ಬುಧವಾರ, ಏಪ್ರಿಲ್ 21, 2021
33 °C

371ನೇ ವಿಧಿ ಜಾರಿಗೆ ದೆಹಲಿ ಚಲೋ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಆತ್ಮಾಹುತಿಗೆ ಸಿದ್ಧ, ಹಣ-ಜನ ಬಲದ ನೆರವು, ಪಕ್ಷಕ್ಕೆ ರಾಜೀನಾಮೆ ಕೊಟ್ಟು ಹೋರಾಟದ ನೇತೃತ್ವ ವಹಿಸಲು ಸಲಹೆ, ನಂಜುಂಡಪ್ಪ ವರದಿ ಅನುಷ್ಠಾನವನ್ನು ಶಾಸನಾತ್ಮಕ ಜಾರಿಗೆ ಒತ್ತಾಯ, ಮತ್ತಿತರ ಕೆಚ್ಚಿನ ಸಲಹೆಗಳ ಬಂದರೂ, 371ನೇ ವಿಧಿ ಜಾರಿಗೆ ಒತ್ತಾಯಿಸಿ ಕೇಂದ್ರ ಬಜೆಟ್ ಅಧಿವೇಶನ ಸಂದರ್ಭದಲ್ಲಿ ದೆಹಲಿ ಚಲೋ ನಡೆಸುವ ನಿರ್ಣಯವನ್ನು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯು ಶುಕ್ರವಾರ ಅಂಗೀಕರಿಸಿದೆ. 371ನೇ ವಿಧಿ ಜಾರಿ ಕುರಿತು ಚರ್ಚಿಸಲು ಸುಲಫಲ ಮಠದಲ್ಲಿ ಶುಕ್ರವಾರ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಸಭೆ ನಡೆಯಿತು. ಮಾಜಿ ಸಚಿವ ವೈಜ್ಯನಾಥ ಪಾಟೀಲ್ ಸಭೆಯ ನೇತೃತ್ವ ವಹಿಸಿದ್ದರು. ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರವು 371ನೇ ವಿಧಿಯನ್ನು ಇದೇ ಬಜೆಟ್ ಅಧಿವೇಶನಲ್ಲಿ ಜಾರಿಗೊಳಿಸಬೇಕು. 371ನೇ ವಿಧಿ ಜಾರಿಯನ್ನು ತಿರಸ್ಕರಿಸಿ ಗೃಹ ಸಚಿವ ಚಿದಂಬರಂ ಅವರು ನೀಡಿರುವ ಹೇಳಿಕೆಯನ್ನು ಸಮಿತಿಯು ಖಂಡಿಸುತ್ತದೆ. ಅಲ್ಲದೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ನಿಯೋಗ ಕೇಂದ್ರಕ್ಕೆ ಹೋಗಿ ಬಂದ ಬಳಿಕ, ದೊರೆಯುವ ಪ್ರತಿಕ್ರಿಯೆ ಮೇಲೆ ಕೇಂದ್ರದ ಬಜೆಟ್ ಅಧಿವೇಶನ ಸಂದರ್ಭದಲ್ಲಿ ದೆಹಲಿ ಚಲೋ ನಡೆಸಿ ಸಂಸತ್‌ಗೆ ಘೆರಾವ್ ಹಾಕಲಾಗುವುದು ಎಂಬ ಮೂರು ನಿರ್ಣಯಗಳನ್ನು ಸಭೆ ಕೈಗೊಂಡಿದೆ ಎಂದು ಹೇಳಿದರು.ನಮಗೆ ವಿದರ್ಭ ಅಥವಾ ಇನ್ನಿತರ ಮಾದರಿ ಬೇಡ. ಬೇರೆ ಅನುದಾನ ನೀಡುವ ಹೇಳಿಕೆ ನೀಡಿ ಹೋರಾಟವನ್ನು ದಿಕ್ಕು ತಪ್ಪಿಸುವ ಪ್ರಯತ್ನ ಬೇಡ. ತೆಲಂಗಾಣ ಮಾದರಿಯಂತೆ ಉದ್ಯೋಗ ಮೀಸಲಾತಿ ಕಲ್ಪಿಸುವ 371ನೇ ವಿಧಿ ಜಾರಿಗೊಳಿಸಲಿ ಎಂದು ಅವರು ಒತ್ತಾಯಿಸಿದರು.