ಗುಲ್ಬರ್ಗಕ್ಕೆ ಎಲೆಕ್ಟ್ರಾನಿಕ್ ಡ್ರೈವಿಂಗ್ ಟೆಸ್ಟ್ ಟ್ರ್ಯಾಕ್

7

ಗುಲ್ಬರ್ಗಕ್ಕೆ ಎಲೆಕ್ಟ್ರಾನಿಕ್ ಡ್ರೈವಿಂಗ್ ಟೆಸ್ಟ್ ಟ್ರ್ಯಾಕ್

Published:
Updated:

ಗುಲ್ಬರ್ಗ: ಗುಲ್ಬರ್ಗದಲ್ಲಿ ‘ಎಲೆಕ್ಟ್ರಾನಿಕ್ ಡ್ರೈವಿಂಗ್ ಟೆಸ್ಟ್ ಟ್ರ್ಯಾಕ್’ (ವಿದ್ಯುನ್ಮಾನ ಚಾಲನ ಪರೀಕ್ಷಾ ಪಥ) ನಿರ್ಮಿಸಲಾಗುವುದು ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತ ಭಾಸ್ಕರ ರಾವ್ ಮಂಗಳವಾರ ಹೇಳಿದರು. ಗುಲ್ಬರ್ಗದಲ್ಲಿ ಮಂಗಳವಾರ ನಡೆದ ಹಿರೋಹೋಂಡಾದ ನವೀಕೃತ ಪ್ರದರ್ಶನ ಮಳಿಗೆ ‘ವೆಂಕಟೇಶ್ವರ ಆಟೋಮೋಟಿವ್ಸ್’ ಉದ್ಘಾಟನೆ ಹಾಗೂ ಎನ್‌ಇಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ದ್ವಿಚಕ್ರವಾಹನ ವಿತರಣೆ  ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ತಂತ್ರಜ್ಞಾನ ಮತ್ತು ಆಧುನೀಕರಣದಿಂದ ಮಾತ್ರವೇ ಭ್ರಷ್ಟಾಚಾರಕ್ಕೆ ತಡೆ ಸಾಧ್ಯ ಎಂದು ಅಭಿಪ್ರಾಯಪಟ್ಟ ಅವರು, ‘ಎಲೆಕ್ಟ್ರಾನಿಕ್ ಡ್ರೈವಿಂಗ್ ಟೆಸ್ಟ್ ಟ್ರ್ಯಾಕ್’ನಲ್ಲಿ ವಿದ್ಯುನ್ಮಾನ ಸಂವೇದಿ ಸೂಚಕಗಳನ್ನು ಬಳಸಿ ಚಾಲನೆಯ ಪರೀಕ್ಷೆ ನಡೆಸಲಾಗುತ್ತದೆ. ಬೆಂಗಳೂರಿನಲ್ಲಿ ಈ ಟ್ರ್ಯಾಕ್ ಆರಂಭಗೊಂಡಿದ್ದು, ರಾಜ್ಯದ ನಾಲ್ಕು ಕಡೆ ಆರಂಭಿಸಲು ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದೇವೆ. ಸ್ಮಾರ್ಟ್ ಕಾರ್ಡ್, ಇ-ಪೇಮೆಂಟ್ ಮತ್ತಿತರ ಜನಪರ ತಂತ್ರಜ್ಞಾನ ವ್ಯವಸ್ಥೆಗಳನ್ನು ಸಾರಿಗೆ ಇಲಾಖೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು. ಚಾಲನಾ ಸಂಸ್ಕೃತಿ: ‘ವಾಹನ ನಿಮ್ಮದು ಆದರೆ ರಸ್ತೆ ನಿಮ್ಮದಲ್ಲ’ ಎಂದ ಅವರು, ಚಾಲನಾ ಸಂಸ್ಕೃತಿಯೇ ಬದಲಾಗಬೇಕಾಗಿದೆ. ಅದಕ್ಕಾಗಿ ಚಾಲನಾ ಪರವಾನಗಿ ಹಾಗೂ ವಾಹನ ನೋಂದಣಿ ಮತ್ತು ಅರ್ಹತಾ ಪತ್ರ ನೀಡುವ ಕ್ರಮದಲ್ಲಿ ಪರಿವರ್ತನೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಮೋಟಾರು ವಾಹನ ಕಾಯಿದೆಗೂ ತಿದ್ದುಪಡಿ ಮಾಡಲಾಗುವುದು ಎಂದರು.