ಬುಧವಾರ, ಅಕ್ಟೋಬರ್ 16, 2019
22 °C
ಯೋಗಾ ಯೋಗ

ಸೊಂಟದ ಮೂಳೆ ಸ್ಥಿತಿಸ್ಥಾಪಕತ್ವಕ್ಕೆ ಉತ್ತಮ – ಪಾರ್ಶ್ವೋತ್ಥಾನಾಸನ

Published:
Updated:

ನಿರಂತರವಾಗಿ ಕುಳಿತು ಕೆಲಸ ಮಾಡುವವರಲ್ಲಿ ಬೆನ್ನು ಮತ್ತು ಸೊಂಟ ನೋವು ಕಾಣಿಸಿಕೊಳ್ಳುತ್ತದೆ. ಕೈ ಕಾಲುಗಳು ಜಡಗಟ್ಟಿದಂತಾಗಿರುತ್ತವೆ. ಇದರಿಂದಾಗಿ ಕೆಲಸದಲ್ಲಿ ಉತ್ಸಾಹ ಕಡಿಮೆಯಾಗುತ್ತಾ ಹೋಗುತ್ತದೆ. ಆದ್ದರಿಂದ, ದೇಹದ ಅವಯವಗಳಿಗೆ ಚಟುವಟಿಕೆ ಒದಗಿಸಬೇಕು. ಇದಕ್ಕಾಗಿ ಯೋಗ ಅಭ್ಯಾಸ ಉತ್ತಮ.

ಕಿಬ್ಬೊಟ್ಟೆ, ಬೆನ್ನು, ಸೊಂಟ, ಭುಜ, ಕಾಲುಗಳಿಗೆ ಉತ್ತಮ ವ್ಯಾಯಾಮ ಒದಗಿಸುವಲ್ಲಿ ಪಾರ್ಶ್ವೋತ್ತಾನಾಸನ ನೆರವಾಗುತ್ತದೆ.

ಪಾರ್ಶ್ವ ಎಂದರೆ ಒಂದು ಬದಿಗೆ ದೇಹವನ್ನು ತಿರುಗಿಸಿಟ್ಟು, ಉತ್ತಾನ ಎಂದರೆ ಮೇಲ್ಮುಖವಾಗಿ ಚಾಚಿಟ್ಟು ಅಭ್ಯಾಸ ನಡೆಯುವುದೇ ಪಾರ್ಶ್ವೋತ್ತಾನಾಸನ ಎಂದು ಹೆಸರಿಸಲಾಗಿದೆ.

ಅಭ್ಯಾಸ ಕ್ರಮ

ನೇರವಾಗಿ ನಿಂತುಕೊಳ್ಳಿ. ಶ್ವಾಸವನ್ನು ತೆಗೆದುಕೊಳ್ಳುತ್ತಾ ಬೆನ್ನನ್ನು ಒಳಕ್ಕೆ ಒತ್ತುತ್ತಾ ಎದೆಯನ್ನು ಹಿಗ್ಗಿಸಿ. ಎರಡೂ ಕೈಗಳನ್ನು ಬೆನ್ನ ಹಿಂದೆ ತಂದು ಹಸ್ತಗಳನ್ನು ಒಂದಕ್ಕೊಂದು ಜೋಡಿಸಿ, ಕೈ ಮುಗಿದ ಸ್ಥಿತಿಯಲ್ಲಿ ಹೆಗಲಿನ ಹೆಲುಬುಗಳ ಮಧ್ಯೆ ಇರಿಸಿ.

ಬಳಿಕ ಉಸಿರನ್ನು ಹೊರ ಹಾಕುತ್ತಾ ಕಾಲುಗಳ ಮಧ್ಯೆ ಮೂರರಿಂದ ನಾಲ್ಕು ಅಡಿಗಳ ಅಂತರ ಬರುವಂತೆ ಅಕ್ಕಪಕ್ಕಕ್ಕೆ ವಿಸ್ತರಿಸಿ. ಉಸಿರನ್ನು ಒಳಕ್ಕೆಳೆದುಕೊಳ್ಳುತ್ತಾ ಬಲ ಪಾದವನ್ನು 90 ಡಿಗ್ರಿಗಳಷ್ಟು ಬಲಕ್ಕೆ ತಿರುಗಿಸಿ, ಮುಂಡಭಾಗವನ್ನೂ ತಿರುಗಿಸಿ. ಮಂಡಿಯು ಮಡಚದಂತೆ ನೋಡಿಕೊಂಡು, ತಲೆಯನ್ನು ಹಿಂದಕ್ಕೆ ಚಾಚಿ ಬೆನ್ನಿನ ಭಾಗವನ್ನೂ ತುಸು ಹಿಂದಕ್ಕೆ ಭಾಗಿಸಿ ಎದೆಯನ್ನು ಹಿಗ್ಗಿಸಿ. ಬಳಿಕ ಉಸಿರನ್ನು ಹೊರ ಹಾಕುತ್ತಾ ಮುಂದೆ ಭಾಗಿ ಮಂಡಿಗೆ ಮೂಗನ್ನು ತಾಗಿಸಿ. ಕತ್ತನ್ನು ಮುಂದಕ್ಕೆ ಚಾಚುತ್ತಾ ಬೆನ್ನನ್ನು ಹಿಗ್ಗಿಸಿ ಮೂಗು ಹಾಗೂ ಬಾಯಿಗಳು ಮಂಡಿಯ ಕೆಳಭಾಗವನ್ನು ಸ್ಪರ್ಶಿಸುವಂತೆ ಇರಿಸಿ. ಅಂತಿಮ ಸ್ಥಿತಿಯಲ್ಲಿ 20ರಿಂದ 30 ಸೆಕೆಂಡು ನೆಲೆಸಿದ್ದು, ವಿರಮಿಸಿ. ಬಳಿಕ, ವಿರುದ್ಧ ದಿಕ್ಕಿನಲ್ಲಿ ಇದೇ ಕ್ರಮದಲ್ಲಿ ಅಭ್ಯಾಸ ನಡೆಸಿ.

ಫಲಗಳು

* ಕಿಬ್ಬೊಟ್ಟೆಯ ಅಂಗಗಳಿಗೆ ವ್ಯಾಯಾಮ ದೊರೆತು ಚೈತನ್ಯ ಪಡೆಯುತ್ತವೆ.

* ಬೆನ್ನು ಹಾಗೂ ಸೊಂಟದಲ್ಲಿನ ಮೂಳೆಗಳು ಸ್ಥಿತಿಸ್ಥಾಪಕತ್ವ ಪಡೆಯುತ್ತವೆ.

* ಕಾಲುಗಳು ಮತ್ತು ಸೊಂಟದ ಮಾಂಸಖಂಡಗಳ ಪೆಡಸುತನ ನಿವಾರಣೆಯಾಗುತ್ತದೆ.

* ಕೈಗಳ ಮಣಿಕಟ್ಟುಗಳ ಸರಾಗ ಚಲನೆಗೆ ನೆರವಾಗುತ್ತದೆ.

* ಜೋಲುಭುಜಗಳ ದೋಷಗಳನ್ನು ತೊಡೆಯುತ್ತದೆ.

* ಸರಾಗ ಉಸಿರಾಟ ಪ್ರಕ್ರಿಯೆಗೆ ನೆರವಾಗುತ್ತದೆ.

ಇದನ್ನೂ ಓದಿ: ‘ವಿಶ್ವ ಯೋಗ ದಿನ’ದಲ್ಲಿ ಹುಡುಗೀರ ಕೊಬ್ಬು ಕರಗಲಿ!

Post Comments (+)