ಸುಲಫಲ ಮಠದ ಮಹಾಂತ ಶಿವಾಚಾರ್ಯ ಮಾತನಾಡಿ, ಎಲ್ಲ ಹೋರಾಟಕ್ಕೆ ಸಿದ್ಧವಾದ 100 ಸ್ವಾಮೀಜಿಗಳು ದೆಹಲಿ ಚಲೋಗೆ ಸಿದ್ಧರಾಗಿದ್ದೇವೆ. ಒಟ್ಟಾರೆ ಸಾವಿರ ಮಂದಿ ದೆಹಲಿಗೆ ಹೋಗಲಿದ್ದೇವೆ ಎಂದರು.ಇದಕ್ಕೆ ಮೊದಲು ನಡೆದ ಸಭೆಯಲ್ಲಿ ಮಾತನಾಡಿದ ರೈತ ಹೋರಾಟ ಸಮಿತಿಯ ಅಧ್ಯಕ್ಷ ಕೇದಾರಲಿಂಗಯ್ಯ ಅವರು, ವೈಜ್ಯನಾಥ ಪಾಟೀಲ್ ಪಕ್ಷದಿಂದ ಹೊರಬಂದು ಹೋರಾಟದ ನೇತೃತ್ವ ವಹಿಸಲಿ. ನಮ್ಮ 100 ಮಂದಿಯ ತಂಡವೊಂದು ಆತ್ಮಾಹುತಿಗೂ ಸಿದ್ಧವಾಗಿದೆ. ಸುಲಫಲ ಸ್ವಾಮೀಜಿ ಮತ್ತು ಪಾಟೀಲ್ ನೇತೃತ್ವದಲ್ಲಿ ಎಲ್ಲರೂ ಒಪ್ಪಿದ ಮಾರ್ಗದಲ್ಲಿ ನಾವು ಹೋರಾಟ ಮಾಡುತ್ತೇವೆ ಎಂದರು.ಹೈ-ಕ ಪ್ರಜಾ ಸಮಿತಿ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ ಮಾತನಾಡಿ, ಹೋರಾಟಗಳು ಪ್ರಚಾರಕ್ಕೆ ಸೀಮಿತಗೊಳ್ಳಬಾರದು. ಪಕ್ಷ, ಸ್ವಹಿತಾಸಕ್ತಿಗಳನ್ನು ಮರೆತು ಪ್ರಾಮಾಣಿಕವಾಗಿ ಎಲ್ಲರು ಪಾಲ್ಗೊಳ್ಳಬೇಕು. 371ನೇ ವಿಧಿಯನ್ನು ಕೇಂದ್ರವು, ನಂಜುಂಡಪ್ಪ ವರದಿಯನ್ನು ರಾಜ್ಯ ಸರ್ಕಾರವು ಶಾಸನಬದ್ಧವಾಗಿ ಜಾರಿಗೊಳಿಸಬೇಕು. ಈ ನಿಟ್ಟಿನ ಹೋರಾಟಕ್ಕೆ ಬೇಕಾದ ಹಣ ಒದಗಿಸಲು ಎಚ್‌ಕೆಸಿಸಿಐ ವತಿಯಿಂದ ಉದ್ಯಮಿಗಳು ಸಿದ್ಧರಿದ್ದೇವೆ ಎಂದು ಒತ್ತಾಯಿಸಿದರು.ಪ್ರಾಧ್ಯಾಪಕ ಬಸವರಾಜ ಸಬರದ ಮಾತನಾಡಿ, ‘ಇದು ಉಳ್ಳವರ ಹೋರಾಟವಲ್ಲ. ಈ ಭಾಗದ ಯುವಕ- ಯುವತಿಯರಿಗೆ ಹಿಂದುಳಿದವರಿಗೆ ಸಾಮಾಜಿಕ ನ್ಯಾಯ ಒದಗಿಸುವ 371ನೇ ವಿಧಿ ಜಾರಿಗಾಗಿ ಹೋರಾಟ. ಇದರಲ್ಲಿ ಪಕ್ಷಭೇದ ಮರೆತು ಎಲ್ಲರು ಪಾಲ್ಗೊಳ್ಳಬೇಕು ಎಂದರು.ಶಿವರಾಮ ಮೋಘಾ, ಲಕ್ಷ್ಮಣ ದಸ್ತಿ, ವೀರಣ್ಣ ಕೋರಳ್ಳಿ, ಅರುಣ್‌ಕುಮಾರ್ ಪಾಟೀಲ್, ಎಚ್.ಎಸ್. ಪಾಟೀಲ್, ರಜಾಕ್ ಪಟೇಲ್, ವಿದ್ಯಾಧರ ಗುರೂಜಿ, ದೇವೀಂದ್ರ, ವಸಂತರಾವ್, ಬಸವಂತರಾವ್ ಕೋರಿ, ತಿಪ್ಪಣ್ಣಪ್ಪ ಕಮಕನೂರ ಮತ್ತಿತರರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.