ಗುರುವಾರ , ಅಕ್ಟೋಬರ್ 17, 2019
26 °C

ರಾಶಿ ಬಿದ್ದ ಕುಂಬಳ: ಕಸ ಹೆಚ್ಚಳ

Published:
Updated:
Prajavani

ಬೆಂಗಳೂರು: ಕೊಳೆತ ಕುಂಬಳ ಕಾಯಿ, ಬಾಡಿದ ಬಾಳೆ ಕಂಬಗಳು ನಗರದ ಅಲ್ಲಲ್ಲಿ ರಾಶಿ ಬಿದ್ದಿವೆ. ಮಾರುಕಟ್ಟೆಗಳು, ರಸ್ತೆ ಬದಿಯಲ್ಲಿ ಕುಂಬಳ ಕಾಯಿ ಮತ್ತು ಬಾಳೆ ಕಂಬ ವ್ಯಾಪಾರ ಮಾಡಿದವರು ಬಿಕರಿಯಾಗದೇ ಉಳಿದವುಗಳನ್ನು ಅಲ್ಲಲ್ಲೇ ಬಿಟ್ಟು ಹೋಗಿದ್ದಾರೆ.

ನವರಾತ್ರಿ ಹಾಗೂ ವಿಜಯದಶಮಿ ಹಬ್ಬದ ಸಂದರ್ಭ ನಗರದಲ್ಲಿ ಕಸದ ಪ್ರಮಾಣ ಎಂದಿಗಿಂತ ಶೇ 30ರಷ್ಟು ಹೆಚ್ಚಳವಾಗಿದೆ ಎಂದು ಬಿಬಿಎಂಪಿ ಅಂದಾಜಿಸಿದೆ.

ನಗರದಲ್ಲಿ ಪ್ರತಿನಿತ್ಯ 4,500 ಟನ್ ಹಸಿ ಕಸ ಉತ್ಪತ್ತಿಯಾಗುತ್ತದೆ. ಆದರೆ, ಹಬ್ಬದ ಸಂದರ್ಭದಲ್ಲಿ ಹತ್ತು ದಿನಗಳಲ್ಲಿ ಸರಾಸರಿ 5,800ಕ್ಕೂ ಹೆಚ್ಚು ಟನ್ ಕಸ ಉತ್ಪತ್ತಿಯಾಗುತ್ತಿದೆ. ಈ ಕಸ ಬಾಳೆ ಕಂಬ, ಹೂವು ಮತ್ತು ಹಣ್ಣಿನಿಂದ ಉತ್ಪತ್ತಿ
ಯಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದರು.

‘ಹಬ್ಬದ ಸಂದರ್ಭಲ್ಲಿ ಹೂವು–ಹಣ್ಣುಗಳ ಮಾರಾಟ ಹೆಚ್ಚಿರುವ ಕಡೆ ಕಸ ಹೆಚ್ಚಾಗಿ ಉತ್ಪತ್ತಿಯಾಗುತ್ತದೆ. ಈ ರೀತಿಯ ಸಂಪ್ರದಾಯಿಕ ತಾಣಗಳನ್ನು ಗುರುತಿಸಲಾಗಿದೆ. ಕಸ ರಾಶಿ ಬೀಳದಂತೆ ತೆರವುಗೊಳಿಸಲು ಸೂಚನೆ ನೀಡಲಾಗಿತ್ತು’ ಎಂದು ಜಂಟಿ ನಿರ್ದೇಶಕ (ಕಸ ನಿರ್ವಹಣೆ) ಸರ್ಫರಾಜ್ ಖಾನ್ ಹೇಳಿದರು.

‘ಈ ನಡುವೆ ಕಸ ಸಂಗ್ರಹಣೆಗೆ ಹೆಚ್ಚುವರಿ ಕಾಂಪ್ಯಾಕ್ಟರ್‌ಗಳು ಮತ್ತು ಆಟೊಟಿಪ್ಪರ್‌ಗಳನ್ನು ನಿಯೋಜಿಸಲಾಗಿತ್ತು. ಹಸಿ ಕಸವನ್ನು ಸಂಸ್ಕರಣಾ ಘಟಕಗಳಿಗೆ ಕಳುಹಿಸಿ ಕಾಂಪೋಸ್ಟ್ ಮಾಡಲಾಗುವುದು. ನಂತರ ಅದನ್ನು ರೈತರಿಗೆ ವಿತರಿಸಲಾಗುವುದು’ ಎಂದರು.

Post Comments (+)