ಶನಿವಾರ, ನವೆಂಬರ್ 23, 2019
22 °C

ಚಿನ್ಮಯಾನಂದ ಪ್ರಕರಣ: ಎಫ್‌ಐಆರ್‌ ಪರಿಶೀಲಿಸಲು ಎಸ್‌ಐಟಿ

Published:
Updated:

ಲಖನೌ (ಪಿಟಿಐ): ಕೇಂದ್ರದ ಮಾಜಿ ಸಚಿವ ಮತ್ತು ಬಿಜೆಪಿ ನಾಯಕ ಸ್ವಾಮಿ ಚಿನ್ಮಯಾನಂದ ವಿರುದ್ಧ ಕಾನೂನು ವಿದ್ಯಾರ್ಥಿನಿ ಮಾಡಿರುವ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್‌ಐಆರ್‌ಗಳನ್ನು ಪರಿಶೀಲಿಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ.

ಸುಪ್ರೀಂ ಕೋರ್ಟ್‌ ಆದೇಶದ ಅನ್ವಯ ಉತ್ತರ ಪ್ರದೇಶ ಸರ್ಕಾರ ಈ ಕ್ರಮಕೈಗೊಂಡಿದೆ. ಈ ತಂಡದ ನೇತೃತ್ವವನ್ನು ಇನ್‌ಸ್ಪೆಕ್ಟರ್‌ ಜನರಲ್‌ ಹುದ್ದೆಯ ಪೊಲೀಸ್‌ ಅಧಿಕಾರಿಯೊಬ್ಬರು ವಹಿಸಿಕೊಳ್ಳಲಿದ್ದಾರೆ.

 ಚಿನ್ಮಯಾನಂದ ಟ್ರಸ್ಟ್‌ ನಡೆಸುತ್ತಿದ್ದ ಕಾಲೇಜಿನ ವಿದ್ಯಾರ್ಥಿನಿ ಆಗಸ್ಟ್‌ 24ರಿಂದ ನಾಪತ್ತೆಯಾಗಿದ್ದರು. ನಾಪತ್ತೆಯಾಗುವ ಮುನ್ನ, ‘ಸಂತರೊಬ್ಬರು ನನಗೆ ಕಿರುಕುಳ ನೀಡುತ್ತಿದ್ದು, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ’ ಎನ್ನುವ ಸಂದೇಶವುಳ್ಳ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದರು. ವಿಡಿಯೊದಲ್ಲಿ ಚಿನ್ಮಯಾನಂದ ಅವರ ಹೆಸರು ಪ್ರಸ್ತಾಪಿಸಿರಲಿಲ್ಲ. ಆಗಸ್ಟ್‌ 30ರಂದು ರಾಜಸ್ಥಾನದಲ್ಲಿ ಈ ವಿದ್ಯಾರ್ಥಿನಿಯನ್ನು ಉತ್ತರ ಪ್ರದೇಶ ಪೊಲೀಸರು ಪತ್ತೆ ಮಾಡಿದ್ದರು.

ಚಿನ್ಮಯಾನಂದ ಅವರೇ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ವಿದ್ಯಾರ್ಥಿನಿಯ ತಂದೆ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಈ ಆರೋಪವನ್ನು ಚಿನ್ಮಯಾನಂದ ಅವರ ವಕೀಲರು ತಳ್ಳಿ ಹಾಕಿದ್ದರು.

ಪ್ರತಿಕ್ರಿಯಿಸಿ (+)