ಅಪಘಾತ; ವಿದ್ಯಾರ್ಥಿಗಳಿಬ್ಬರ ಸಾವು

7

ಅಪಘಾತ; ವಿದ್ಯಾರ್ಥಿಗಳಿಬ್ಬರ ಸಾವು

Published:
Updated:

ಬೆಂಗಳೂರು: ನಗರದ ಎರಡು ಕಡೆಗಳಲ್ಲಿ ಸೋಮವಾರ ಮಧ್ಯರಾತ್ರಿ ಸಂಭವಿಸಿದ ಅಪಘಾತಗಳಲ್ಲಿ ವಿದ್ಯಾರ್ಥಿಗಳಿಬ್ಬರು ಮೃತಪಟ್ಟಿದ್ದಾರೆ.

ಉಳ್ಳಾಲ ಉಪನಗರದ ರಂಜನ್ (20) ಹಾಗೂ ಬಿಳೇಕಹಳ್ಳಿಯ ಸೋಮಸಂದೀಪ್ (23) ಮೃತರು. ಅವರಿಬ್ಬರು ಹೊಸ ವರ್ಷಾಚರಣೆ ಮುಗಿಸಿಕೊಂಡು ಮನೆಗೆ ಹೊರಟಿದ್ದ ವೇಳೆಯಲ್ಲೇ ಈ ಅವಘಡ ಸಂಭವಿಸಿದೆ.

‘ಪದವಿ ಕಾಲೇಜು ವಿದ್ಯಾರ್ಥಿಯಾಗಿದ್ದ ರಂಜನ್, ಸ್ನೇಹಿತ ಮೋಹನ್ ಜೊತೆಯಲ್ಲಿ ಸ್ಕೂಟರ್‌ನಲ್ಲಿ ಮನೆಗೆ ಹೊರಟಿದ್ದರು. ಉಳ್ಳಾಲ ಸಮೀಪದ ಮಂಗನಹಳ್ಳಿ ವೃತ್ತದಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡಿದ್ದ ಸ್ಕೂಟರ್‌, ರಸ್ತೆ ವಿಭಜಕಕ್ಕೆ ಗುದ್ದಿತ್ತು. ನಂತರ, ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದಿತ್ತು’ ಎಂದು ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ಹೇಳಿದರು.

‘ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಸವಾರ ರಂಜನ್, ಸ್ಥಳದಲ್ಲೇ ಮೃತಪಟ್ಟರು. ಹಿಂಬದಿ ಸವಾರ ಮೋಹನ್‌ ಅವರಿಗೂ ತೀವ್ರ ಪೆಟ್ಟು ಬಿದ್ದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯವೂ ಚಿಂತಾಜನಕವಾಗಿದೆ’ ಎಂದರು.

ಬೈಕ್‌–ಕಾರು ನಡುವೆ ಅಪಘಾತ: ಮೈಕೊ ಲೇಔಟ್ ಬಳಿಯ ವಿಜಯಾ ಬ್ಯಾಂಕ್ ಬಡಾವಣೆಯ ಎಚ್‌ಡಿಎಫ್‌ಸಿ ಬ್ಯಾಂಕ್‌ ಸಮೀಪ ಬೈಕ್ ಹಾಗೂ ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ಸವಾರ ಸೋಮಸಂದೀಪ್‌ ಮೃತಪಟ್ಟಿದ್ದಾರೆ.

‘ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಸೋಮಸಂದೀಪ್, ಅಪಘಾತದ ಸ್ಥಳದಲ್ಲೇ ಬಿದ್ದು ನರಳಾಡುತ್ತಿದ್ದರು. ಅವರನ್ನು ಸ್ಥಳೀಯರು, ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಆ ಬಗ್ಗೆ ಪ್ರತ್ಯಕ್ಷದರ್ಶಿಗಳ ಹೇಳಿಕೆ ಪಡೆಯಲಾಗಿದೆ’ ಎಂದು ಮೈಕೊ ಲೇಔಟ್ ಸಂಚಾರ ಪೊಲೀಸರು ಹೇಳಿದರು.

‘ಕಾರು ಹಾಗೂ ಬೈಕ್‌ ನಡುವೆ ಅಪಘಾತ ಸಂಭವಿಸಿದೆ ಎಂಬುದಷ್ಟೇ ಗೊತ್ತಾಗಿದೆ. ