ಬುಧವಾರ, ನವೆಂಬರ್ 20, 2019
22 °C

₹ 1.5 ಲಕ್ಷ ಲಂಚ: ಪಾಲಿಕೆ ಅಧಿಕಾರಿ ಸೇರಿ ಮೂವರ ಸೆರೆ

Published:
Updated:

ಬೆಂಗಳೂರು: ಅಕ್ರಮವಾಗಿ ನಿರ್ಮಿಸಿರುವ ನಾಲ್ಕು ಅಂತಸ್ತಿನ ಮನೆಯನ್ನು ನೆಲಸಮ ಮಾಡುವುದಾಗಿ ಭಯ ಹುಟ್ಟಿಸಿ ₹ 3 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು, ಮಾತುಕತೆ ಬಳಿಕ ₹ 1.5 ಲಕ್ಷ ಲಂಚ ಪಡೆಯುತ್ತಿದ್ದ ಪಾಲಿಕೆ ಅಧಿಕಾರಿ ಹಾಗೂ ಇಬ್ಬರು ಆಪ್ತರನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ.

ಬಿಬಿಎಂಪಿ ಕಿರಿಯ ಎಂಜಿನಿಯರ್‌ ಲೋಕೇಶ್‌ ಎಂದು ಹೇಳಿಕೊಂಡ ವ್ಯಕ್ತಿ ₹3 ಲಕ್ಷ ಲಂಚ ಕೊಡದಿದ್ದರೆ ಸಿಂಗಸಂದ್ರದಲ್ಲಿ ಅನುಮತಿ ಪಡೆಯದೆ ಕಟ್ಟಿರುವ ಮನೆಯನ್ನು ಬೀಳಿಸುವುದಾಗಿ ಹೆದರಿಸಿದರು. ಆನಂತರ ದೂರುದಾರರು ಮಧ್ಯವರ್ತಿ ಪುಟ್ಟಣ್ಣ ಮತ್ತು ವಾಟರ್‌ ಮ್ಯಾನ್‌ ಗೋವಿಂದರಾಜು ಎಂಬುವವರ ಮೂಲಕ ಮನವೊಲಿಸಿದ ಬಳಿಕ ₹ 1.5 ಲಕ್ಷಕ್ಕೆ ಒಪ್ಪಲಾಯಿತು. ಇತ್ತೀಚೆಗೆ ಲೋಕೇಶ್‌ ಮತ್ತು ಕೃಷ್ಣಕುಮಾರ್‌ ಎಂಬುವರು ಪಿರ್ಯಾದಿಯಿಂದ ₹50 ಸಾವಿರ ನಗದು, ₹ 1 ಲಕ್ಷದ ಚೆಕ್‌ ಪಡೆಯುತ್ತಿದ್ದಾಗ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಖಾಸಗಿ ವ್ಯಕ್ತಿ ಲೋಕೇಶ್‌ ತಾನು ಬಿಬಿಎಂಪಿ ಎಂಜಿನಿಯರ್‌ ಎಂದು ನಂಬಿಸುತ್ತಿದ್ದರು ಎಂದು ಎಸಿಬಿ ಮೂಲಗಳು ತಿಳಿಸಿವೆ.

ಪ್ರಕರಣದಲ್ಲಿ ಲೋಕೇಶ್‌, ಗೋವಿಂದರಾಜು ಮತ್ತು ಕೃಷ್ಣ ಕುಮಾರ್‌ ಅವರನ್ನು ಬಂಧಿಸಿ ಲಂಚದ ಹಣ ವಶಪಡಿಸಿಕೊಳ್ಳಲಾಗಿದೆ. ತನಿಖೆ ನಡೆಯುತ್ತಿದೆ.

ಪ್ರತಿಕ್ರಿಯಿಸಿ (+)