ದಿನವೊಂದಕ್ಕೆ ರಾಜ್ಯದಲ್ಲಿ 33 ಮಂದಿ ಹಾಗೂ ದೇಶದಲ್ಲಿ 392 ಮಂದಿ ರಸ್ತೆ ಅಪಘಾತದಲ್ಲಿ ಅಸುನೀಗುತ್ತಾರೆ. ಅವುಗಳು ಸಂಭವಿಸುವುದು ಚಾಲಕರ ಎಡವಟ್ಟಿನಿಂದ ಎಂದ ಅವರು, ಸಾರಿಗೆ ಇಲಾಖೆ ತಮ್ಮ ಕೆಲಸ ಸರಿಯಾಗಿ ಮಾಡದ ಕಾರಣ ಈ ಸಮಸ್ಯೆಗಳು ಉದ್ಭವಿಸಿವೆ. ಇಲಾಖೆಯಲ್ಲಿನ ಸಿಬ್ಬಂದಿ ಕೊರತೆಯಿಂದಾಗಿ ಸಮಸ್ಯೆ ಹೆಚ್ಚಳವಾಗಿವೆ. ಇನ್ನೊಂದೆಡೆ ‘ಕೆಲಸ ಆರಂಭಿಸುವ ಮೊದಲೇ ಮುಗಿಸಬೇಕು’ ಎಂಬ ಜನರ ತರಾತುರಿಯಲ್ಲಿ ಜೀವವೇ ಮುಗಿದು ಹೋಗುತ್ತದೆ ಎಂದರು.ರಾಜ್ಯದಲ್ಲಿ ವಾಹನಗಳ ಸಂಖ್ಯೆಯು ವರ್ಷಕ್ಕೆ ಶೇ.17 ಹೆಚ್ಚಳವಾಗುತ್ತಿದೆ. ಏರುತ್ತಿರುವ ಬೆಲೆ ಹಾಗೂ ಪರಿಸರ ಮಾಲಿನ್ಯ, ಸಂಚಾರ ನಿರ್ವಹಣೆ ಮತ್ತಿತರ ಸಮಸ್ಯೆಗಳಿಗೆ ‘ಸಾರ್ವಜನಿಕ ಸಾರಿಗೆ’ ವ್ಯಾಪ್ತಿ ವಿಸ್ತರಿಸುವುದೇ ಪರಿಹಾರ. ಆಗ ಕಾನೂನು ಪಾಲನೆಗೆ ಇರುವ ತೊಡಕುಗಳು ಇಳಿಕೆಯಾಗುತ್ತವೆ ಎಂದರು.ಹಿರಿಯ ವಕೀಲ ಆರ್.ಎಸ್. ಪಪ್ಪು ರಾಮಾಚಾರ್ ಮಾತನಾಡಿ, ಪಾದಚಾರಿಗಳಿಗೆ ಅನುಕೂಲ ಮಾಡಿಕೊಡುವ ಕೆಲಸ ಆಗಬೇಕು.ನಿಧಾನವಾಗಿ ಚಾಲನೆ ಮಾಡುವ ಮೂಲಕ ಅಪಘಾತ, ಕೇಸು ಎಂದು ವಕೀಲರ ಬಳಿಗೆ ಬರುವ ಪ್ರಸಂಗಗಳನ್ನು ತಪ್ಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಸಾರಿಗೆ ಇಲಾಖೆಯ ಜಂಟಿ ಆಯುಕ್ತ ಸೈಯ್ಯದ್ ಸುಲೇಮಾನ್, ಗುಲ್ಬರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಾರಾಯಣರಾವ್ ಕಾಳೆ, ಸಾರಿಗೆ ಉಪ ಆಯುಕ್ತ ರುದ್ರಾ ನಾಯಕ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಈಶ್ವರ ಅವಟೆ, ಮಳಿಗೆಯ ಕೃಷ್ಣ ಕುಲಕರ್ಣಿ, ಕೇಶವ ಕುಲಕರ್ಣಿ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry