ಗುರುವಾರ , ನವೆಂಬರ್ 21, 2019
20 °C

ರೈತರಿಂದ ಕಮಿಷನ್‌: 7 ಮಧ್ಯವರ್ತಿಗಳ ಸೆರೆ

Published:
Updated:

ಬೆಂಗಳೂರು: ಕೈಗಾರಿಕಾ ಪ್ರದೇಶಕ್ಕೆ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ವಿತರಿಸಲು ವಿಶೇಷ ಭೂಸ್ವಾಧೀನ ಅಧಿಕಾರಿ ಮತ್ತು ಸಿಬ್ಬಂದಿ, ಮಧ್ಯವರ್ತಿಗಳ ಮೂಲಕ ಭಾರಿ ಕಮಿಷನ್‌ ಪಡೆಯುತ್ತಿದ್ದ ಪ್ರಕರಣವನ್ನು ಭೇದಿಸಿರುವ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರು ಕಚೇರಿಯ ಹಿರಿಯ ಸಹಾಯಕ ಎಲ್‌. ಶ್ರೀನಿವಾಸ ಸೇರಿದಂತೆ ಏಳು ಜನರನ್ನು ಬಂಧಿಸಿದ್ದಾರೆ.

ಸೆಪ್ಟೆಂಬರ್‌ 20ರಂದು ಒಂದೇ ದಿನ ₹50 ಕೋಟಿ ಪರಿಹಾರವನ್ನು ಆರ್‌ಟಿಜಿಎಸ್‌ ಮೂಲಕ ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ. ಈ ವ್ಯವಹಾರದಲ್ಲಿ ದೊಡ್ಡ ಪ್ರಮಾಣದಲ್ಲಿ ಕಮಿಷನ್‌ ಪಡೆದಿರುವ ಸಾಧ್ಯತೆ ಇದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.

ಇಲ್ಲಿಯ ಖನಿಜ ಭವನದಲ್ಲಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಕಚೇರಿ ಮೇಲೆ ಎಸಿಬಿ  ಅಧಿಕಾರಿಗಳು ದಾಳಿ ನಡೆಸಿದಾಗ ಏಳು ಮಧ್ಯವರ್ತಿಗಳು ಸಿಕ್ಕಿಬಿದ್ದಿದ್ದಾರೆ. ಬಂಧಿತರಿಂದ ₹ 12.90 ಲಕ್ಷ ಹಣ, 13 ಖಾಲಿ ಚೆಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಿಶೇಷ ಭೂ ಸ್ವಾಧೀನಾಧಿಕಾರಿಗಳ ಆಪ್ತ ಸಹಾಯಕನ ಬಳಿಯೂ ಮೂರು ಖಾಲಿ ಚೆಕ್‌ ಹಾಗೂ ₹ 67,000 ಹಣ ಸಿಕ್ಕಿದೆ. ಶ್ರೀನಿವಾಸ ಅವರ ಮನೆಯನ್ನು ಶೋಧಿಸಲಾಗಿದೆ. ಎಸಿಬಿ ಎಸ್‌.ಪಿ ಜಿನೇಂದ್ರ ಖನಗಾವಿ ನೇತೃತ್ವದಲ್ಲಿ ಈ ದಾಳಿ ನಡೆದಿದೆ.

ದಾಬಸ್‌ಪೇಟೆ ಸಮೀಪ ಸೋಂಪುರ ಕೈಗಾರಿಕಾ ಪ್ರದೇಶಕ್ಕೆ 800 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಈ ಜಮೀನುಗಳಿಗೆ ಪರಿಹಾರ ನೀಡಲು ಕಮಿಷನ್‌ಗೆ ಬೇಡಿಕೆ ಇಡಲಾಗುತ್ತಿತ್ತು. ಕಮಿಷನ್‌ ಖಾತರಿಪಡಿಸಿಕೊಳ್ಳಲು ರೈತರಿಂದ ಖಾಲಿ ಚೆಕ್‌ಗಳನ್ನು ಪಡೆಯಲಾಗುತಿತ್ತು. ಕಮಿಷನ್‌ ಕೊಡದ ರೈತರಿಗೆ ಪರಿಹಾರ ನೀಡದೆ ಅಲೆದಾಡಿಸಲಾಗುತಿತ್ತು ಎಂದು ಎಸಿಬಿ ಪ್ರಕಟಣೆ ತಿಳಿಸಿದೆ.

ಆನಂತರ ಖಾಲಿ ಚೆಕ್‌ಗಳನ್ನು ಭರ್ತಿ ಮಾಡಿ ನಗದಾಗಿ ಪರಿವರ್ತಿಸಿಕೊಂಡು ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹಂಚಿಕೊಳ್ಳುತ್ತಿದ್ದರು. ಅಲ್ಲದೆ, ಪರಿಹಾರದ ಹಣವನ್ನು ಭೂಮಿ ಕಳೆದುಕೊಂಡ ರೈತರಿಗೆ ನೀಡದೆ ಮಧ್ಯವರ್ತಿಗಳು ಹೇಳಿದ ವ್ಯಕ್ತಿಗಳಿಗೆ ನೀಡಿರುವುದು ಕಂಡುಬಂದಿದೆ ಎಂದು ದೂರಲಾಗಿದೆ.

ಪ್ರತಿಕ್ರಿಯಿಸಿ (+)