋಗದ ಸದಸ್ಯೆ ಶ್ಯಾಮಲಾ ಎಸ್‌. ಕುಂದರ್‌ ತಿಳಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ದಕ್ಷಿಣ ಕನ್ನಡ ಎಸ್‌ಪಿ ಬಿ.ಎಂ.ಲಕ್ಷ್ಮೀಪ್ರಸಾದ್‌ ಬಾಬು ಅವರಿಂದ ಮಾಹಿತಿ ಪಡೆದ ಬಳಿಕ ಸಂತ್ರಸ್ತೆಯನ್ನು ಭೇಟಿಮಾಡಿದರು. ನಗರಕ್ಕೆ ಹಿಂದಿರುಗಿದ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

‘ಸಂತ್ರಸ್ತ ವಿದ್ಯಾರ್ಥಿನಿ ಶಿಕ್ಷಣವನ್ನು ನಿಲ್ಲಿಸುವ ತೀರ್ಮಾನಕ್ಕೆ ಬಂದಿದ್ದಳು. ಈಗ ಆಕೆಯ ಮನವೊಲಿಸಿದ್ದೇವೆ. ಪ್ರಕರಣದಿಂದಾಗಿ ಶಿಕ್ಷಣಕ್ಕೆ ಅಡ್ಡಿಯಾಗದಂತೆ ಸೌಲಭ್ಯ ಕಲ್ಪಿಸುವುದು ಆಡಳಿತದ ಜವಾಬ್ದಾರಿ. ಈ ದಿಸೆಯಲ್ಲಿ ಹೊರ ಜಿಲ್ಲೆಯಲ್ಲಿ ಆಕೆಯ ಶಿಕ್ಷಣಕ್ಕೆ ವ್ಯವಸ್ಥೆ ಮಾಡುವಂತೆ ಸಂಬಂಧಿಸಿದ ಇಲಾಖೆಗಳಿಗೆ ಆಯೋಗ ನಿರ್ದೇಶನ ನೀಡಿದೆ’ ಎಂದರು.

‘ತನ್ನ ಮಗಳು ಅಧಿಕಾರಿಯ ಹುದ್ದೆಗೇರಬೇಕು ಎಂದು ಸಂತ್ರಸ್ತೆಯ ತಾಯಿ ಬಯಸಿದ್ದರು. ಆದರೆ, ಆಕೆಯ ಈಗಿನ ಸ್ಥಿತಿ ಕಂಡು ಕಂಗೆಟ್ಟಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ತಾಯಿ ಯೋಚಿಸುತ್ತಿದ್ದರು. ಅಂತಹ ಯೋಚನೆ ಮಾಡದಂತೆ ಕಿವಿಮಾತು ಹೇಳಿದ್ದೇನೆ’ ಎಂದು ತಿಳಿಸಿದರು.

ಏಪ್ರಿಲ್‌ 3ರಂದು ಅತ್ಯಾಚಾರ ಪ್ರಕರಣ ನಡೆದಿತ್ತು. ಅಂದಿನಿಂದಲೇ ಸಂತ್ರಸ್ಥೆ ಖಿನ್ನತೆಗೆ ಒಳಗಾಗಿದ್ದಳು ಎಂಬ ಮಾಹಿತಿ ಲಭಿಸಿದೆ. ವಿಡಿಯೊ ವೈರಲ್‌ ಆದ ಬಳಿಕ ಆಕೆಯ ತಾಯಿ ಮತ್ತು ತಮ್ಮ ಕೂಡ ಖಿನ್ನತೆಗೊಳಗಾಗಿದ್ದಾರೆ. ಸಂತ್ರಸ್ತೆಯ ತಂದೆ ಹಲವು ವರ್ಷಗಳ ಹಿಂದೆಯೇ ಕುಟುಂಬವನ್ನು ತ್ಯಜಿಸಿ ಹೋಗಿದ್ದಾರೆ. ಈಗ ಕುಟುಂಬದಲ್ಲಿ ತೀರಾ ಸಂಕಷ್ಟದ ಸ್ಥಿತಿ ಇದೆ ಎಂದು ಹೇಳಿದರು.

ಸಂತ್ರಸ್ತೆ ಮತ್ತು ಆಕೆಯ ಕುಟುಂಬದ ಸದಸ್ಯರನ್ನು ನಿತ್ಯವೂ ಆಟೊದಲ್ಲಿ ಕೌನ್ಸೆಲಿಂಗ್‌ಗೆ ಕರೆದೊಯ್ಯಲಾಗುತ್ತಿತ್ತು. ಈ ಸಮಯದಲ್ಲಿ ಮುಜುಗರ ಎದುರಿಸುತ್ತಿರುವುದಾಗಿ ಅವರು ಹೇಳಿದ್ದಾರೆ. ಆದ್ದರಿಂದ ತಜ್ಞರು ಅವರ ಮನೆಗೆ ಬಂದು ಕೌನ್ಸೆಲಿಂಗ್‌ ಮಾಡುವ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಸಂತ್ರಸ್ತೆಗೆ ಸಮಾಜ ಕಲ್ಯಾಣ ಇಲಾಖೆಯಿಂದ ₹ 4,12,250 ಮೊತ್ತದ ಪರಿಹಾರ ವಿತರಣೆ ಮಾಡಲಾಗುತ್ತಿದೆ. ಚೆಕ್‌ ಸಿದ್ಧವಾಗಿದ್ದು, ಒಂದೆರಡು ದಿನಗಳಲ್ಲಿ ಹಣ ಆಕೆಯ ಖಾತೆಗೆ ವರ್ಗಾವಣೆ ಆಗಲಿದೆ. ಮುಂದಿನ ದಿನಗಳಲ್ಲಿ ಎರಡನೇ ಕಂತು ಪಾವತಿಸಲಾಗುತ್ತದೆ. ಸಂತ್ರಸ್ತರ ಪರಿಹಾರ ನಿಧಿಯಿಂದಲೂ ನೆರವು ಒದಗಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ವಿವರ ನೀಡಿದರು.

ಸ್ವಯಂಪ್ರೇರಿತ ಪ್ರಕರಣ: ಸಾಮೂಹಿಕ ಅತ್ಯಾಚಾರದ ಘಟನೆಗೆ ಸಂಬಂಧಿಸಿದಂತೆ ಆಯೋಗವು ಸ್ವಯಂಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡಿದೆ. ಪುತ್ತೂರಿನಲ್ಲಿ ಶುಕ್ರವಾರ ನಡೆದ ಅತ್ಯಾಚಾರ ಪ್ರಕರಣದ ಬಗ್ಗೆಯೂ ಪೊಲೀಸರಿಂದ ಮಾಹಿತಿ ಪಡೆಯಲಾಗಿದೆ ಎಂದು ಶ್ಯಾಮಲಾ ಕುಂದರ್‌ ತಿಳಿಸಿದರು.

ಸಂತ್ರಸ್ತೆ ಓದುತ್ತಿದ್ದ ಕಾಲೇಜಿಗೂ ಭೇಟಿನೀಡಿ ಮಾಹಿತಿ ಕಲೆಹಾಕಲಾಗಿದೆ. ವಿದ್ಯಾರ್ಥಿಗಳು ಮೊಬೈಲ್‌ ಬಳಸುವುದನ್ನು ನಿರ್ಬಂಧಿಸಲು ಆಡಳಿತ ಮಂಡಳಿಗೆ ಸೂಚಿಸಲಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಪರಿಣಾಮದ ಕುರಿತು ಜಾಗೃತಿ ಮೂಡಿಸಲು ಕಾರ್ಯಕ್ರಮ ರೂಪಿಸುವಂತೆ ಸಂಬಂಧಿಸಿದ ಇಲಾಖೆಗಳಿಗೆ ಆಯೋಗ ನಿರ್ದೇಶನ ನೀಡಲಿದೆ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು