ಮಂಗಳವಾರ, ಮೇ 17, 2022
25 °C

ಚಿಂಚೋಳಿ ತಾ.ಪಂ. ಬಿಜೆಪಿ ಮಡಿಲಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ: ತಾಲ್ಲೂಕು ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಮೋಘಾ ಕ್ಷೇತ್ರದ ಸದಸ್ಯ ರಾಮರಾವ್ ಪಾಟೀಲ್ ಹಾಗೂ ಉಪಾಧ್ಯಕ್ಷರಾಗಿ ಅನುಸಾಬಾಯಿ ಚವ್ಹಾಣ ತಲಾ 12 ಮತಗಳಿಂದ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾದ ಸಹಾಯಕ ಆಯುಕ್ತೆ ಕೆ.ಎಸ್. ಲತಾಕುಮಾರಿ ಶುಕ್ರವಾರ ಘೋಷಿಸಿದರು. ಸಾಮಾನ್ಯರಿಗೆ ಮುಕ್ತವಾದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ರಾಮರಾವ್ ಪಾಟೀಲ್, ಶಾಮಸುಂದರ್ ಪವಾರ್ ಹಾಗೂ ಶರಣು ಹುಲಿ (ಮೂರು ಮಂದಿ ಸದಸ್ಯರು) ಹಾಗೂ ಕಾಂಗ್ರೆಸ್‌ನಿಂದ ಹೊಡೇಬೀರನಹಳ್ಳಿ ಕ್ಷೇತ್ರದ ಸದಸ್ಯ ಬಸಯ್ಯ ನೀಲಕಂಠಯ್ಯ ಸೇರಿದಂತೆ ಒಟ್ಟು 6 ನಾಮಪತ್ರಗಳನ್ನು ಸಲ್ಲಿಸಿದ್ದರು.ರಾಮರಾವ್ ಪಾಟೀಲರಿಗೆ ಕಣದಲ್ಲಿದ್ದ ಶಾಮಸುಂದರ್ ಹಾಗೂ ಶರಣು ಸಹಿತ 12 ಸದಸ್ಯರು  ಬೆಂಬಲಿಸಿದರು. ಕಾಂಗ್ರೆಸ್‌ನ ಬಸಯ್ಯ ನೀಲಕಂಠಯ್ಯ ಪರವಾಗಿ 9 ಸದಸ್ಯರು ಕೈ ಎತ್ತಿ ಬೆಂಬಲ ಸೂಚಿಸಿದರು. ಶಾದಿಪುರ ಕ್ಷೇತ್ರದ ಶಾಮಸುಂದರ್ ಪವಾರ್ ಮತ್ತು ಅಣವಾರ ಕ್ಷೇತ್ರದ ಶರಣು ಹುಲಿ ಪರ ಯಾವ ಸದಸ್ಯರೂ ಬೆಂಬಲಿಸಲಿಲ್ಲ. ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಚಿಮ್ಮನಚೋಡ ಕ್ಷೇತ್ರದ ಸದಸ್ಯೆ ಅನುಸಾಬಾಯಿ ಚವ್ಹಾಣ ಹಾಗೂ ಕಾಂಗ್ರೆಸ್‌ನಿಂದ ಗಡಿಕೇಶ್ವಾರ್ ಕ್ಷೇತ್ರದ ಸದಸ್ಯೆ ಶಿವಮ್ಮ ಶಿವರಾಯ ರಂಗನೂರು ನಾಮಪತ್ರ ಸಲ್ಲಿಸಿದ್ದು, ಅನುಸಾಬಾಯಿ 12, ಶಿವಮ್ಮ 9 ಸದಸ್ಯರ ಮತ  ಪಡೆದರು. ರಾಮರಾವ್ ಪಾಟೀಲ್ ಮತ್ತು ಅನುಸಾಬಾಯಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಿಸಲಾಯಿತು.ತಾ.ಪಂ. ಕಾರ್ಯನಿರ್ವಹಣಾಧಿಕಾರಿ ವೈ.ಎನ್.ಚಂದ್ರಮೌಳಿ ಹಾಗೂ ತಹಸೀಲ್ದಾರ ಬಿ.ಕೃಷ್ಣಪ್ಪ ಇದ್ದರು. ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಶಾಸಕ ಸುನೀಲ ವಲ್ಯ್‌ಪುರ ಅವರು ಹೂಮಾಲೆ ಹಾಕಿ ಅಭಿನಂದಿಸಿದರು. ಬಿಜೆಪಿ ಅಧ್ಯಕ್ಷ ರೇವಣಸಿದ್ದಪ್ಪ ಮಜ್ಜಗಿ, ಜಿಲ್ಲಾ ಪಂಚಾಯಿತಿ ಸದಸ್ಯ ಸಂಜೀವನ್ ರಮೇಶ ಯಾಕಾಪೂರ, ಜಗಜೀವನರೆಡ್ಡಿ ಪಾಟೀಲ್, ಗೌತಮ ವೈಜನಾಥ ಪಾಟೀಲ್, ಅಜಿತ ಬಾಬುರಾವ್ ಪಾಟೀಲ್, ಚನ್ನಪ್ಪ ಪಾಟೀಲ ಮೋಘಾ, ಸುಭಾಷ್ ಸೀಳಿನ್, ಚಿತ್ರಶೇಖರ ಪಾಟೀಲ, ರವಿ ಪಾಟೀಲ್, ಜಗದೀಶ ಮರಪಳ್ಳಿ, ಶಶಿಧರ ಸೂಗೂರು, ಚಂದ್ರಶೇಖರ ಹರಸೂರು ಮುಂತಾದವರು ಇದ್ದರು.ಬಿಜೆಪಿಯಲ್ಲಿ ಒಳ ಒಪ್ಪಂದ

ಪಕ್ಷದಲ್ಲಿ ಒಳ ಒಪ್ಪಂದ ಆಗಿದ್ದು ರಾಮರಾವ್ ಪಾಟೀಲ್ ಮತ್ತು ಅನುಸಾಬಾಯಿ 10 ತಿಂಗಳ ಅವಧಿಗೆ ಅಧ್ಯಕ್ಷ- ಉಪಾಧ್ಯಕ್ಷರಾಗಿರುವರು. ಉಳಿದ 10 ತಿಂಗಳಿಗೆ ಶಾದಿಪುರ ಕ್ಷೇತ್ರದ ಸದಸ್ಯ ಶಾಮಸುಂದರ್ ಪವಾರ್ ಮತ್ತು ಪಸ್ತಪೂರ ಕ್ಷೇತ್ರದ ಸದಸ್ಯೆ ಅನುಸುಯಾ ಭವಾನಿಸಿಂಗ್ ರಾಠೋಡ್ ಅವರನ್ನು ಅಧ್ಯಕ್ಷ -ಉಪಾಧ್ಯಕ್ಷರಾಗಿ ಆರಿಸಲು ಪಕ್ಷ ತೀರ್ಮಾನಿಸಿದೆ ಎಂದು ಶಾಸಕ ಸುನೀಲ ವಲ್ಯ್‌ಪುರ ಬಳಿಕ ತಿಳಿಸಿದರು. ಉತ್ತಮ ಆಡಳಿತ: ರಾಮರಾವ್ ಪಾಟೀಲ್, ಅನುಸಾಬಾಯಿ ತಾಲ್ಲೂಕಿನ ಜನತೆಗೆ ಉತ್ತಮ ಆಡಳಿತ ನೀಡಿ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.