ಶುಕ್ರವಾರ, ನವೆಂಬರ್ 15, 2019
22 °C
ಮೋದಿ–ಪುಟಿನ್‌ ಮಾತುಕತೆ: ಕಾಶ್ಮೀರ ವಿಶೇಷಾಧಿಕಾರ ರದ್ದು ವಿಚಾರದಲ್ಲಿ ಭಾರತಕ್ಕೆ ಬೆಂಬಲ

ಬಾಹ್ಯ ಹಸ್ತಕ್ಷೇಪ: ಭಾರತ–ರಷ್ಯಾ ಆಕ್ಷೇಪ

Published:
Updated:
Prajavani

ವ್ಲಾಡಿವೊಸ್ಟೊಕ್‌ (ಪಿಟಿಐ): ಆಂತರಿಕ ವಿಚಾರಗಳಲ್ಲಿ ಯಾವುದೇ ದೇಶದ ‘ಬಾಹ್ಯ ಹಸ್ತಕ್ಷೇಪ’ಕ್ಕೆ ಭಾರತ ಮತ್ತು ರಷ್ಯಾದ ವಿರೋಧ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಜತೆಗಿನ ಮಾತುಕತೆಯ ಬಳಿಕ ಮೋದಿ ಮಾತನಾಡಿದರು.

ದ್ವಿಪಕ್ಷೀಯ ಸಹಕಾರಕ್ಕೆ ಹೊಸ ಕ್ಷೇತ್ರಗಳನ್ನು ಗುರುತಿಸುವುದು ಪುಟಿನ್‌ ಜತೆಗೆ ನಡೆಸಿದ ಚರ್ಚೆಯ ಮುಖ್ಯ ಗುರಿಯಾಗಿತ್ತು ಎಂದು ಹೇಳಿದರು.

ವ್ಯಾಪಾರ, ರಕ್ಷಣೆ, ಬಾಹ್ಯಾಕಾಶ, ತೈಲ ಮತ್ತು ಅನಿಲ, ಪರಮಾಣು ಇಂಧನ ಮತ್ತು ಜಲಸಾರಿಗೆ ಚರ್ಚೆಯಾದ ಕೆಲವು ಮುಖ್ಯ ವಿಚಾರಗಳು ಎಂದು ತಿಳಿಸಿದರು.

ಭಾರತ–ರಷ್ಯಾ ನಡುವಣ 20ನೇ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸುವುದಕ್ಕಾಗಿ ಮೋದಿ ಅವರು ರಷ್ಯಾಕ್ಕೆ ಎರಡು ದಿನಗಳ ಭೇಟಿ ನೀಡಿದ್ದಾರೆ.

ಬಾಹ್ಯ ಹಸ್ತಕ್ಷೇಪದ ವಿಚಾರವನ್ನು ಹೇಳುವಾಗ ಮೋದಿ ಅವರು ಯಾವುದೇ ದೇಶವನ್ನು ಉಲ್ಲೇಖಿಸಲಿಲ್ಲ. ಆದರೆ, ಜಮ್ಮು–ಕಾಶ್ಮೀರದ ವಿಶೇಷಾಧಿಕಾರ ರದ್ದತಿಯ ನಂತರದಲ್ಲಿ ಭಾರತ–ಪಾಕಿಸ್ತಾನದ ನಡುವೆ ವಿಷಮಿಸಿರುವ ಸಂಬಂಧದ ಪರೋಕ್ಷ ಉಲ್ಲೇಖ ಇದು ಎಂದು ಹೇಳಲಾಗಿದೆ. 

ವಿಶೇಷಾಧಿಕಾರ ರದ್ದತಿಯು ಭಾರತದ ಆಂತರಿಕ ವಿಚಾರ ಎಂದು ಜಾಗತಿಕ ಸಮುದಾಯಕ್ಕೆ ಭಾರತ ಸ್ಪಷ್ಟವಾಗಿ ಹೇಳಿದೆ. ಈ ವಿಚಾರವನ್ನು ಅಂತರರಾಷ್ಟ್ರೀಕರಣ ಮಾಡುವ ಪ್ರಯತ್ನ ಬೇಡ ಎಂಬ ಸಲಹೆಯನ್ನು ಪಾಕಿಸ್ತಾನಕ್ಕೂ ಕೊಟ್ಟಿದೆ. ಆದರೆ, ಎಲ್ಲ ಅಂತರ
ರಾಷ್ಟ್ರೀಯ ವೇದಿಕೆಗಳಲ್ಲಿ ಈ ವಿಚಾರವನ್ನು ಪ್ರಸ್ತಾಪಿಸುವುದಾಗಿ ಪಾಕಿಸ್ತಾನ ಹೇಳುತ್ತಿದೆ. 

ಭಾರತದ ನಿರ್ಧಾರವನ್ನು ರಷ್ಯಾ ಆರಂಭದಿಂದಲೂ ಬೆಂಬಲಿಸಿದೆ. ವಿಶೇಷಾಧಿಕಾರದಲ್ಲಿ ಮಾಡಿರುವ ಬದಲಾವಣೆ ಭಾರತದ ಸಂವಿಧಾನದ ಚೌಕಟ್ಟಿನೊಳಗಿನ ವಿಚಾರ ಎಂದು ರಷ್ಯಾ ಹೇಳಿದೆ. ವಿದೇಶಾಂಗ ಕಾರ್ಯದರ್ಶಿ ವಿಜಯ್‌ ಗೋಖಲೆ ಅವರು ಮೋದಿ–ಪುಟಿನ್‌ ಭೇಟಿಯ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ವಿವರ ನೀಡಿದರು. ವಿಶೇಷಾಧಿಕಾರ ರದ್ದತಿಯ ಹಿಂದಿನ ತರ್ಕ ಏನು ಎಂಬುದನ್ನು ಮೋದಿ ಅವರು ಪುಟಿನ್‌ಗೆ ವಿವರಿಸಿದ್ದಾರೆ. ಈ ವಿಚಾರದಲ್ಲಿ ಭಾರತದ ಜತೆಗೆ ರಷ್ಯಾ ಗಟ್ಟಿಯಾಗಿ ನಿಂತಿದೆ ಎಂದರು. 

ಪ್ರತಿಕ್ರಿಯಿಸಿ (+)