ಶುಕ್ರವಾರ, ನವೆಂಬರ್ 22, 2019
27 °C
ಕಟ್ಟಡ ಕಾರ್ಮಿಕರ ಆಕ್ರೋಶ-– ಪ್ರತಿಭಟನೆ

ಹೊಸ ಕಾನೂನು ಅನುಷ್ಠಾನಕ್ಕೆ ವಿರೋಧ

Published:
Updated:
Prajavani

ಬೆಂಗಳೂರು: ‘ಸಾರ್ವತ್ರಿಕ ಸಾಮಾಜಿಕ ಭದ್ರತಾ ಸಂಹಿತೆ–2018’ ಹಾಗೂ ‘ವೃತ್ತಿ ಆಧಾರಿತ ಸುರಕ್ಷಾ, ಆರೋಗ್ಯ ಹಾಗೂ ಕೆಲಸದ ಪರಿಸ್ಥಿತಿ ಸಂಹಿತೆ–2019’ ಹೊಸ ಕಾನೂನುಗಳನ್ನು ಜಾರಿಗೆ ತರಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಕಟ್ಟಡ ನಿರ್ಮಾಣ ಕಾರ್ಮಿಕರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ‘ವಿಧಾನಸೌಧ ಚಲೊ’ ಪ್ರತಿಭಟನೆಯಲ್ಲಿ ಹಲವು ಜಿಲ್ಲೆಗಳ ಕಾರ್ಮಿಕರು ಪಾಲ್ಗೊಂಡಿದ್ದರು. ‘ಕಟ್ಟಡ ಕಾರ್ಮಿಕ ಕಾನೂನು 1996 ಉಳಿಸಿ – ಕಟ್ಟಡ ಕಾರ್ಮಿಕ ಮಂಡಳಿ ಮತ್ತು ಕಾರ್ಮಿಕರ ಬದುಕು ರಕ್ಷಿಸಿ’ ಎಂಬ ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು.

‘ಕಾರ್ಮಿಕ ಪ್ರತಿನಿಧಿಗಳು ಹಾಗೂ ಕಾರ್ಮಿಕ ಸಂಘಟನೆಗಳ ಮುಖಂಡರ ಅಭಿಪ್ರಾಯ ಪಡೆಯದೇ ಕೇಂದ್ರ ಸರ್ಕಾರ ಕಾನೂನು ಜಾರಿ ಮಾಡಲು ತಯಾರಿ ನಡೆಸುತ್ತಿದೆ. ಇದು ಕಾರ್ಮಿಕ ವಿರೋಧಿ ನೀತಿಯಾಗಿದ್ದು, ಇದನ್ನು ಖಂಡಿಸುತ್ತೇವೆ’ ಎಂದು ಕಾರ್ಮಿಕರು ಹೇಳಿದರು.

4 ಕೋಟಿ ಗುರುತಿನ ಚೀಟಿ ರದ್ದು: ‘ಹೊಸ ಕಾನೂನುಗಳು ಜಾರಿಗೆ ಬಂದರೆ, 1996ರ ಕಟ್ಟಡ ಕಾರ್ಮಿಕ ಕಾನೂನು ಹಾಗೂ ಸೆಸ್ ಕಾನೂನು ರದ್ದಾಗಲಿದೆ. ಈಗಾಗಲೇ ನೋಂದಣಿಯಾದ ದೇಶದ 4 ಕೋಟಿ ಹಾಗೂ ರಾಜ್ಯದ 20 ಲಕ್ಷ ಕಾರ್ಮಿಕರ ಗುರುತಿನ ಚೀಟಿಗಳೂ ರದ್ದಾಗಲಿವೆ’ ಎಂದು ಕಾರ್ಮಿಕರು ಆತಂಕ ವ್ಯಕ್ತಪಡಿಸಿದರು.

‘ರಾಜ್ಯದ 4 ಲಕ್ಷ ನೋಂದಾಯಿತ ಕಾರ್ಮಿಕರು, ಕಲ್ಯಾಣ ಮಂಡಳಿಯಿಂದ ಸದ್ಯ ಹಲವು ಸೌಲಭ್ಯ ಪಡೆಯುತ್ತಿ
ದ್ದಾರೆ. ಹೊಸ ಕಾನೂನು ಜಾರಿಯಾ
ದರೆ ಮದುವೆ, ಪಿಂಚಣಿ, ಹೆರಿಗೆ ಭತ್ಯೆ, ಸೇರಿ ಹಲವು ಸೌಲಭ್ಯಗಳು ಸಿಗುವು
ದಿಲ್ಲ. ಕಾರ್ಮಿಕ ಸಂಘಟನೆಗಳಿಗೂ ಪ್ರಾತಿನಿಧ್ಯ ಇರುವುದಿಲ್ಲ’ ಎಂದರು.

‘ಹೊಸ ಕಾನೂನು ಪ್ರಕಾರ, ನೋಂದಣಿ ಕಡ್ಡಾಯವಲ್ಲ. 14ನೇ ವಯಸ್ಸಿನಿಂದ ಆಸಕ್ತಿ ಇದ್ದರೆ ಮಾತ್ರ ನೋಂದಣಿ ಮಾಡಿಕೊಳ್ಳಬಹುದು. ಇದರಿಂದ ಬಾಲ ಕಾರ್ಮಿಕ ಪದ್ಧತಿಗೆ ಸರ್ಕಾರವೇ ಉತ್ತೇಜನ ನೀಡಿದಂತಾಗುತ್ತದೆ’ ಎಂದು ಕಾರ್ಮಿಕರು ದೂರಿದರು.

‘ರಾಜ್ಯದ ಕಲ್ಯಾಣ ಮಂಡಳಿಯಲ್ಲಿ ಸಂಗ್ರಹವಾಗಿರುವ ₹ 8,218 ಕೋಟಿ ಹಣ ಕೇಂದ್ರ ಸರ್ಕಾರ ಪಾಲಾಗಲಿದೆ. ಕಾರ್ಮಿಕರ ನೋಂದಣಿ, ನವೀಕರಣ ಹಾಗೂ ಸೌಲಭ್ಯಗಳ ವಿತರಣೆ ಹೊಣೆಯು ಖಾಸಗಿಯವರ ಪಾಲಾಗುವ ಸಾಧ್ಯತೆಯೂ ಇದೆ’ ಎಂದು ಆತಂಕ
ವ್ಯಕ್ತಪಡಿಸಿದರು.  

ಪ್ರತಿಕ್ರಿಯಿಸಿ (+)