ಆಹಾ...ಆಸ್ಟ್ರೇಲಿಯಾ

7

ಆಹಾ...ಆಸ್ಟ್ರೇಲಿಯಾ

Published:
Updated:

ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ಪ್ರವಾಸಿ ತಾಣಗಳನ್ನು ನೋಡಬೇಕೆಂಬುದು ಬಹುದಿನದ ಕನಸು. ನ್ಯೂಜಿಲೆಂಡ್‌ನ ತೇ ಉರೆವೇರಾ ನ್ಯಾಷನಲ್ ಪಾರ್ಕ್‌ನ ಪೂರ್ವ ಭೂಶಿರವನ್ನು ಸ್ಪರ್ಶಿಸುವ ಸೂರ್ಯ ರಶ್ಮಿಯನ್ನು ಕಣ್ತುಂಬಿಸಿಕೊಳ್ಳಬೇಕೆಂಬ ಹಂಬಲ. ಹೀಗಾಗಿ ಆ ರಾಷ್ಟ್ರಗಳತ್ತ ಪ್ರವಾಸ ಹೊರಡಲು ತೀರ್ಮಾನಿಸಿದೆವು. ಕಳೆದ ವರ್ಷ ಡಿಸೆಂಬರ್ 3 ರ ರಾತ್ರಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಲೇಷ್ಯಾ ಏರ್‌ಲೈನ್ಸ್‌ನಲ್ಲಿ ಆಸ್ಟ್ರೇಲಿಯಾ ಕಡೆಗೆ ನಮ್ಮ ಪಯಣ ಆರಂಭವಾಯಿತು. ಮಾರನೆಯದ ದಿನ ಕ್ವಾಲಾಲಂಪುರ ತಲುಪಿ, ಅಲ್ಲಿಂದ ಸಿಡ್ನಿ ತಲುಪಿದಾಗ ರಾತ್ರಿ 8.30.

ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಹಾರ್ಬರ್ ಬ್ರಿಡ್ಜ್, ಪ್ರಸಿದ್ದ ಒಪೇರಾ ಹೌಸ್, ಸಿಡ್ನಿ ಟವರ್, ಡಾರ್ಲಿಂಗ್ ಹಾರ್ಬರ್ ಸುತ್ತಾಡಿಕೊಂಡು, ಒಂದು ದಿನ ಪೂರ್ತಿ ಬ್ಲೂ ಮೌಂಟೆನ್ ಪ್ರವಾಸ ಮಾಡಿದೆವು. ಅದು ಹೆಸರಿಗಷ್ಟೇ ‘ಬ್ಲೂ ಮೌಂಟೆನ್‌’. ಆದರೆ, ಅದು ನೀಲಿ ಬಣ್ಣದ್ದಾಗಿರಲಿಲ್ಲ. ಮಂಜುಗಡ್ಡೆಯೂ ಇರಲಿಲ್ಲ. ದಟ್ಟ ಕಾನನ. ಅದು ಸ್ವಾಭಾವಿಕವೋ ಅಥವಾ ಮಾನವ ನಿರ್ಮಿತವೋ ಎಂಬ ಸಂಶಯ ಮೂಡುವ ರೀತಿಯಲ್ಲಿತ್ತು.  ಬೆಟ್ಟದ ಒಂದು ಭಾಗದಲ್ಲಿ ಮನುಷ್ಯರನ್ನೇ ಹೋಲುವ ಮೂರು ಪ್ರತ್ಯೇಕ ಆಕೃತಿಗಳಿದ್ದವು. ಇದನ್ನೇ ತ್ರಿ ಸಿಸ್ಟರ್ಸ್‌ ರಾಕ್‌ ಫಾರ್ಮೇಷನ್ ಎಂದು ಪ್ರವಾಸಿಗರಿಗೆ ವಿವರಿಸುತ್ತಿದ್ದರು ಗೈಡ್‌ಗಳು. ನಾವು ಕೇಬಲ್‌ ಕಾರ್‌ ಮೂಲಕ ಬ್ಲೂ ಮೌಂಟೆನ್‌ನ ತುದಿ ತಲುಪಿದಾಗ, ಪರ್ವತದ ರಮ್ಯ ನೋಟದ ಅನಾವರಣಗೊಂಡಿತು.

