ಶುಕ್ರವಾರ, ಮೇ 27, 2022
30 °C

ಬೇಸಿಗೆಗೂ ತಟ್ಟಲಿದೆ ಬೆಲೆ ಏರಿಕೆಯ ಕಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಗುಲ್ಬರ್ಗದಲ್ಲಿ ಸೂರ್ಯ ನಿಧಾನಕ್ಕೆ ಏರುಜವ್ವನಿಗನಾಗುತ್ತಿದ್ದಾನೆ. ಬೆವರು ಚಿಗುರೊಡೆದು, ಕವಲೊಡೆದು, ಬಿಳಲುಗಳಂತೆ ಮೈಮೇಲೆಲ್ಲ ಇಳಿಯುವಾಗ, ತುಟಿ ಸವರಿದರೂ ಬಾಯಾರದು. ತೃಷೆ ನೀಗಲು ನೀರೊಂದೇ ಸಾಲದು. ಈ ಕಾರಣಕ್ಕೆ ಈಗಾಗಲೇ ರಸ್ತೆಯ ಬದಿಯಲ್ಲಿ ಬಾಯಾರಿದವರಿಗೆ ತಂಪುಣಿಸಲು ವಿವಿಧ ವ್ಯಾಪಾರಸ್ಥರು ಸಜ್ಜಾಗಿದ್ದಾರೆ. ಎಳೆನೀರು, ಮೋಸಂಬಿ, ಕಲ್ಲಂಗಡಿ, ನಿಂಬೆ ಪಾನಕ, ಕಬ್ಬಿನ ಹಾಲು ಹಾಗೂ ಯಾವತ್ತಿಗೂ ದೊರೆಯುವ ಮೇವಾಡ ಜ್ಯೂಸ್‌ಗಳು.ಆದರೆ ಕಳೆದ ಬೇಸಿಗೆಯ ಅಂತ್ಯದಲ್ಲಿ ಏರಿದ ಬೆಲೆಗಳು ಮಾತ್ರ ಮತ್ತೂ ಗಗನಮುಖಿಯಾಗಿವೆ. ಕಲ್ಲಂಗಡಿ ಹಣ್ಣನ್ನು ಹೆಚ್ಚಿ, ಮಂಜುಗಡ್ಡೆಯ ಮೇಲಿಟ್ಟು, ತಣ್ಣನೆಯ ಅನುಭವ ನೀಡುವ ಈ ಹೋಳುಗಳು ಈ ಸಲ ಬೇಸಿಗೆಯ ಆರಂಭಕ್ಕೇ 10 ರೂಪಾಯಿಗಳಾಗಿವೆ. ಕಳೆದ ವರ್ಷ 5 ರೂಪಾಯಿಗೆ ನೀಡುತ್ತಿದ್ದರು. ಬೇಸಿಗೆ ಬಿರುಸಾದಂತೆ 7 ರೂಪಾಯಿಗೇರಿತ್ತು. ಆಗ ಕಲ್ಲಂಗಡಿಯೂ 12-15 ರೂಪಾಯಿಗೆ ಕೆ.ಜಿ ತೂಗಿ ಕೊಡುತ್ತಿದ್ದರು. ಈಗ ಪ್ರತಿ ಕೆ.ಜಿಗೆ 20 ರೂಪಾಯಿ ನೀಡಬೇಕಿರುವುದರಿಂದ ಈ ದರದಲ್ಲಿಯೂ ಹೆಚ್ಚಳವಾಗಿದೆ ಎನ್ನುತ್ತಾರೆ ಕಲ್ಲಂಗಡಿ ವ್ಯಾಪಾರಸ್ಥರು.

