ಭಾನುವಾರ, ಮೇ 22, 2022
24 °C

ಈಶಾನ್ಯ ಪದವೀಧರ ಕ್ಷೇತ್ರ ಬಿಜೆಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ವಿಧಾನ ಪರಿಷತ್ ಈಶಾನ್ಯ ಪದವೀಧರ ಕ್ಷೇತ್ರವು ಬಿಜೆಪಿ ಅಭ್ಯರ್ಥಿಗಳಿಗೆ ಕಾಯಂ ಗೆಲುವುತಂದುಕೊಡುವ ಮೂಲಕ ಬಳುವಳಿಯನ್ನು ನೀಡುತ್ತಾ ಬಂದಿದೆ. ಡಾ.ಎಂ.ಆರ್. ತಂಗಾ ಅವರ ಕಾಲದಿಂದಲೂ ಈ ಪರಂಪರೆ ಮುಂದುವರಿದಿದೆ.ಈ ಬಾರಿಯೂ ಬಿಜೆಪಿ ಗೆಲುವಿನ ಬಗ್ಗೆ ಯಾವುದೇ ಸಂಶಯವಿಲ್ಲ. ಆದರೆ ದಾಖಲೆ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ದಾಖಲಿಸಬೇಕು ಎನ್ನುವ ನಿರೀಕ್ಷೆ ಹೊಂದಿದ್ದೇವೆ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಸೋಮವಾರ ಇಲ್ಲಿ ಹೇಳಿದರು.ಗಂಜ್ ಪ್ರದೇಶದ ದಾಲ್‌ಮಿಲ್ ಒಕ್ಕೂಟದ ಎಸ್.ಬಿ. ಪಾಟೀಲ ಸಭಾಂಗಣದಲ್ಲಿ ಗುಲ್ಬರ್ಗ ಬಿಜೆಪಿ ಉತ್ತರ ವಲಯದ ಕಾರ್ಯಕರ್ತರು ಆಯೋಜಿಸಿದ್ದ ಪದವೀಧರ ಕ್ಷೇತ್ರದ ಮತದಾರರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.`ಈಗಾಗಲೇ ಈ ಭಾಗದಿಂದ ಒಂದು `ಹೋರಿ~ ಶಶೀಲ್ ಜಿ. ನಮೋಶಿ ಅವರನ್ನು ಆಯ್ಕೆ ಮಾಡಿದ್ದೀರಿ. ಇನ್ನೊಂದು `ಹೋರಿ~ ಅಮರನಾಥ ಪಾಟೀಲರನ್ನು ಆಯ್ಕೆ ಮಾಡಿದರೆ, ಅಭಿವೃದ್ಧಿ ಬಂಡಿ ಸರಾಗವಾಗಿ ಚಲಿಸುತ್ತದೆ. `ಪೈಲ್ವಾನ್~ ರೇವುನಾಯಕ ಬೆಳಮಗಿ ಅವರು ಅಭಿವೃದ್ಧಿಗೆ ಜೊತೆಯಾಗುತ್ತಾರೆ~ ಎಂದು ಅನ್ವರ್ಥಕವಾಗಿ ನುಡಿದರು.ಗುಲ್ಬರ್ಗದಲ್ಲಿ ಭದ್ರವಾಗಿದ್ದ ಕಾಂಗ್ರೆಸ್ ಕೋಟೆಯನ್ನು ಛಿದ್ರ ವಿಛಿದ್ರಗೊಳಿಸಿರುವ ಬಿಜೆಪಿ ಕಾರ್ಯಕರ್ತರು ಪಕ್ಷವನ್ನು ಸಾಕಷ್ಟು ಬಲಪಡಿಸುತ್ತಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಾಲ್ಕು ವರ್ಷದಲ್ಲಿ ಗುಲ್ಬರ್ಗದ ಚಿತ್ರಣ ಬದಲಾಗುತ್ತಿದ್ದು, ಮುಂಬರುವ ದಿನದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಬೇಕೆನ್ನುವ ನಿರೀಕ್ಷೆ ಹೊಂದಿದ್ದೇವೆ. ಗುಲ್ಬರ್ಗಕ್ಕೆ ಅನುದಾನ ಬಿಡುಗಡೆ ವಿಷಯದಲ್ಲಿ ಹಿಂದೆಮುಂದೆ ನೋಡಿದ ಸಂದರ್ಭಗಳೆ ಇಲ್ಲ; ಕೆಲವು ಸಂದರ್ಭದಲ್ಲಿ ವಿಳಂಬ ಆಗಿರಬಹುದು ಅಷ್ಟೆ ಎಂದು ವಿವರಿಸಿದರು.ಸಂಸದ ಅನಂತಕುಮಾರ್ ಮಾತನಾಡಿ, `ಆರು ಕಡೆಗಳಲ್ಲಿ ನಡೆಯುತ್ತಿರುವ ವಿಧಾನಪರಿಷತ್ ಚುನಾವಣೆಯಲ್ಲಿ ಆರಕ್ಕೆ ಆರು ಕಡೆಗಳಲ್ಲಿ ಬಿಜೆಪಿ ಪಕ್ಷ ಖಂಡಿತ ಗೆಲುವು ದಾಖಲಿಸಲಿದೆ~ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಾಜಪೇಯಿ ಅವರ ಆಡಳಿತಾವಧಿಯಲ್ಲಿ ವಿವಿಧ ಯೋಜನೆಗಳನ್ನು ರೂಪಿಸುವ ಮೂಲಕ ದೇಶದಲ್ಲಿ ಸಾಕಷ್ಟು ಪರಿವರ್ತನೆ ತರಲು ಯತ್ನಿಸಿದರು. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ದೇಶದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದರು.ಪದವೀಧರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಅಮರನಾಥ ಪಾಟೀಲ ಮಾತನಾಡಿ, `ಪ್ರತಿಬಾರಿಯೂ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದಂತೆ ಈ ಬಾರಿಯು ನನ್ನನ್ನು ಗೆಲ್ಲಿಸಬೇಕು~ ಎಂದು ವಿನಂತಿಸಿಕೊಂಡರು.ಸಂಸದ ಪ್ರಹ್ಲಾದ ಜೋಶಿ, ಸಚಿವ ರೇವುನಾಯಕ ಬೆಳಮಗಿ, ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ. ನಮೋಶಿ, ಅರುಣ ಶಹಾಪುರ, ಎಂಎಸ್‌ಐಎಲ್ ಅಧ್ಯಕ್ಷ ವಿಕ್ರಮ ಪಾಟೀಲ, ಜಿಡಿಎ ಅಧ್ಯಕ್ಷ ವಿದ್ಯಾಸಾಗರ ಕುಲಕರ್ಣಿ, ತ್ರಿವಿಕ್ರಮ ಜೋಶಿ, ಬಿ.ಜಿ. ಪಾಟೀಲ ಮತ್ತಿತರರು ವೇದಿಕೆಯಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.