ಮಾರನೆಯ ದಿನ ನಸುಕಿನಲ್ಲೇ ಸಿಡ್ನಿ ಬಿಟ್ಟು ಜೆಟ್ ಸ್ಟಾರ್ ಏರ್‌ಲೈನ್ಸ್ ವಿಮಾನದಲ್ಲಿ ಕೈನ್ಸ್‌ ತಲುಪಿದೆವು. ವಿಮಾನ ನಿಲ್ದಾಣದಿಂದ ಬಸ್‌ ಮೂಲಕ ಹೊರಟಿದ್ದು ಕುರಂಡ್‌ ನದಿಯತ್ತ. ಈ ನದಿಯ ಹೆಸರನ್ನೇ ಪಕ್ಕದಲ್ಲಿರುವ ಅರಣ್ಯಕ್ಕೂ ಇಟ್ಟಿದ್ದಾರೆ. ನಡಿಗೆಯೊಂದಿಗೆ ಅರಣ್ಯದಲ್ಲಿ ನಡೆಯುತ್ತಾ ಸಾಗಿದ ನಂತರ ಸೇನಾ ವಾಹನ ಲಭ್ಯವಾಯಿತು. ಅದರಲ್ಲಿ ಕುಳಿತು ದಟ್ಟ ಅರಣ್ಯ ಪ್ರವೇಶಿಸಿದವು. ಕಾಡಿನೊಳಗೆ ನದಿ, ಜಲಪಾತಗಳ ಸೌಂದರ್ಯ ಮನಸ್ಸನ್ನು ತಣಿಸಿತು. ನಂತರ ಮೈ ನವಿರೇಳಿಸಿದ್ದು ಪಾತಾಳ ಪ್ರಯಾಣ. ಪರ್ವತದ ತುದಿಯಿಂದ ಟಾಪ್ ಲೆಸ್ ರೈಲುಗಾಡಿಯಲ್ಲಿ ಕುಳಿತೆವು. ಸುಮಾರು 90 ಡಿಗ್ರಿ ಕೋನದಲ್ಲಿ ನಮ್ಮನ್ನೆಲ್ಲ ನೇರವಾಗಿ ಪಾತಾಳಕ್ಕೆ ಕರೆದೊಯ್ಯಿತು ಆ ರೈಲು. ಅಲ್ಲಿ ಹಿಂದೆ ನಡೆಯುತ್ತಿದ್ದ ಕಲ್ಲಿದ್ದಲು ಗಣಿಗಾರಿಕೆಯ ಅವಶೇಷಗಳು ಕಂಡವು. ಮತ್ತೆ ಅದೇ ರೈಲು ಅದೇ ರೀತಿಯಲ್ಲಿ ಮೇಲಕ್ಕೆ ಬಂದೆವು. ಅಲ್ಲಿಂದ ಕೇಬಲ್ ಕಾರ್ ಮೂಲಕ ಪ್ರಮುಖ ರಸ್ತೆ ತಲುಪಿದೆವು.

ಮುಂದಿನ ದಿನ ಕ್ರೂಸ್‌ಗಳಲ್ಲಿ ಸಮುದ್ರದ ಮೇಲೆ ಗ್ರೀನ್ ಐಲೆಂಡ್‌ಗೆ ಪ್ರಯಾಣ. ಬೆಳಗ್ಗಿನಿಂದಲೇ ಮಳೆ, ಕ್ರೂಸ್ ಏರಿದ ನಂತರ ಉಗ್ರ ರೂಪ ತಾಳಿದ ಸಮುದ್ರ. ಆದರೂ ಕ್ರೂಸ್ ಹೊರಟಿತು. 75 ನಿಮಿಷಗಳ ಆ ಹಾದಿಯಲ್ಲಿ ಗ್ರೀನ್ ಐಲ್ಯಾಂಡ್ ತಲುಪಲು ಸಾಧ್ಯವಾಗಲಿಲ್ಲ. ದ್ವೀಪದ ಅರ್ಧ ಪ್ರದಕ್ಷಿಣೆ ಹಾಕಿದ ನಮ್ಮ ಕ್ರೂಸ್‌ ವಾಪಸ್ ಬಂದಿತು.

