ಬುಧವಾರ, ಜನವರಿ 22, 2020
28 °C

ಕಗ್ಗನಮಡಿ-ಬದುಕು ಕಗ್ಗಂಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಅಲ್ಲಿ ಆಸ್ಪತ್ರೆ ಇಲ್ಲ. ವೈದ್ಯರ ಸುಳಿವಿಲ್ಲ. ಶಾಲೆಗಳಲ್ಲಿಯೂ ಪ್ರಥಮ ಚಿಕಿತ್ಸೆ ವ್ಯವಸ್ಥೆಗಳಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರವಿಲ್ಲ. ರೋಗಿಗಳನ್ನು ಸಾಗಿಸಲು ಸಂಚಾರ ಸೌಲಭ್ಯವಿಲ್ಲ. ಸಿಸಿ ರಸ್ತೆಗಳಿಲ್ಲ. ಬಸ್ ಬರುವುದೇ ಇಲ್ಲ. ನಾಲ್ಕಾರು ಮೊಬೈಲ್‌ಗಳಿರುವ ಮನೆಗಳಲ್ಲೂ ಶೌಚಾಲಯವಿಲ್ಲ. ಶುಚಿತ್ವ ಇಲ್ಲವೇ ಇಲ್ಲ.ಇದು ಗುಲ್ಬರ್ಗದಿಂದ ಕೇವಲ 20 ಕಿ.ಮೀ. ದೂರದಲ್ಲಿ, ಕಪನೂರು ಕೈಗಾರಿಕಾ ಪ್ರದೇಶದಿಂದ ಕೂಗಳತೆ ಸಮೀಪದಲ್ಲಿ, ಸ್ವತಃ ಸಚಿವ ರೇವುನಾಯಕ ಬೆಳಮಗಿ (ವಿಧಾನಸಭಾ) ಹಾಗೂ ಪುತ್ರ ಗಣೇಶ್‌ನಾಯಕ್ ಬೆಳಮಗಿ (ಜಿ.ಪಂ.) ಪ್ರತಿನಿಧಿಸುವ ಕ್ಷೇತ್ರದ ಅವಳಿ ಗ್ರಾಮ. ಕಗ್ಗನಮಡಿ ಮತ್ತು ಯಳವಂತಗಿಯ ವ್ಯಥೆ.ಯಳವಂತಗಿಯ ಗಂಗಮ್ಮ ಎಂಬುವವರ ದೇಹಕ್ಕೆ ಜ.7ರಂದು ಆಕಸ್ಮಿಕವಾಗಿ ಕೀಟನಾಶಕ ಸೇರಿತ್ತು. ತಕ್ಷಣ ಚಿಕಿತ್ಸೆಗೆ ವ್ಯವಸ್ಥೆ ಇರಲಿಲ್ಲ. ಆಸ್ಪತ್ರೆಗೆ ಸಾಗಿಸಲು ವಾಹನಗಳಿರಲಿಲ್ಲ. ಆಗಷ್ಟೇ ಊರಿನಿಂದ ಹೋಗಿದ್ದ ಟಂಟಂಗೆ ಕರೆ ಮಾಡಲಾಯಿತು. ಟಂಟಂನಲ್ಲಿ ಹೋಗುತ್ತಿದ್ದ ಎಲ್ಲರನ್ನು ಅರ್ಧದಾರಿಯಲ್ಲೇ ಬಿಟ್ಟ ಚಾಲಕ ವಾಪಾಸ್ಸು ಬಂದ. ಗಂಗಮ್ಮನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ತಕ್ಷಣ ಚಿಕಿತ್ಸೆ ಸಿಕ್ಕರೆ ಗಂಗಮ್ಮ ಬದುಕುಳಿಯುತ್ತಿದ್ದರು. ಆದರೆ ಇಹಲೋಕ ತ್ಯಜಿಸಿದರು. ಇಂತಹ ಘಟನೆಗಳು ಇಲ್ಲಿ ಸಾಮಾನ್ಯ.ಸಂಚಕಾರ: ಗುಲ್ಬರ್ಗ-ಬೀದರ್ ಹೆದ್ದಾರಿಯಲ್ಲಿನ ಅವರಾದ ಬಳಿ ನಾಲ್ಕು ಕಿ.ಮೀ. ಒಳ ರಸ್ತೆಯಲ್ಲಿ ಸಾಗಿದರೆ ಸಿಗುವ ಈ ಅವಳಿ ಗ್ರಾಮಕ್ಕೆ ಇನ್ನೂ ಬಸ್ ಸೌಲಭ್ಯವಿಲ್ಲ. ರೋಗಿಗಳು, ವಿದ್ಯಾರ್ಥಿಗಳು, ರೈತರು ಸೇರಿದಂತೆ ಎಲ್ಲರೂ ನಡೆದುಕೊಂಡು, ಇಲ್ಲವೇ ಆಗಾಗ್ಗೆ ಬರುವ ಟಂಟಂ-ಜೀಪುಗಳನ್ನು ಏರಿ ಸವಾರಿ ಮಾಡಬೇಕು. ಹೀಗೆ ಬಂದ ವಾಹನಗಳು ಹಲವು     ಬಾರಿ ಉರುಳಿಬಿದ್ದಿವೆ. ಆದರೆ ಸಾವು-ನೋವುಗಳನ್ನು ಕೇಳುವವರಿಲ್ಲ ಎನ್ನುವಂತಾಗಿದೆ. ಮುಖ್ಯ ರಸ್ತೆ ತಕ್ಕಮಟ್ಟಿನ ಡಾಂಬರೀಕರಣ ಕಂಡಿದೆ. ಆದರೆ ಬಬಲಾದ ಗ್ರಾಮ ಪಂಚಾಯಿತಿಗೆ ಒಳಪಟ್ಟ ಕಗ್ಗನಮಡಿಯಲ್ಲಿ ಸಿಸಿ ರಸ್ತೆಗಳಿಲ್ಲ.ನೀರು: ಕುಡಿಯುವ ನೀರಿಗಾಗಿ ಪಂಪ್ ಇದೆ. ಆದರೆ ಶೇಖರಣಾ ಟ್ಯಾಂಕ್ ಇಲ್ಲ. ಕರೆಂಟ್ ಬಂದಾಗ ಮಾತ್ರ ನೀರು ಎಂಬ ಸ್ಥಿತಿ. ಅದೂ ಎತ್ತರದ ಮನೆಯತ್ತ ಹೋಗುವುದಿಲ್ಲ. ಹೀಗಾಗಿ ಆಗಾಗ್ಗೆ ನೀರಿಗಾಗಿ ಜಗಳ ನಡೆಯುತ್ತದೆ ಎನ್ನುತ್ತಾರೆ ಮಾಣಿಕ್. ಇನ್ನು ಇರುವ ಎರಡು ಸಾರ್ವಜನಿಕ ಬಾವಿಗಳಿಗೆ ಅಸ್ಪೃಶ್ಯತೆಯ ಸೋಗು. ಮೇಲ್ವರ್ಗಕ್ಕೊಂದು ಉಳಿದವರಿಗೊಂದು. ಜೀವ ಹೋದರೂ ಮೇಲ್ವರ್ಗದವರ ಬಾವಿಯಿಂದಲೇ ನೀರು ತರಲು ಅವಕಾಶವಿಲ್ಲ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದವರು ಹೇಳುತ್ತಾರೆ.`ಅಸ್ಪೃಶ್ಯತೆಯ ಪರಿಣಾಮ ನಮ್ಮ ಊರಿನಲ್ಲಿ ಕುಡಿಯುವ ನೀರು ಬಿಡಿ, ಒಂದು ಹೋಟೆಲ್ ಕೂಡ ಇಲ್ಲ. 30 ವರ್ಷದ ಹಿಂದೆ ದೊಡ್ಡ ಜಗಳವೇ ನಡೆದಿತ್ತು. ಆದರೆ ಆಡಳಿತಶಾಹಿಗಳು ಶೋಷಿತರ ಪರವಾಗಿರಲಿಲ್ಲ. ಹೀಗಾಗಿ ಸಮಸ್ಯೆ ಇನ್ನೂ ಜೀವಂತ~ ಎಂದು ಶ್ರೀಮಂತರಾವ್ ವಾಲೀಕಾರ್ ನೋವು ತೋಡಿಕೊಳ್ಳುತ್ತಾರೆ. ಮೂರನೇ ಬಾವಿಗೆ ಬೆಕ್ಕು, ನಾಯಿ, ಕಸ ಬಿದ್ದು ನೀರು ಕೆಟ್ಟಿದೆ.ಶಿಕ್ಷಣ: ಕಗ್ಗನಮಡಿ ಮತ್ತು ಯಳವಂತಗಿಯಲ್ಲಿ 8ನೇ ತನಕದ ಎರಡು ಹಿರಿಯ ಪ್ರಾಥಮಿಕ ಶಾಲೆಗಳಿವೆ. ಆದರೆ 9ನೇ ತರಗತಿಗೆ 8 ಕಿ.ಮೀ. ದೂರದ ಕುರಿಕೋಟಾ ಅಥವಾ ಅವರಾದಕ್ಕೆ ಹೋಗಬೇಕು. ಗಂಟೆಗಟ್ಟಲೇ ಕಾದು, ಅದೇ ಟಂಟಂ ಮೇಲೇರಿ ಹೋಗುವ ಪ್ರಯಾಸ. ಇದರಿಂದ ಶಿಕ್ಷಣ ಕುಂಠಿತಗೊಳ್ಳುತ್ತಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಮಹೇಂದ್ರ.