ಭಾನುವಾರ, ಆಗಸ್ಟ್ 25, 2019
24 °C
ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ–ಸುತ್ತೋಲೆಯಲ್ಲಿ ಉಲ್ಲೇಖ

ರಾತ್ರಿ 11ರವರೆಗೆ ಮನೆ ಮನೆಗೆ ಭೇಟಿ

Published:
Updated:

ಬೆಂಗಳೂರು: ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಮುಖ್ಯವಾಹಿನಿಗೆ ತರಲು ಸಮೀಕ್ಷೆ ನಡೆಸುವುದಕ್ಕಾಗಿ ಪ್ರತಿ ತಿಂಗಳು 8 ಮತ್ತು 9ರಂದು ಸಂಜೆ 6ರಿಂದ ರಾತ್ರಿ 11ರವರೆಗೆ ಪ್ರಾಥಮಿಕ ಶಾಲಾ ಶಿಕ್ಷಕರು ಮನೆ ಮನೆಗೆ ಭೇಟಿ ನೀಡಬೇಕು ಎಂಬ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಸುತ್ತೋಲೆ ವಿವಾದ ಸೃಷ್ಟಿಸಿದೆ.

ಈ ಸುತ್ತೋಲೆ ಹೊರಬೀಳುತ್ತಿದ್ದಂತೆಯೇ ಗುರುವಾರ ಹಲವಾರು ಶಿಕ್ಷಕರು ಅದರಲ್ಲೂ ಮುಖ್ಯವಾಗಿ ಮಹಿಳೆಯರು ಅಸಹನೆ ವ್ಯಕ್ತಪಡಿಸಿದ್ದು, ತಮ್ಮ ಸಂಘದ ಮೂಲಕ ಸರ್ಕಾರಕ್ಕೆ ಮನವರಿಕೆ ಮಾಡುವ ಪ್ರಯತ್ನ ಮಾಡಿದರು.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎನ್‌.ಚಂದ್ರಶೇಖರ್ ಅವರು ಮುಖ್ಯ ಕಾರ್ಯದರ್ಶಿ ಟಿ.ಎನ್‌.ವಿಜಯಭಾಸ್ಕರ್ ಅವರನ್ನು ಭೇಟಿ ಮಾಡಿ ವಾಸ್ತವ ಸಮಸ್ಯೆಗಳನ್ನು ವಿವರಿಸಿದರು.

’ಸಮೀಕ್ಷೆಯಲ್ಲಿ ಶಿಕ್ಷಕಿಯರನ್ನು ಸೇರಿಸಿಕೊಳ್ಳುವುದು ಬೇಡ, ಪುರುಷ ಶಿಕ್ಷಕರೂ ರಾತ್ರಿ 9 ಗಂಟೆಯವರೆಗೆ ಸಮೀಕ್ಷೆ ನಡೆಸಿದರೆ ಸಾಕು’ ಎಂದು ಮುಖ್ಯ ಕಾರ್ಯದರ್ಶಿಯವರು ಮೌಖಿಕವಾಗಿ ಸೂಚಿಸಿದರು ಎಂದು ಚಂದ್ರಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಆಯುಕ್ತ ಡಾ.ಕೆ.ಜಿ.ಜಗದೀಶ್ ಅವರನ್ನೂ ಭೇಟಿ ಮಾಡಿ ಸಮಸ್ಯೆಯನ್ನು ಗಮನಕ್ಕೆ ತರಲಾಗಿದೆ. ಅವರು ಸಹ ಶಿಕ್ಷಕರಿಂದ ರಾತ್ರಿ 9 ಗಂಟೆಯವರೆಗೆ ಮಾತ್ರ ಸಮೀಕ್ಷೆ ನಡೆಸುವುದಕ್ಕೆ ಸಮ್ಮತಿ ಸೂಚಿಸಿದರು ಎಂದು ಅವರು ವಿವರಿಸಿದರು.

13–14ರಂದು ಸಮೀಕ್ಷೆ: ಈ ಬಾರಿ ವರಮಹಾಲಕ್ಷ್ಮಿ ವ್ರತ ಇರುವುದರಿಂದ ಇದೇ 13 ಮತ್ತು 14ರಂದು ಸಮೀಕ್ಷೆ ನಡೆಸಲಾಗುವುದು ಎಂದು ಆಯುಕ್ತರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

Post Comments (+)