ಮಾರನೆಯ ದಿನ ಕೈನ್ಸ್ ಬಿಟ್ಟು ನಾವು ಅದೇ ಜೆಟ್ ಸ್ಟಾರ್ ವಿಮಾನದಲ್ಲಿ ಮೆಲ್ಬರ್ನ್‌ ಮೂಲಕ ಫಿಲಿಪ್ಸ್ ಐಲ್ಯಾಂಡ್ ತಲುಪಿದೆವು. ಇದು ಪೆಂಗ್ವಿನ್ ಪೆರೇಡ್‌ಗೆ ಹೆಸರಾದ ಸಮುದ್ರ ತೀರ. ಪ್ರವೇಶ ಶುಲ್ಕ ನೀಡಿ, ಟಿಕೆಟ್ ಖರೀದಿಸಿ, ಸಮುದ್ರ ದಡದಲ್ಲಿನ ಕಲ್ಲು ಹಾಸಿನ ಮೇಲೆ ಕುಳಿತೆವು. ರಾತ್ರಿ 8.30 ರ ಹೊತ್ತಿಗೆ ಸಮುದ್ರದ ಅಂಚಿನಲ್ಲಿ ಅರ್ಧ ಅಡಿಗಿಂತ ತುಸು ಕಡಿಮೆ ಎತ್ತರವಿರುವ ಪೆಂಗ್ವಿನ್‌ಗಳು ನಮ್ಮ ಬಳಿ ಬಂದು ನಿಂತವು. ನಂತರ ನಮ್ಮ ಬಲ ಭಾಗದಿಂದ ನೀರಿನೆಡೆಗೆ ಹೊರಟವು. ಪೆಂಗ್ವಿನ್‌ ಪ್ರದರ್ಶನ ಮುಗಿದಾಗ ರಾತ್ರಿ 9.45. ಆಗಷ್ಟೇ ಸೂರ್ಯ ಮುಳುಗಿ, ಆಗಸ ಕೆಂಬಣ್ಣವಾಗಿಯೇ ಇತ್ತು.

ಕೊನೆಯ ದಿನದ ಪ್ರವಾಸ ದಿ ಗ್ರೇಟ್ ಓಷನ್ ರೋಡ್ ಕಡೆಗೆ. ಮೆಲ್ಬರ್ನ್ ಸಮೀಪದಲ್ಲಿ ಸುಮಾರು 496 ಕಿಮೀ ಸಮುದ್ರ ತೀರದುದ್ದಕ್ಕೂ ಸುಂದರ ರಸ್ತೆ ನಿರ್ಮಿಸಿದ್ದಾರೆ. ಕಡಲ ತೀರದ ಪಯಣದ ಸೊಗಸೇ ಸೊಗಸು. ಪ್ರತಿ 2 ತಾಸು ಪ್ರಯಾಣದ ನಂತರ ತಂಗುದಾಣಗಳು, ಶೌಚಾಲಯ, ಹೋಟೆಲ್ ವ್ಯವಸ್ಥೆ ಇದೆ. ಸುಂದರ ಸ್ವಚ್ಚವಾದ ಸಮುದ್ರ ತೀರಗಳು. ಇಷ್ಟೆಲ್ಲ ನೋಡಿದ ನಂತರ, ವಿಶ್ವದ ಅತ್ಯಂತ ಪ್ರಸಿದ್ಧವಾದ ಮೆಲ್ಬರ್ನ್ ಕ್ರಿಕೆಟ್ ಸ್ಟೇಡಿಯಂಗೆ ಭೇಟಿ ನೀಡಿದೆವು. ಅಲ್ಲಿ ಸ್ಥಾಪಿಸಲಾಗಿದ್ದ ಆಸ್ಟ್ರೇಲಿಯಾ ತಂಡದ ಖ್ಯಾತ ಸ್ಪಿನ್ ಬೌಲರ್‌ ಶೇನ್ ವಾರ್ನ್ ಮೇಣದ ಪ್ರತಿಮೆಯ ಜೊತೆ ಪೋಟೊ ಸೆಷನ್. ಅದು ಆಸ್ಟ್ರೇಲಿಯಾ ಪ್ರವಾಸದ ಕೊನೆಯ ತಾಣದ ಭೇಟಿ. ಮುಂದೆ ನ್ಯೂಜಿಲೆಂಡ್‌ನತ್ತ ನಮ್ಮ ಪಯಣ ಸಾಗಿತು.

ಇಂಡಿಯನ್‌ ಹೋಟೆಲ್‌ಗಳು..
ಆಸ್ಟ್ರೇಲಿಯಾ ಪ್ರವಾಸದಲ್ಲಿ ನಾವು ಭೇಟಿ ನೀಡಿದ ಸ್ಥಳಗಳಲ್ಲಿ ಸಾಕಷ್ಟು ಭಾರತೀಯ ಹೋಟೆಲ್‌ಗಳು ಇದ್ದವು. ಬಹುತೇಕ ಹೋಟೆಲ್‌ಗಳನ್ನು ಪಂಜಾಬಿಗಳು ನಡೆಸುತ್ತಾರೆ. ಜೈಪುರ ಪ್ಯಾಲೇಸ್, ಲಿಟ್ಲ್ ಇಂಡಿಯಾ, ಲವ್ ಲೀ ಇಂಡಿಯಾ ರೆಸ್ಟೋರೆಂಟ್, ಬಾಲಿವುಡ್, ತಂದೂರಿ ಪ್ಯಾಲೇಸ್... ಹೀಗೆ ಹಲವು ಹೆಸರಿನ ಹೋಟೆಲ್‌ಗಳಿದ್ದವು. ಇಲ್ಲಿ ನಾನ್, ರೋಟಿಗಳನ್ನು ತಂದೂರ್‌ನಲ್ಲಿ ಬೇಯಿಸಿ ಆಲೂಗಡ್ಡೆ, ಪನ್ನೀರ್, ಕಾಲಿಫ್ಲವರ್ ಗ್ರೇವಿಯೊಡನೆ ಕೊಡುತ್ತಾರೆ. ಜೊತೆಗೆ ಬಾಸ್ಮತಿ ಅಕ್ಕಿಯಲ್ಲಿ ಮಾಡಿದ ಅನ್ನ, ಆಲೂಗಡ್ಡೆ ಸಾಂಬಾರ್, ಹಪ್ಪಳ, ಕೆಲವು ಕಡೆ ಈರುಳ್ಳಿ ಅಥವಾ ಕಾಲಿಪ್ಲವರ್ ಪಕೋಡಾ ಮಾಡಿ ಬಡಿಸುತ್ತಾರೆ. ಹಾಗಾಗಿ ನಮಗೆ ಊಟದ ವಿಚಾರದಲ್ಲಿ ತುಂಬಾ ವ್ಯತ್ಯಾಸವಾಗಲಿಲ್ಲ.

ಪ್ರತಿ ಭಾರತೀಯ ಹೋಟೆಲ್‌ಗಳಲ್ಲಿ ಕಂಚಿನ ನಟರಾಜ ಪ್ರತಿಮೆ, ಲಕ್ಷ್ಮೀ, ಪಾರ್ವತಿ ವಿಗ್ರಹಗಳನ್ನಿಟ್ಟು, ದೀಪ ಬೆಳಗಿರುತ್ತಾರೆ. ಗೋಡೆಗಳ ಮೇಲೆ ಹರ್ಷವರ್ಧನ, ಇಮ್ಮಡಿ ಪುಲಿಕೇಶಿ, ಭಾರತೀಯ ಐತಿಹಾಸಿಕ ಚಿತ್ರಗಳನ್ನು ತೂಗು ಹಾಕಿರುತ್ತಾರೆ. ಈ ಹೋಟೆಲ್‌ಗಳು ನಮ್ಮ ದೇಶದ ನೆನಪನ್ನು ಕಟ್ಟಿಕೊಡುತ್ತವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !