ಗುರುವಾರ , ಜೂನ್ 24, 2021
29 °C

ನಗರದಾದ್ಯಂತ ಸ್ವಚ್ಛತೆಗೆ ಆದ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: `ನಗರದ ಸ್ವಚ್ಛತೆ, ನಗರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವುದಕ್ಕೆ ಆದ್ಯತೆಯೊಂದಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಇದಕ್ಕೆ ಸಾರ್ವಜನಿಕರ ಸಹಕಾರವೂ ಬಹಳ ಮುಖ್ಯ~ ಎಂದು ಮಹಾಪೌರ ಸೋಮಶೇಖರ್ ಮೇಲಿನಮನಿ ಶುಕ್ರವಾರ ಇಲ್ಲಿ ಹೇಳಿದರು.ಮಹಾಪೌರರಾಗಿ ಆಧಿಕಾರ ವಹಿಸಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಬೀದಿ ನಾಯಿಗಳ ಉಪಟಳ ಅತಿಯಾಗಿದ್ದು, ಇವುಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು. ಮಾಂಸದಂಗಡಿಗಳ ತ್ಯಾಜ್ಯವನ್ನು ಸೂಕ್ತವಾಗಿ ವಿಲೇವಾರಿ ಮಾಡುವುದರಿಂದ ಬೀದಿನಾಯಿಗಳನ್ನು ಹತೋಟಿಗೆ ತರಬಹುದು ಎಂದು ಕಂಡುಕೊಳ್ಳಲಾಗಿದೆ. 10 ಪೌರಕಾರ್ಮಿಕರ ಎರಡು ವಿಶೇಷ ತಂಡಗಳನ್ನು ನಿರ್ಮಿಸಿ ಪ್ರತಿ ದಿನ ಒಂದು ವಾರ್ಡ್‌ನಲ್ಲಿ ವಿಶೇಷ ಸ್ವಚ್ಛತಾ ಆಂದೋಲನ ನಡೆಸಲಾಗುವುದು ಎಂದರು.ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಲಾಗುವುದು. ಪಾಲಿಕೆಯ ಆದಾಯವನ್ನು ಹೆಚ್ಚಿಸುವುದರ ಜತೆಯಲ್ಲಿ ಆದಾಯ ಸೋರಿಕೆಯನ್ನು ತಡೆಯಲು ಪ್ರಯತ್ನಿಸುತ್ತೇನೆ ಎಂದು ವಿವರಿಸಿದರು.

ಮುಖ್ಯವಾಗಿ ಮಹಾನಗರ ಪಾಲಿಕೆಯಲ್ಲಿ `ಎ~ ದರ್ಜೆಯ 11 ಹಾಗೂ `ಬಿ~ ದರ್ಜೆಯ 6 ಹುದ್ದೆಗಳು ಖಾಲಿ ಉಳಿದಿವೆ. ಇವುಗಳನ್ನು ಭರ್ತಿ ಮಾಡುವಂತೆ ನಿಯೋಗ ತೆರಳಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದರು.ನಗರದ ಅಭಿವೃದ್ಧಿಗೆ ಮುಖ್ಯವಾಗಿ ಸಾರ್ವಜನಿಕರೆಲ್ಲರೂ ಸಹಕರಿಸಬೇಕು. ಮುಂದಿನ ಎರಡು ತಿಂಗಳಲ್ಲಿ ಆಡಳಿತದಲ್ಲಿ ಸುಧಾರಣೆ ಮತ್ತು ನಗರ ಸ್ವಚ್ಛತೆ ಕೆಲಸವನ್ನು ನಿಯಂತ್ರಣ ಮಾಡುತ್ತೇನೆ ಎಂದು ಹೇಳಿದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಶಾಸಕ ಸುಭಾಷ್ ಗುತ್ತೇದಾರ, ಜೆಡಿಎಸ್ ಮುಖಂಡರಾದ ದೇವೇಗೌಡ ತೆಲ್ಲೂರ್, ಅಪ್ಪುಗೌಡ ಸಿ. ಪಾಟೀಲ, ವಿಜಯಕುಮಾರ ಸೆವಲಾನಿ, ಸಜ್ಜಾದ್ ಅಲಿ ಮತ್ತಿತರರು ಇದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.