ಮಂಗಳವಾರ, ಏಪ್ರಿಲ್ 13, 2021
30 °C

ಅಭಿವೃದ್ಧಿ ಕಂಡು ವಕೀಲರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಕೆ.ಎಚ್.ತಮ್ಮೇಗೌಡ ಮರು ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ನಮ್ಮ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಎಲ್ಲಾ ವಕೀಲರು ನಮಗೆ ಅತ್ಯಂತ ಹೆಚ್ಚು ಮತ ನೀಡುವ ಮೂಲಕ ಸತತ 7ನೇ ಬಾರಿಗೆ ಆಯ್ಕೆ ಮಾಡಿದ್ದಾರೆ. ಅದಕ್ಕಾಗಿ ಎಲ್ಲಾ ವಕೀಲರರಿಗೆ ಅಭಿನಂದನೆ ಸಲ್ಲಿಸುವೆ’ ಎಂದು ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಚ್.ತಮ್ಮೇಗೌಡ ತಿಳಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಕೀಲರ ಸಂಘದ ಚುನಾವಣಾ ಪೂರ್ವದಲ್ಲಿ ನಮ್ಮ ಮೇಲೆ ವಿರೋಧಿ ಬಣದವರು ಜಿಲ್ಲಾ ನ್ಯಾಯಾಲಯ ಸಂಕೀರ್ಣ, ಕ್ಯಾಂಟೀನ್ ಕುರಿತು ಸುಳ್ಳು ಆರೋಪಗಳು ಮಾಡಿದ್ದರು. ಮುಖ್ಯವಾಗಿ 39 ವಕೀಲರ ಸದಸ್ಯತ್ವವನ್ನು ರದ್ದುಪಡಿಸಿ ಮತದಾನ ಹಕ್ಕು ಕಸಿದುಕೊಂಡಿದ್ದಾರೆ ಎಂದು ಅಪಪ್ರಚಾರ ಮಾಡಿದ್ದರು’ ಎಂದು ಹೇಳಿದರು.

‘ವಿರೋಧಿಗಳ ಅಪ ಪ್ರಚಾರಗಳ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಲಿಲ್ಲ. ಏಕೆಂದರೆ ನಾವು ಏನು ಮಾಡಿದ್ದೇವೆ ಎಂಬುದು ವಕೀಲರಿಗೆ ಗೊತ್ತಿದೆ. ನಾನು ಅಧ್ಯಕ್ಷನಾದ ಮೇಲೆ 24 ಕಾರ್ಯಕ್ರಮಗಳು ಯೋಜನೆ ಹಾಕಿಕೊಂಡು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಈ ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳು ನೋಡಿದ ವಕೀಲರು ನಮಗೆ ಹೆಚ್ಚಿನ ಮತಗಳಿಂದ ಆಯ್ಕೆ ಮಾಡಿದ್ದಾರೆ’ ಎಂದರು.

‘ವಕೀಲರ ಸಂಘದ ಕಟ್ಟಡದ ಮೊದಲ ಅಂತಸ್ತಿನ ಕಾಮಗಾರಿ ಮುಕ್ತಾಯ ಹಂತಕ್ಕೆ ಬಂದಿದೆ. ಜಿಲ್ಲಾ ನ್ಯಾಯಾಲಯದ ಸಂಕೀರ್ಣ ಕಟ್ಟಡ ಸಹ ಮುಕ್ತಾಯದ ಹಂತಕ್ಕೆ ಬಂದಿದೆ. ಈ ಕಟ್ಟಡಗಳ ನಾಮಫಲಕಗಳ ಮೇಲೆ ನಮ್ಮ ಹೆಸರು ಕಾಣಿಸಿಕೊಳ್ಳುತ್ತದೆ ಎಂಬ ಕಾರಣಕ್ಕೆ ವಿರೋಧಿ ಬಣದವರು ಈ ಚುನಾವಣೆಯಲ್ಲಿ ಭಾರಿ ಪೈಪೋಟಿ ನಡೆಸಿದ್ದರು’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ನ್ಯಾಯಾಲಯ ಹಾಗೂ ಜನಸಂಖ್ಯೆ ಅನುಗುಣವಾಗಿ ನೋಟರಿಗಳು ಇರಬೇಕಾಗಿತ್ತು. ಆದರೆ ನಮ್ಮಲ್ಲಿ ನೋಟರಿಗಳು ಕಡಿಮೆ ಇದ್ದಾರೆ. ನೋಟರಿಗಳ ಸಂಖ್ಯೆ ಹೆಚ್ಚಿಸಲು ನ್ಯಾಯಾಧೀಶರ ಮೂಲಕ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ’ ಎಂದು ತಿಳಿಸಿದರು.

ವಕೀಲರ ಸಂಘದ ಉಪಾಧ್ಯಕ್ಷ ಕೆ.ವಿ ಬಾಲಾಜಿ, ಪ್ರಧಾನ ಕಾರ್ಯದರ್ಶಿ ಬಿ.ವಿನೋದ್ ಕುಮಾರ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯೂಬ್ ಖಾನ್, ಬಿ.ನಾಗೇಶ್, ಡಿ.ಎನ್ ಮಂಜುನಾಥ್ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು