ಸೋಮವಾರ, ಮೇ 23, 2022
21 °C

ಅನ್ಯಾಯ ಸರಿಪಡಿಸದಿದ್ದರೆ ಜನ ಕ್ಷಮಿಸುವುದಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ರೈಲ್ವೆ ಬಜೆಟ್‌ನಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಿಕೊಳ್ಳಲು ಈಗಲೂ ಕಾಲ ಮಿಂಚಿಲ್ಲ. ರೈಲ್ವೆ ಬಜೆಟ್ ಮೇಲಿನ ಚರ್ಚೆಯ ವೇಳೆಯಲ್ಲಾದರೂ ಈ ಭಾಗದ ಜನಪ್ರತಿನಿಧಿಗಳು ಜನರ ಆಗ್ರಹವನ್ನು ಕೇಂದ್ರದ ಗಮನಕ್ಕೆ ತಂದು ನ್ಯಾಯ ದೊರಕಿಸಲು ಶ್ರಮಿಸಬೇಕು ಎಂದು ಮಾಜಿ ಉಪಸಭಾಪತಿ ಬಿ.ಆರ್.ಪಾಟೀಲ ಸಲಹೆ ಮಾಡಿದರು.‘ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮುಂದಿಟ್ಟ ಪ್ರಸ್ತಾವಗಳು ರೈಲ್ವೆ ಬಜೆಟ್‌ನಲ್ಲಿ ಸೇರ್ಪಡೆಯಾಗುತ್ತವೆ. ಆದರೆ ಈ ಭಾಗದವರೇ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದ ಧರ್ಮಸಿಂಗ್ ಈ ಭಾಗದ ಜನತೆಯ ಆಗ್ರಹವನ್ನು ರೈಲ್ವೆ ಸಚಿವರ ಗಮನಕ್ಕೆ ತಂದಿಲ್ಲ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.ರೈಲ್ವೆ ಬಜೆಟ್ ಚರ್ಚೆಯ ವೇಳೆಗಾದರೂ ಅನ್ಯಾಯ ಸರಿಪಡಿಸುವಂತೆ ಮನವರಿಕೆ ಮಾಡದಿದ್ದರೆ ಜನ ಕ್ಷಮಿಸುವುದಿಲ್ಲ” ಎಂದು ಎಚ್ಚರಿಕೆ ನೀಡಿದರು.ಪ್ರಜಾವಾಣಿ ಜತೆ ಮಾತನಾಡಿದ ಅವರು, “ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಈ ಭಾಗದ ಬಹಳಷ್ಟು ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಭಾಗದಿಂದ ಕೂಲಿಗಾಗಿ ಬೆಂಗಳೂರು ಕಡೆ ಹೋಗುವ ಮಂದಿಯೂ ಸಾಕಷ್ಟು ಇದ್ದಾರೆ. ವೈದ್ಯಕೀಯ ಸೌಲಭ್ಯ, ಸರ್ಕಾರದ ಮಟ್ಟದಲ್ಲಿ ಕೆಲಸ ಕಾರ್ಯಗಳಿಗಾಗಿ ಪ್ರತಿದಿನ ಗುಲ್ಬರ್ಗ ರೈಲು ನಿಲ್ದಾಣ ಮೂಲಕ 50 ಸಾವಿರ ಮಂದಿ ಪ್ರಯಾಣ ಮಾಡುತ್ತಾರೆ. ವಾಸ್ತವ ಹೀಗಿದ್ದರೂ ಇಲ್ಲಿಂದ ಬೆಂಗಳೂರಿಗೆ ಹೊಸ ರೈಲು ಆರಂಭಿಸುವ ಬೇಡಿಕೆಗೆ ಸ್ಪಂದಿಸದಿರುವುದು ದುರದೃಷ್ಟಕರ” ಎಂದು ಹೇಳಿದರು.ಗುಲ್ಬರ್ಗ ಮೂಲಕ ದೇಶದ 10 ರಾಜ್ಯಗಳ ರಾಜಧಾನಿಗೆ ರೈಲು ಹೋಗುತ್ತದೆ. ಆದರೆ ನಮ್ಮ ರಾಜ್ಯದ ರಾಜಧಾನಿಗೆ ಹೋಗಲು ಇಲ್ಲಿನ ಜನತೆಗೆ ಸೂಕ್ತ ರೈಲು ಸೌಕರ್ಯ ಇಲ್ಲ. ಸೊಲ್ಲಾಪುರವರೆಗೆ ರೈಲ್ವೆ ಜೋಡಿ ಹಳಿ ನಿರ್ಮಾಣ, ಗುಲ್ಬರ್ಗ ರೈಲ್ವೆ ವಿಭಾಗ, ಬೀದರ್- ಗುಲ್ಬರ್ಗ ರೈಲು ಹಳಿ ನಿರ್ಮಾಣಕ್ಕೆ ಹೆಚ್ಚುಹಣ ಮತ್ತಿತರ ಬೇಡಿಕೆಗಳಿಗೆ ಬಜೆಟ್‌ನಲ್ಲಿ ಸ್ಪಂದನೆ ಸಿಕ್ಕಿಲ್ಲ ಎಂದು ವಿವರಿಸಿದರು.ರಾಜ್ಯಸಭಾ ಚುನಾವಣೆ: ರಾಜ್ಯಸಭಾ ಚುನಾವಣೆಯಲ್ಲಿ ಲಿಂಗಾಯಿತ ಧರ್ಮಕ್ಕೆ ಸೇರಿದ ಡಾ.ಕೆ.ಮರುಳಸಿದ್ಧಪ್ಪ ಅವರನ್ನು ‘ಬಲಿಪಶು’ ಮಾಡಲು ಹೊರಟಿರುವುದು ಖಂಡನೀಯ. ಗೆಲ್ಲುವ ಅವಕಾಶ ಇದ್ದಾಗ ಹಣ ಇದ್ದವರಿಗೆ ಟಿಕೆಟ್ ನೀಡಿ, ಸೋಲು ಖಚಿತ ಎಂಬ ಪರಿಸ್ಥಿತಿ ಇರುವಾಗ ಲಿಂಗಾಯಿತರನ್ನು ಕಣಕ್ಕೆ ಇಳಿಸುವ ಜಾಯಮಾನ ಸರಿಯಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ನಿಜವಾಗಿ ಲಿಂಗಾಯಿತ ಸಮುದಾಯದ ಬಗ್ಗೆ ಗೌರವ ಇದ್ದರೆ ಗೆಲ್ಲುವ ಅವಕಾಶ ಇದ್ದಾಗ ಈ ಸಮುದಾಯಕ್ಕೆ ಅವಕಾಶ ನೀಡಬೇಕಿತ್ತು ಎಂದು ಅಭಿಪ್ರಾಯಪಟ್ಟರು.“ಮರುಳಸಿದ್ಧಪ್ಪ ಅವರು ಲಿಂಗಾಯಿತ ಸಮುದಾಯಕ್ಕೆ ಸೇರಿದವರು ಎಂದು ಒತ್ತಿಹೇಳುವ ಮೂಲಕ ಬಿಜೆಪಿಯ ಲಿಂಗಾಯಿತ ಮತಗಳನ್ನು ಸೆಳೆಯಲು ಜೆಡಿಎಸ್ ತಂತ್ರ ರೂಪಿಸಿದೆ. ಆದರೆ ರಾಜ್ಯಸಭಾ ಚುನಾವಣೆಯಲ್ಲಿ ಇದು ಸಾಧ್ಯವಾಗದ ಮಾತು. ಬೂಟಾಟಿಕೆ, ಸಮಯಸಾಧಕತನದಿಂದ ಲಿಂಗಾಯಿತ ಸಮುದಾಯವನ್ನು ದಿಕ್ಕುತಪ್ಪಿಸುವ ಹುನ್ನಾರ ಇದಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಅಭಿಪ್ರಾಯ ಇರುವ ಬಹಳ ಮಂದಿ ಕಾಂಗ್ರೆಸ್ ಪಕ್ಷದಲ್ಲಿ ಇದ್ದಾರೆ. ಆದರೆ ಬಹಿರಂಗವಾಗಿ ಯಾರೂ ಅಸಮಾಧನ ವ್ಯಕ್ತಪಡಿಸಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.