ಶನಿವಾರ, ಏಪ್ರಿಲ್ 17, 2021
23 °C
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ನೌಕರರಿಂದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ

ಸರ್ಕಾರದ ಕ್ರಮಕ್ಕೆ ತೀವ್ರ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಅಂಗನವಾಡಿಯಲ್ಲಿಯೇ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿಗಳನ್ನು ಆರಂಭಿಸಬೇಕು ಎಂಬುದು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ನೌಕರರು ಬುಧವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಜಿ.ಎಂ.ಲಕ್ಷ್ಮೀದೇವಮ್ಮ, ‘ರಾಜ್ಯ ಸರ್ಕಾರ ಅಂಗನವಾಡಿ ಕೇಂದ್ರಗಳನ್ನು ಮಕ್ಕಳನ್ನು ಆಕರ್ಷಿಸುವ ಕೇಂದ್ರಗಳನ್ನಾಗಿ ಮಾಡಬೇಕಿತ್ತು. ಬದಲಾಗಿ ಸರ್ಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿಗಳನ್ನು ಆರಂಭಿಸುವ ಮೂಲಕ ಬಲಹೀನಗೊಳಿಸಲು ಹೊರಟಿದೆ’ ಎಂದು ಆರೋಪಿಸಿದರು.

‘ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೆಳೆಯುವ ಉದ್ದೇಶಕ್ಕಾಗಿ ರಾಜ್ಯ ಸರ್ಕಾರ 65 ಸಾವಿರ ಅಂಗನವಾಡಿ ಕೇಂದ್ರಗಳನ್ನು ಕಡೆಗಣಿಸಿದೆ. ಇದರಿಂದ ಅಂಗನವಾಡಿ ವ್ಯವಸ್ಥೆಗೆ ಧಕ್ಕೆಯಾಗಲಿದೆ. ಹೀಗಾಗಿ ಸರ್ಕಾರ ಈ ನೀತಿಯನ್ನು ಸಂಘ ತೀವ್ರವಾಗಿ ಖಂಡಿಸುತ್ತದೆ. ಹೀಗಾಗಿ ಸರ್ಕಾರ ಕೂಡಲೇ ಸರ್ಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿಗಳನ್ನು ಆರಂಭಿಸುವುದು ನಿಲ್ಲಿಸಬೇಕು’ ಎಂದು ಆಗ್ರಹಿಸಿದರು.

‘ಅಂಗನವಾಡಿ ನೌಕರರಿಗೆ ಸೇವಾ ಜೇಷ್ಠತೆ ಆಧಾರದಲ್ಲಿ ತಿಂಗಳಿಗೆ ₹18 ಸಾವಿರ ಕನಿಷ್ಠ ವೇತನ ನೀಡಬೇಕು. ಮಾತೃಪೂರ್ಣ ಯೋಜನೆಯ ಬಳಿಕ ಸಹಾಯಕಿಯರ ಕೆಲಸ ದುಪ್ಪಟ್ಟು ಆಗಿದೆ. ಹೀಗಾಗಿ ಅವರ ಗೌರವ ಧನವನ್ನು ಏರಿಕೆ ಮಾಡಬೇಕು. ಈಗಿರುವ ನಿವೃತ್ತಿ ಸೌಲಭ್ಯ ಬದಲಾಯಿಸಿ ಹೊಸ ಪಿಂಚಣಿ ಯೋಜನೆ ಮಾನದಂಡಗಳನ್ನು ಅನುಸರಿಸಬೇಕು. ನಿವೃತ್ತಿ ಹೊಂದಿದ ನೌಕರರಿಗೆ ತಿಂಗಳಿಗೆ ಕನಿಷ್ಠ ₹3 ಸಾವಿರ ಪಿಂಚಣಿ ನೀಡಬೇಕು’ ಎಂದು ಒತ್ತಾಯಿಸಿದರು.

‘ಮೇಲ್ವಿಚಾರಕಿಯಾಗಿ ಮುಂಬಡ್ತಿ ಹೊಂದುವ ಹುದ್ದೆಗಳನ್ನು ಸಂಪೂರ್ಣವಾಗಿ ಅಂಗನವಾಡಿ ನೌಕರರಿಗೆ ಕೊಡಬೇಕು. ಕೇಂದ್ರ ಸರ್ಕಾರದ ಸುತ್ತೋಲೆಯಂತೆ ಶೇ 50ರಷ್ಟು ಹುದ್ದೆಗಳಿಗೆ ತಕ್ಷಣವೇ ಮುಂಬಡ್ತಿ ಪ್ರಕ್ರಿಯೆ ಆರಂಭಿಸಬೇಕು. ಅಂಗನವಾಡಿ ಸಹಾಯಕಿ ಕಾರ್ಯಕರ್ತೆಯಾಗಿ ಮುಂಬಡ್ತಿ ಪಡೆಯಲು ಇರುವ ವಯಸ್ಸಿನ ಮಿತಿ ಸಡಿಲಗೊಳಿಸಬೇಕು’ ಎಂದು ತಿಳಿಸಿದರು.

ಸಿಐಟಿಯು ಜಿಲ್ಲಾ ಘಟಕದ ಕಾರ್ಯದರ್ಶಿ ಸಿದ್ಧಗಂಗಪ್ಪ ಮಾತನಾಡಿ, ‘ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಿಗೆ ಶಿಸ್ತು ಪ್ರಾಧಿಕಾರದ ಅಧಿಕಾರ ನೀಡಿದ್ದು ಅಂಗನವಾಡಿ ನೌಕರರಲ್ಲಿ ಭೀತಿ ಮೂಡಿಸಿದೆ. ಆದ್ದರಿಂದ ಇಲಾಖೆಯ ಅಧಿಕಾರಿಗಳನ್ನು ಹೊರತುಪಡಿಸಿ ಉಳಿದವರನ್ನು ಈ ಜವಾಬ್ದಾರಿಯಿಂದ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು.

‘ಅನುಕಂಪದ ಆಧಾರದ ಕೆಲಸ ನೀಡುವ ಷರತ್ತನ್ನು ನೌಕರರ ಕುಟುಂಬದವರಿಗೆ ಎಂದು ಬದಲಾಯಿಸಬೇಕು. ಖಾಲಿ ಇರುವ ಸಹಾಯಕಿ ಮತ್ತು ಕಾರ್ಯಕರ್ತೆಯರ ಹುದ್ದೆಗಳನ್ನು ಭರ್ತಿ ಮಾಡಬೇಕು. ವಿವಿಧ ಯೋಜನೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಕಾಯಂ ಆಗಿ ನೇಮಕ ಮಾಡಬೇಕು. ಅಂಗನವಾಡಿ ಕಾರ್ಯಕರ್ತೆಯರಿಗೆ ಸೇವಾ ನಿಯಮಾವಳಿ ರಚಿಸಬೇಕು. ಕೇಂದ್ರ ಸರ್ಕಾರ ಕಡಿತ ಮಾಡಿರುವ ಅನುದಾನ ವಾಪಸ್ ನೀಡಬೇಕು’ ಎಂದು ಹೇಳಿದರು.

‘ಕರ್ತವ್ಯದ ಸಂದರ್ಭದಲ್ಲಿ ಉಂಟಾಗುವ ಅಪಘಾತಗಳಿಗೆ ಪರಿಹಾರ ನೀಡಬೇಕು. ಒಂದು ಕಡೆ 5 ವರ್ಷ ಪೂರೈಸಿದ ಮೇಲ್ವಿಚಾರಕಿಯನ್ನು ಕಡ್ಡಾಯವಾಗಿ ವರ್ಗಾವಣೆ ಮಾಡಬೇಕು. ಮೂರು ತಿಂಗಳಿಂದ ಬಾಕಿ ಇರುವ ಮೊಟ್ಟೆ, ತರಕಾರಿ, ಗ್ಯಾಸ್ ಬಿಲ್ ಕೂಡಲೇ ಪಾವತಿ ಮಾಡಬೇಕು. ಎರಡು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಸಹಾಯಕಿರ ನೇಮಕಾತಿಯನ್ನು ಕೂಡಲೇ ಆರಂಭಿಸಬೇಕು’ ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಕೆ.ರತ್ನಮ್ಮ, ಖಜಾಂಚಿ ವೆಂಕಟಲಕ್ಷ್ಮಮ್ಮ, ತಾಲ್ಲೂಕು ಘಟಕಗಳ ಪದಾಧಿಕಾರಿಗಳಾದ ಅಶ್ವತ್ಥಮ್ಮ, ಗುಲ್ಜಾರ್, ವೆಂಕಟರತ್ನಮ್ಮ, ಭಾಗ್ಯಮ್ಮ, ಸುಜಾತಾ, ಮುನಿರತ್ನಮ್ಮ, ಗೀತಾ, ಪದ್ಮಾವತಿ, ಸೌಭಾಗ್ಯಮ್ಮ, ಲಕ್ಷ್ಮಿನರಸಮ್ಮ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು