ನೆನೆಗುದಿಗೆ ಬಿದ್ದ ರಜ್ವಿರಸ್ತೆ ಕಾಮಗಾರಿ ಆರಂಭ

7

ನೆನೆಗುದಿಗೆ ಬಿದ್ದ ರಜ್ವಿರಸ್ತೆ ಕಾಮಗಾರಿ ಆರಂಭ

Published:
Updated:

ಆಳಂದ: ಪಟ್ಟಣದ ಸಿದ್ದಾರ್ಥ ಚೌಕ್-ಬಸ್ ನಿಲ್ದಾಣದ ವರೆಗಿನ ಮುಖ್ಯರಸ್ತೆಯ ವಿಸ್ತರಣೆಯಿಂದ  ಎರಡು ವರ್ಷ ಕಳೆದ ಮೇಲೆ ಈಗ ರಸ್ತೆ ಅಭಿವೃದ್ಧಿ ಕಾಮಗಾರಿ ಕಾರ್ಯ ಆರಂಭಗೊಂಡಿದೆ. ಆದರೂ ರಸ್ತೆಯ ಗುಣಮಟ್ಟದ ಬಗ್ಗೆ ಸಾರ್ವಜನಿಕರಲ್ಲಿ ಸಂಶಯ ಕಾಡುತ್ತಿದೆ.ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಕಳೆದ ತಿಂಗಳನಲ್ಲಿ ಪಟ್ಟಣಕ್ಕೆ ಬಂದಾಗ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು. ರಸ್ತೆ ವಿಸ್ತರಣೆಯಿಂದ ಸುತ್ತಲಿನ ನೂರಾರು ಅಂಗಡಿ ಮುಂಗಟ್ಟುಗಳು ನೆಲಸಮಗೊಳಿಸಲಾಗಿತ್ತು. ಇದಲ್ಲದೆ ಎರಡು ವರ್ಷಗಳಿಂದ ಧೂಳಿನ ವಾತಾರಣದಿಂದ ಜನರು ರೋಸಿ ಹೋಗಿದ್ದರು.

 

ಮನೆ ಕಳೆದುಕೊಂಡ ಸುತ್ತಲಿನ ನಿವಾಸಿಗಳಿಗೆ ಪರಿಹಾರ ಧನ ಒದುಗಿಸಿಕೊಡಬೇಕು. ಮತ್ತು ರಸ್ತೆ ಕಾಮಗಾರಿ ಪ್ರಾರಂಭಿಸಬೇಕು ಎಂದು ಈ ಮೊದಲು ಮಾಜಿ ಉಪಸಭಾಪತಿ ಬಿ.ಆರ್.ಪಾಟೀಲ್, ಶಾಸಕ ಸುಭಾಷ ಗುತ್ತೇದಾರ ಮತ್ತು ಸಿಪಿಐ ಮುಖಂಡ ಮೌಲಾಮುಲ್ಲಾ ನೇತೃತ್ವದಲ್ಲಿ ಹಲವು ಭಾರಿ ಪ್ರತಿಭಟನೆ ಮತ್ತು ರಸ್ತೆ ತಡೆಗಳು ನಡೆದಿದ್ದವು.ಆದರೂ ಈ ರಸ್ತೆ ನಿರ್ಮಾಣ ಕಾಮಗಾರಿ ಪ್ರಾರಂಭಗೊಂಡರು ಆಸ್ತಿ-ಪಾಸ್ತಿ ಕಳೆದುಕೊಂಡ ಜನರಿಗೆ ಪರಿಹಾರ ಧನ ದೊರಕಲೇ ಇಲ್ಲ. ಈಗ ನಡೆಯುತ್ತಿರುವ ರಸ್ತೆ ನಿರ್ಮಾಣ ಕಾಮಗಾರಿಯು ಹಲವಾರು ದೋಷಗಳಿಂದ ಕೂಡಿದೆ ಎಂದು ಪುರಸಭೆ ಸದಸ್ಯ ಅಯೂಬಲಿ ರೋತೆ ದೂರಿದ್ದರು. ಚರಂಡಿ ನಿರ್ಮಾಣ ಕಾರ್ಯ ಕೈಗೊಳ್ಳದೇ ರಸ್ತೆ ನಿರ್ಮಾಣ ಮುಂದುವರಿದಿರುವುದರಿಂದ ಸುತ್ತಲಿನ ರಸ್ತೆಗಳ ನೀರು ಮನೆಯೊಳಗೆ ನುಗ್ಗುವ ಸಾಧ್ಯತೆಗಳಿವೆ.

 

ಇದಲ್ಲದೇ ರಸ್ತೆ ಬದಿಯಲ್ಲಿರುವ ಮನೆಗಳ ನೀರು ಚರಂಡಿಗೆ ಸಾಗಿಸಲು ಅಡ್ಡಿಯಾಗುವ ಸನ್ನಿವೇಶಗಳು ಮುಂದೆ ಎದುರಾಗುತ್ತವೆ ಎಂದರು. ರಸ್ತೆಯ ನಿರ್ಮಾಣದಲ್ಲಿ ಸಮರ್ಪಕ ಮರಳು ಮತ್ತು ಕಲ್ಲು ಬಳಕೆ ಮಾಡಿ ವ್ಯವಸ್ಥಿತ ಕಾರ್ಯ ನಡೆಯುತ್ತಿಲ್ಲ. ನಿರಂತರವಾಗಿ ಕಾಮಗಾರಿ ನಡೆಯದೇ ವಾರದೊಳಗೆ ಎರಡ್ಮೂರು ದಿನ ರಸ್ತೆ ಕಾಮಗಾರಿ ತಡೆಹಿಡಿಯುವುದರಿಂದ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.ಇತ್ತೀಚಿಗೆ ತಾನೆ ಕಾರ್ಮಿಕನೊಬ್ಬ ರಸ್ತೆ ಮೇಲೆ ಸಂಚರಿಸುವಾಗ ಕಲ್ಲಿನಿಂದ ದ್ವಿಚಕ್ರ ಉರುಳಿ ಮೃತಪಟ್ಟ ಘಟನೆ ನೆನಪು ಮರುಕಳಿಸುತ್ತಿದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಈ ರಸ್ತೆ ನಿರ್ಮಾಣ ಕಾಮಗಾರಿ ಪ್ರಾರಂಭಗೊಂಡರು ಸಮರ್ಪಕವಾದ ಮತ್ತು ಶಾಶ್ವತವಾದ ರಸ್ತೆ ನಿರ್ಮಾಣ ನಡೆಯದಿರುವುದು ಮತ್ತು ಶೀಘ್ರವಾಗಿ ಪೂರ್ಣಗೊಳ್ಳದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry