ಗುರುವಾರ , ಜೂನ್ 17, 2021
21 °C

ಸಂವಿಧಾನಕ್ಕೆ ಅಗೌರವ: ಕ್ರಮಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ:ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿ ಎನ್ನುವುದು ನಿರ್ವಿವಾದ. ಪಾಲಿಟೆಕ್ನಿಕ್ ಕಾಲೇಜುಗಳ ಉಪನ್ಯಾಸಕರಿಗೆ ಭಾರತದ ಸಂವಿಧಾನದ ತರಬೇತಿ ನೀಡಲು ಸಿದ್ಧಪಡಿಸಿರುವ ಕೈಪಿಡಿಯಲ್ಲಿ, ಸಂವಿಧಾನದ ಕರಡನ್ನು ಬಿ.ಎನ್. ರಾವ್ ತಯಾರಿಸಿದರು ಎಂದು ಬರೆದು ಅಪಪ್ರಚಾರ ಮಾಡಲಾಗುತ್ತಿದೆ.ಸಂವಿಧಾನಕ್ಕೆ ಅಗೌರವ ತೋರಿದವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗುಲ್ಬರ್ಗ ವಿವಿ ದಲಿತ ಸಂಘದ ವಿದ್ಯಾರ್ಥಿಗಳು, ನೌಕರರು ಕುಲಸಚಿವರ ಮೂಲಕ ರಾಜ್ಯಪಾಲರಿಗೆ ಬುಧವಾರ ಇಲ್ಲಿ ಮನವಿ ಸಲ್ಲಿಸಿದರು.ಗುಲ್ಬರ್ಗ ವಿವಿ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ವಿದ್ಯಾರ್ಥಿ ಒಕ್ಕೂಟ ಹಾಗೂ ಪರಿಶಿಷ್ಟ ಜಾತಿ/ಪಂಗಡ ನೌಕರರ ಸಂಘದ ಸದಸ್ಯರು ಕಾರ್ಯಸೌಧದ ಎದುರು ಪ್ರತಿಭಟನಾ ಧರಣಿ ನಡೆಸಿದರು.

ಪಾಲಿಟೆಕ್ನಿಕ್ ಕಾಲೇಜುಗಳ ಉಪನ್ಯಾಸಕರಿಗೆ ಸಂವಿಧಾನದ ಆಶಯಗಳನ್ನು ತಿಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಒಂದು ಯೋಜನೆಯನ್ನು ರೂಪಿಸಿದೆ.ಇದರಡಿಯಲ್ಲಿ ಬೆಂಗಳೂರಿನ ಎಸ್‌ಜೆಪಿ ಆವರಣದಲ್ಲಿ ತರಬೇತಿ ನೀಡಲಾಗುತ್ತಿದೆ. ರಾಗಿ ಗುಡ್ಡದ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಪಿಯು ಕಾಲೇಜಿನ ಪ್ರಾಂಶುಪಾಲ ಪಿ.ಎ. ಕುಮಾರ್, ಗಿರಿಜಾ, ಶ್ರೀನಿವಾಸಲು, ಇಂದಿರಾಮನಿ, ಎಸ್. ಭಾಸ್ಕರ್ ಅವರು ಜಾತಿ ಕಾರಣವನ್ನು ಮುಂದಿಟ್ಟುಕೊಂಡು ಅಂಬೇಡ್ಕರ್ ಅವರ ಕುರಿತು ಅವಹೇಳನಕಾರಿ ವಿಚಾರಗಳನ್ನು ಮಂಡಿಸಿ ಕೈಪಿಡಿ ಸಿದ್ಧಪಡಿಸಿ ಕೊಟ್ಟಿದ್ದಾರೆ.ಸಾಮಾಜಿಕ ಅಶಾಂತಿಗೆ ಕಾರಣರಾಗುತ್ತಿರುವ ಇವರೆಲ್ಲರ ವಿರುದ್ಧ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ಡಾ. ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನವನ್ನು ಒಪ್ಪಿಕೊಳ್ಳದ ಮನಸ್ಥಿತಿಯಲ್ಲಿರುವ ಮನುವಾದಿಗಳು ಇಲ್ಲಸಲ್ಲದ ವಿಚಾರಗಳನ್ನು ಹರಡುತ್ತಾ ಸಾಮಾಜಿಕ ಅಶಾಂತಿ ಹುಟ್ಟುಹಾಕುತ್ತಿದ್ದಾರೆ ಎಂದು ದಲಿತ ವಿದ್ಯಾರ್ಥಿ ಮುಖಂಡರು ಮಾತನಾಡಿದರು.ನ್ಯಾ. ರಾಮಾ ಜೋಯಿಸ್ ವಿರುದ್ಧ ಘೋಷಣೆ:

ಗುಲ್ಬರ್ಗ ವಿವಿ ಆವರಣದಲ್ಲಿ ಕಾನೂನು ಸಂಶೋಧನಾ ಸ್ನಾತಕೋತ್ತರ ವಿಭಾಗವು ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದ ನಿವೃತ್ತ ನ್ಯಾಯಮೂರ್ತಿ ಡಾ. ಎಂ. ರಾಮಾ ಜೋಯಿಸ್ ಅವರ ವಿರುದ್ಧ ಇದೇ ಸಂದರ್ಭದಲ್ಲಿ ದಲಿತ ವಿದ್ಯಾರ್ಥಿಗಳು, ನೌಕರರು ಘೋಷಣೆಗಳನ್ನು ಕೂಗಿದರು.ಸಾಮಾಜಿಕ ಶಾಂತಿಗೆ ಭಂಗ ತರುವ, ಸಂವಿಧಾನಕ್ಕೆ ವಿರೋಧಾಭಾಸ ವಿಚಾರ ಮಂಡಿಸುವವರನ್ನು ಗುಲ್ಬರ್ಗ ವಿವಿ ಆವರಣಕ್ಕೆ ಆಹ್ವಾನಿಸಬಾರದು ಎಂದು ಕುಲಸಚಿವರನ್ನು ಒತ್ತಾಯಿಸಿದರು.ಗುಲ್ಬರ್ಗ ವಿವಿ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಪ್ರಕಾಶ ಎಸ್. ಶರ್ಮಾ, ಉಪಾಧ್ಯಕ್ಷ ಜೈ ಪ್ರಕಾಶ ಕೆ. ಭಾವಿಮನಿ ಮತ್ತು ಪರಿಶಿಷ್ಟ ಜಾತಿ/ಪಂಗಡ ನೌಕರರ ಸಂಘದ ಅಧ್ಯಕ್ಷ ಪ್ರೊ. ಎಸ್.ಪಿ. ಮೇಲಕೇರಿ ಮತ್ತಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.