ಕಬ್ಬಿನ ಹಾಲು ಸಹ ಕಳೆದ ವರ್ಷ ರೂ.5ಕ್ಕೆ ಒಂದು ಗ್ಲಾಸ್ ನೀಡುತ್ತಿದ್ದರು.ಈಗ ರೂ.6ಕ್ಕೇರಿದೆ. ಮೋಸಂಬಿಯು ಸಹ 10ರಿಂದ 15 ರೂಪಾಯಿಗೆ ಏರಿದೆ. ಎಳನೀರು 12 ರೂಪಾಯಿಗೆ ಒಂದಿದ್ದರೆ, ಈ ವರ್ಷ 15ಕ್ಕೇರಿದೆ. ಇನ್ನು ಲಸ್ಸಿ ಆರಂಭವಾಗಿಲ್ಲ. ಆದರೆ ಅದೂ 3-5 ರೂಪಾಯಿ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ. ಬಿಸಿಲಿನೊಂದಿಗೆ ಬೆಲೆ ಏರಲು ಕಾರಣವನ್ನು ಅರಸುತ್ತ ಹೋದರೆ, ಕೋಟೆ ಬಿದ್ದಿದ್ದಕ್ಕೆ ಕಮಲಾಕ್ಷಿಯೇ ಕಾರಣ ಎಂಬಂತಾಗಿದೆ. ಬಹುತೇಕ ವ್ಯಾಪಾರಸ್ಥರು ಹೇಳುವುದು, ತೈಲ ಬೆಲೆ ಏರಿಕೆಯಾಗಿದೆ. ಸಾಗಾಣಿಕೆ ವೆಚ್ಚದಲ್ಲಿ ಹೆಚ್ಚಳವಾಗಿದೆ. ಉದಾಹರಣೆಗೆ ಮೊದಲು ಸಾವಿರ ರೂಪಾಯಿಗೆ ಲೋಡ್ ಬಂದರೆ ಈಗ ಅದಕ್ಕೇ ಎರಡೂವರೆ ಸಾವಿರ ರೂಪಾಯಿಗಳನ್ನು ತೆರಬೇಕಾಗಿದೆ. ಈ ವ್ಯತ್ಯಾಸದ ಮೊಬಲಗು ಸಂಗ್ರಹಿಸುವುದು ನೇರ ಗ್ರಾಹಕರಿಂದ.ಸಕ್ಕರೆಯ ಬೆಲೆ ಏರಿದೆ. ನೀರು, ಮಂಜುಗಡ್ಡೆ, ಹಣ್ಣು ಎಲ್ಲವೂ ಬೆಲೆ ಏರಿವೆ. ಬೆಲೆ ಏರಿಕೆಯ ಕಾವು ಈ ಸಲ ಬೇಸಿಗೆಯ ಬೇಗೆಗಿಂತಲೂ ಬಿರುಸಾಗಿದೆ. ಇನ್ನು ದ್ರಾಕ್ಷಿ, ಕಲ್ಲಂಗಡಿ, ಕರಬೂಜ ಮುಂತಾದ ಬೇಸಿಗೆ ಹಣ್ಣುಗಳ ಋತು ಆರಂಭವಾಗಿದೆ. ಆದರೆ ಶಿವರಾತ್ರಿಯ ವರೆಗೂ ಬಿಸಿಲುಣ್ಣದ ಈ ಹಣ್ಣುಗಳನ್ನು ಕೊಳ್ಳುವವರು ಕಡಿಮೆ. ಹೀಗಾಗಿ ಬೆಲೆ ಹೆಚ್ಚಾಗಿರಬಹುದು. ಶಿವರಾತ್ರಿಯ ನಂತರ ಬೆಲೆ ಸ್ವಲ್ಪ ಅಧೋಮುಖಿಯಾಗಬಹುದು ಎನ್ನುವುದು ಸಂಪ್ರದಾಯಸ್ಥರ ಲೆಕ್ಕಾಚಾರ. ಈಗಾಗಲೇ ಅಲ್ಲಲ್ಲಿ ತಲೆ ಎತ್ತಿರುವ ಜೂಸು ಅಂಗಡಿಗಳು ದರ ಸಮರವನ್ನು ಸಾರುವ ಸಂಭ್ರಮದಲ್ಲಿಲ್ಲ. ಕಳೆದ ವರ್ಷ ರೂ.5 ಜೂಸು ಎಂದು ವಿಜೃಂಭಿಸುತ್ತಿದ್ದ ಎಲ್ಲ ಬೆಲೆ ಪಟ್ಟಿಗಳೂ ಈ ವರ್ಷ ಮೂಲೆ ಸೇರಿವೆ. ಬೇಸಿಗೆಯ ಆರಂಭಿಕ ದಿನಗಳಲ್ಲಿಯೇ ಈ ಪಾಟಿ ಬೆಲೆ ಏರಿದ್ದರೆ, ಇದೇ ಕನಿಷ್ಠ ದರವೂ ಆಗಬಲ್ಲುದು. ಬಹುಶಃ ಇದಕ್ಕಿಂತ ಹೆಚ್ಚಾಗದಿದ್ದರೆ ಸಾಕು ಎಂಬ ಆಶಾಭಾವನೆಯನ್ನು ಸಾಮಾನ್ಯರು ವ್ಯಕ್ತ ಪಡಿಸುತ್ತಿದ್ದಾರೆ. ಎಲ್ಲದಕ್ಕೂ ಕಡಕ್ ಬಿಸಿಲು ಬರುವುದೇ ಶಿವರಾತ್ರಿಯ ನಂತರ. ಅಲ್ಲಿಯವರೆಗೆ ಹಣ್ಣುಗಳ ಬೆಲೆ ಕಡಿಮೆಯಾಗುತ್ತದೆ ಎಂಬುದೊಂದು ನಿರೀಕ್ಷೆ. ಅಲ್ಲೆವರೆಗೂ ದ್ರಾಕ್ಷಿ ಹುಳಿ. ಕಲ್ಲಂಗಡಿ ಸಪ್ಪೆ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.