ಶನಿವಾರ, ಮೇ 21, 2022
25 °C

ದುರ್ವಾಸನೆ ಬೀರುವ ಹಳ್ಳ: ರೋಗ ಭೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹಾಪುರ: ಪಟ್ಟಣದ ಬಸ್ ನಿಲ್ದಾಣ- ಕೋರ್ಟ್ ರಸ್ತೆಯ ಬಸವೇಶ್ವರ ಬಡಾವಣೆಯ ಸಂಪರ್ಕದ ಕೊಂಡಿಯಾಗಿರುವ ಹಳ್ಳಕ್ಕೆ ಸೇತುವೆ ನಿರ್ಮಿಸಲಾಗಿದ್ದು ಈ ಹಳ್ಳಕ್ಕೆ ತ್ಯಾಜ್ಯ ವಸ್ತುಗಳನ್ನು ಎಸೆಯುತ್ತಿರುವುದರಿಂದ ಇಡೀ ಪ್ರದೇಶ ಗಬ್ಬೆದ್ದು ನಾರುತ್ತಿದೆ. ಅಲ್ಲಿನ ಪ್ರದೇಶದಲ್ಲಿ ನಡೆದಾಡಬೇಕೆಂದರೆ ಮೂಗಿಗೆ ಕರವಸ್ತ್ರ ಇಲ್ಲವೆ ಉಸಿರು ಬಿಗಿ ಹಿಡಿದು ಸಾಗಬೇಕು. ದುರ್ವಾಸನೆಯಿಂದ ನಿವಾಸಿಳಲ್ಲಿ ರೋಗ ರುಜಿನದ ಭೀತಿ ಹೆಚ್ಚಿಸಿದೆ.ಪಟ್ಟಣದ ಹೊರವಲಯದಲ್ಲಿರುವ ಹಳ್ಳಕ್ಕೆ ಮಳೆಗಾಲದಲ್ಲಿ ಹಾಗೂ ಕಾಲುವೆಯ ಸೋರಿಕೆಯ  ನೀರು ಸಂಗ್ರಹವಾಗಿ ಹರಿಯುತ್ತದೆ. ಪುರಸಭೆಯ ಸರಿಯಾದ ನಿರ್ವಹಣೆ ಇಲ್ಲದೆ ಹಳ್ಳದಲ್ಲಿ  ಜಾಲಿ ಗಿಡ ಬೆಳೆದು ನಿಂತಿವೆ. ಇದರಿಂದ ಸುಗಮವಾಗಿ ನೀರು ಹರಿಯಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಹಳ್ಳದ ಅಕ್ಕಪಕ್ಕ ಬಡಾವಣೆಯ ನಿವಾಸಿಗಳು ಜಾಗವನ್ನು ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಿಸಿದ್ದಾರೆ. ವಿಸ್ತಾರವಾದ ಹಳ್ಳವು ಇಕ್ಕಟ್ಟಾಗಿದೆ ಎನ್ನುತ್ತಾರೆ ಬಸವೇಶ್ವರ ಬಡಾವಣೆಯ ನಿವಾಸಿ  ಸಾಯಿನಾಥ.ಹಳ್ಳಕ್ಕೆ ನಿರ್ಮಿಸಲಾದ ಸೇತುವೆಯ ಪಕ್ಕದಲ್ಲಿ ಕೆಲ ಅಂಗಡಿ ವ್ಯಾಪಾರಿಗಳು ಕೊಳೆತ ಹಣ್ಣು, ತೆಂಗಿನಕಾಯಿ ಸಿಪ್ಪೆ ಎಸೆಯುತ್ತಾರೆ. ಅಲ್ಲದೆ ಸತ್ತ ಹಂದಿ, ನಾಯಿ ಇನ್ನಿತರ ಪ್ರಾಣಿಗಳನ್ನು ತಂದು ಬಿಸಾಡುತ್ತಾರೆ ಇದರಿಂದ ಸೇತುವೆ  ಯಲ್ಲಿ ಸಾಗಬೇಕೆಂದರೆ ಮೂಗಿಗೆ ಕರವಸ್ತ್ರ ಹಿಡಿದುಕೊಂಡು ದುರ್ವಾಸನೆ ಸೇವಿಸುತ್ತಾ ಸಾಗಬೇಕು. ರಾತ್ರಿ ಸಮಯದಲ್ಲಿ ಕೂಡಾ ಗಾಳಿ ಬೀಸಿದಾಗ ಬಡಾವಣೆಯ ಪ್ರದೇಶದಲ್ಲಿ ದುವಾರ್ಸನೆ ಬಡಿಯುತ್ತದೆ. ಸ್ವಚ್ಛತೆ, ಸುರಕ್ಷತೆ, ಆರೋಗ್ಯದ ರಕ್ಷಣೆಯ ಹೊಣೆ ಹೊತ್ತ ಪುರಸಭೆ ಸಿಬ್ಬಂದಿಯೇ ತ್ಯಾಜ್ಯ ವಸ್ತುವನ್ನು ತಂದು ಎಸೆಯುತ್ತಾರೆ ಯಾರ ಮುಂದೆ ಹೇಳಬೇಕು ನಮ್ಮ ಗೋಳು ಎನ್ನುವುದು ಬಡಾವಣೆಯ ನಿವಾಸಿಗಳು ಪ್ರಶ್ನಿಸುತ್ತಾರೆ.ಅಲ್ಲದೆ ಬಸ್ ನಿಲ್ದಾಣದ ಹಿಂದುಗಡೆ ಸಾರ್ವಜನಿಕ ಸುಲಭ ಶೌಚಾಲವಿದೆ. ಮೂತ್ರ ವಿಸರ್ಜನೆಯನ್ನು ಸಹ ನೇರವಾಗಿ ಇದೆ ಸೇತುವೆ ಬಳಿ ಚರಂಡಿ ಮೂಲಕ ಹರಿಯ ಬಿಟ್ಟಿದ್ದಾರೆ. ಕೆಲ ಖಾಸಗಿ ಆಸ್ಪತ್ರೆಯ ತ್ಯಾಜ್ಯ ವಸ್ತುಗಳನ್ನು ಸಹ ಎಸೆಯುತ್ತಾರೆ. ಪ್ರತಿ ಐದಾರು ತಿಂಗಳಲ್ಲಿ ಸತ್ತ ನವಜಾತು ಶಿಶುಗಳು ಪತ್ತೆಯಾಗುತ್ತಿರುವುದು ಆತಂಕದ ವಿಷಯವಾಗಿದೆ.ಸೇತುವೆ ಹತ್ತಿರ ಬೀದಿ ದೀಪದ ವ್ಯವಸ್ಥೆಯಿಲ್ಲ. ರಾತ್ರಿ ಹತ್ತು ಗಂಟೆಯ ನಂತರ  ಕಳ್ಳಕಾಕರ ಕಾಟವು ಹೆಚ್ಚಾಗಿದೆ ಎನ್ನುತ್ತಾರೆ ಬಡಾವಣೆಯ ನಿವಾಸಿ ವಕೀಲರಾದ ಆರ್.ಎಂ.ಹೊನ್ನಾರಡ್ಡಿ.ಪುರಸಭೆಯ ತಕ್ಷಣ ಸೇತುವೆ ಬಳಿ ಎಸೆಯಲಾದ ತ್ಯಾಜ್ಯ ವಸ್ತುಗಳನ್ನು ತೆಗೆದು ಸ್ವಚ್ಛಗೊಳಿಸಬೇಕು. ಬೀದಿ ದೀಪ ಅಳವಡಿಸಬೇಕು. ಇದರ ಬಗ್ಗೆ ಕ್ರಮ ತೆಗೆದುಕೊಳ್ಳದಿದ್ದರೆ ಕೋರ್ಟ್‌ಗೆ ಮೋರೆ ಹೋಗಬೇಕಾಗುತ್ತದೆ ಎಂದು ಅವರು  ಎಚ್ಚರಿಕೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.