ಭಾನುವಾರ, ಆಗಸ್ಟ್ 25, 2019
28 °C
1969

ಸಂಸತ್ ಕಾಂಗ್ರೆಸ್ ಸದಸ್ಯರಿಗೆ ಆದೇಶ: ಎಸ್ಸೆನ್ ಮನವಿಗೆ ಇಂದಿರಾ ನಕಾರ

Published:
Updated:

ಸಂಸತ್ ಕಾಂಗ್ರೆಸ್ ಸದಸ್ಯರಿಗೆ ಆದೇಶ: ಎಸ್ಸೆನ್ ಮನವಿಗೆ ಇಂದಿರಾ ನಕಾರ

ನವದೆಹಲಿ, ಆ. 13– ಕಾಂಗ್ರೆಸ್ಸಿನ ಎರಡು ಗುಂಪುಗಳ ನಡುವಣ ವಿರಸ ಅವು ಕಣದಿಂದ ಹಿಂದೆ ಸರಿಯಲಾಗದಂತಹ ಮಟ್ಟ ಮುಟ್ಟಿದೆ. ಶ್ರೀ ನಿಜಲಿಂಗಪ್ಪನವರು ಜನಸಂಘ ಮತ್ತು ಸ್ವತಂತ್ರ ಪಕ್ಷಗಳೊಡನೆ ಒಳಸಂಚು ನಡೆಸಿದ್ದಾರೆಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಮತ್ತೆ ಆರೋಪ ಉಚ್ಚರಿಸಿದ್ದರೆ, ಇನ್ನೊಂದು ಕಡೆ ಕಾಂಗ್ರೆಸ್‌ ಅಧ್ಯಕ್ಷರು ಅದನ್ನು ಖಂಡತುಂಡವಾಗಿ ನಿರಾಕರಿಸಿದ್ದಾರೆ.

ಶ್ರೀಮತಿ ಗಾಂಧಿ ಇಂದು ಸಂಜೆ ಶ್ರೀ ನಿಜಲಿಂಗಪ್ಪನವರಿಗೆ ಕಳುಹಿಸಿರುವ ಪತ್ರದಲ್ಲಿ ರಾಷ್ಟ್ರಪತಿ ಸ್ಥಾನಕ್ಕೆ ಶ್ರೀ ಸಂಜೀವ ರೆಡ್ಡಿಯವರಿಗೆ ತಾವು ಬೆಂಬಲ ಕೊಟ್ಟದ್ದಕ್ಕೆ ಈಗ ಆಧಾರ ಇಲ್ಲವೆಂದು ನುಡಿದಿದ್ದಾರೆ.

‘ಪ್ರಧಾನಿಗೆ ತಕ್ಕದ್ದಲ್ಲ’– ಎಸ್ಸೆನ್ ಟೀಕೆ

ನವದೆಹಲಿ, ಆ. 13– ಕಾಂಗ್ರೆಸ್ ಪಕ್ಷದ ತತ್ವಗಳು ಮತ್ತು ಅಂಗೀಕೃತ ಧ್ಯೇಯಗಳಿಗೆ ಪೂರ್ಣ ವಿರೋಧವಾಗಿರುವ ರಾಜಕೀಯ ಪ‍ಕ್ಷಗಳೊಡನೆ ಶಾಮೀಲಾಗಿರುವುದಾಗಿ ತಮ್ಮ ವಿರುದ್ಧ ಆರೋಪಿಸುವುದು ಪ್ರಧಾನಿಗೆ ತಕ್ಕದ್ದಲ್ಲವೆಂದು ಕಾಂಗ್ರೆಸ್ ಅಧ್ಯಕ್ಷ ಶ್ರೀ ನಿಜಲಿಂಗಪ್ಪ ಅವರು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರಿಗೆ ಇಂದು ರಾತ್ರಿ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.

ಇಂದು ಸಂಜೆ ಪ್ರಧಾನಿಯಿಂದ ಬಂದ ಪತ್ರಕ್ಕೆ ಶ್ರೀ ನಿಜಲಿಂಗಪ್ಪನವರು ಬರೆದಿರುವ ಉತ್ತರದಲ್ಲಿ ಈ ಆರೋಪವನ್ನು ಅಲ್ಲಗಳೆದು, ಪಕ್ಷದ ಸಂಸತ್ ಸದಸ್ಯರಿಗೆ ಆದೇಶ ನೀಡಿ ಶ್ರೀ ಸಂಜೀವ ರೆಡ್ಡಿಯವರು ಖಚಿತವಾಗಿ ಆಯ್ಕೆಯಾಗುವಂತೆ ಮಾಡಬೇಕೆಂದು ಪುನರುಚ್ಚರಿಸಿದ್ದಾರೆ.

Post Comments (+)