ಬುಧವಾರ, ನವೆಂಬರ್ 20, 2019
21 °C
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ಅಭಿನಂದನೆ; ತೆರೆದ ವಾಹನದಲ್ಲಿ ಮೆರವಣಿಗೆ

ಮೈಸೂರು: ಸಿದ್ದರಾಮಯ್ಯಗೆ ಅದ್ಧೂರಿ ಸ್ವಾಗತ

Published:
Updated:
Prajavani

ಮೈಸೂರು: ವಿರೋಧ ಪಕ್ಷದ ನಾಯಕ ರಾದ ಬಳಿಕ ಮೊದಲ ಬಾರಿ ಮೈಸೂರು ನಗರಕ್ಕೆ ಬಂದ ಸಿದ್ದರಾಮಯ್ಯ ಅವರಿಗೆ ಶನಿವಾರ ಅದ್ಧೂರಿ ಸ್ವಾಗತ ಲಭಿಸಿತು.

ಅವರನ್ನು ಬರ ಮಾಡಿಕೊಳ್ಳಲು ಹಳೇ ಆರ್‌ಎಂಸಿ ಬಳಿ ಜನಸಾಗರವೇ ಸೇರಿತ್ತು. ಕಾರಿನಲ್ಲಿ ಬಂದಿಳಿದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಅವರನ್ನು ಕಾರ್ಯಕರ್ತರು ಮುತ್ತಿಕೊಂಡರು. ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಇದೇ ಸ್ಥಳದಲ್ಲಿ ತೆರೆದ ವಾಹನವೇರಿದ ಸಿದ್ದರಾಮಯ್ಯ ಅವರನ್ನು ಮೆರವಣಿಗೆ ಮೂಲಕ ಸಯ್ಯಾಜಿ ರಾವ್‌ ರಸ್ತೆ, ಆಯುರ್ವೇದ ವೃತ್ತ, ರೈಲ್ವೆ ನಿಲ್ದಾಣದ ವೃತ್ತದ ಮೂಲಕ ಕಾಂಗ್ರೆಸ್‌ ಕಚೇರಿ ಆವರಣಕ್ಕೆ ಕರೆ ತರಲಾಯಿತು.

ಇಕ್ಕೆಲಗಳಲ್ಲಿ ಸೇರಿದ ಜನರತ್ತ ಕೈಬೀಸುತ್ತಾ ಸಾಗಿ ಬಂದರು. ಡೊಳ್ಳು ಕುಣಿತ, ಪೂಜಾ ಕುಣಿತ, ವೀರಗಾಸೆ ಕಲಾವಿದರು ಮೆರವಣಿಗೆಗೆ ಮೆರುಗು ನೀಡಿದರು. ದಾರಿ ಮಧ್ಯದಲ್ಲಿ ಸಿದ್ದರಾಮಯ್ಯ ಅವರಿಗೆ ಅಭಿಮಾನಿಗಳು ಮಾಲೆ ಹಾಕಿದರೆ, ಕೆಲವರು ಬಾಳೆಹಣ್ಣು ನೀಡಿದರು. ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಮುಖಂಡರಾದ ಡಾ.ಎಚ್‌.ಸಿ.ಮಹದೇವಪ್ಪ ಸಾಥ್‌ ನೀಡಿದರು.

ಕಾರ್ಯಕರ್ತರು ಕಾಂಗ್ರೆಸ್‌ ಬಾವುಟ, ಸಿದ್ದರಾಮಯ್ಯ ಅವರ ಚಿತ್ರವಿದ್ದ ಪ್ಲೆಕಾರ್ಡ್‌ ಹಿಡಿದಿದ್ದರೆ, ಕೆಲವರು ಘೋಷಣೆ ಕೂಗಿದರು. ಕಾಂಗ್ರೆಸ್‌ ಕಚೇರಿಯು ಫ್ಲೆಕ್ಸ್‌, ಬ್ಯಾನರ್‌ ಮಯವಾಗಿತ್ತು.

ಪ್ರತಿಕ್ರಿಯಿಸಿ (+)