ಈ ಎರಡು ಶಾಲೆಗಳಿಗೆ ಕ್ರೀಡಾ ಮೈದಾನ, ಆವರಣಗೋಡೆ, ಕ್ರೀಡಾ ಹಾಗೂ ಬೋಧನಾ ಸಲಕರಣೆ, ಪ್ರಥಮ ಚಿಕಿತ್ಸಾ ಸೌಲಭ್ಯ ಮತ್ತು ತರಬೇತಿ ಬೇಕು. ಶಾಲೆಯ ಅಕ್ಕಪಕ್ಕದಲ್ಲಿರುವ ಟ್ರಾನ್ಸ್‌ಫಾರ್ಮರ್‌ಗಳನ್ನು ತೆಗೆಯಬೇಕು. ಶಿಕ್ಷಕಿಯರು ಇರುವ ಯಳವಂತಗಿ ಶಾಲೆಯಲ್ಲಿ ಶೌಚಾಲಯವೇ ಇಲ್ಲ. ಕಗ್ಗನಮಡಿಯಲ್ಲಿ ಶಾಲಾಭಿವೃದ್ಧಿ ಸಮಿತಿ ರಚಿಸದ ಪರಿಣಾಮ ಕಾಮಗಾರಿಗಳನ್ನು ಖುದ್ದು ಮುಖ್ಯೋಪಾಧ್ಯಾಯರೇ ನೋಡಿಕೊಳ್ಳಬೇಕಾದ ತುರ್ತು.ತೀರಾ ಬಡತನದಲ್ಲಿರುವ ಹಲವು ಕುಟುಂಬಗಳಿಗೆ ಮನೆಗಳಿಲ್ಲ. ಹುಲ್ಲನ್ನು ನೇಯ್ದು ಸೆಗಣಿ ಹಚ್ಚಿದ ಚಪ್ಪರದಲ್ಲಿ ಬದುಕು ಸವೆಸುತ್ತಾರೆ. ಮನೆ, ಪಡಿತರ, ಮಾಸಾಶನ ಸಿಗಬೇಕು ಎಂದು ಹಿರಿಯ ಜೀವಗಳು ಬೇಡಿಕೆ ಮುಂದಿಡುತ್ತಾರೆ. ಇಲ್ಲಿ ಅಭಿವೃದ್ಧಿ ಕಾಮಗಾರಿಗಳೆಂದರೆ ಕೆಡುವುದು. ಮತ್ತೆ ಅದನ್ನೇ ಕಟ್ಟಿ ಬಿಲ್ ಮಾಡುವುದು. ಹೀಗಾಗಿ ನೀರಿನ ಟ್ಯಾಂಕ್, ಸಿಸಿ ರಸ್ತೆ ಯಾವುದೂ ಆಗಿಲ್ಲ ಎಂದು ಯಶ್ವವಂತರಾವ್ ಆರೋಪಿಸುತ್ತಾರೆ. 

ಕಾಡಿನ ಬಳಿಯ ಮಡಿ (ದುರ್ಗಮ ಪ್ರದೇಶ) ಎಂಬ ಕಾರಣಕ್ಕೆ ಈ ಗ್ರಾಮಕ್ಕೆ ಕಗ್ಗನಮಡಿ ಎಂಬ ಹೆಸರು ಬಂತು. ದಾಖಲೆಯಲ್ಲಿ ಕಗ್ಗನಮರಡಿ ಎಂದಿದೆ ಎಂದು ರಸೂಲ್ ಪಟೇಲ್ ಹೇಳಿದರೆ,ಏಳು ಊರಿನಿಂದ ವಂತಿಗೆ ಸಂಗ್ರಹಿಸುತ್ತಿದ್ದ ಹಿರಿಯರ ಊರು ಎಂಬ ಕಾರಣಕ್ಕೆ ಯಳವಂತಗಿ ಎಂಬ ಹೆಸರು ಬಂತು ಎಂದು ಶಿಕ್ಷಕ ಮಹೇಶ್ ತಿಳಿಸಿದರು. ಈ ಎರಡೂ ಗ್ರಾಮಗಳು ಈಗಲೂ ಊಳಿಗಮಾನ್ಯ ವ್ಯವಸ್ಥೆಯ ದುರ್ಗಮ ಪ್ರದೇಶಗಳಂತೆಯೇ ಇವೆ. ಸ್ವಾತಂತ್ರ್ಯ ಬಂದು ಆರು ದಶಕಗಳ ಬಳಿಕವೂ ಒಂದು ಜೀವ ಉಳಿಸಲು ಅಸಾಧ್ಯವಾದ ಅವ್ಯವಸ್ಥೆ ಪ್ರಾದೇಶಿಕ ಕೇಂದ್ರದ ಪಕ್ಕದಲ್ಲೇ ಇದೆ.

ಪ್ರತಿಕ್ರಿಯಿಸಿ (+)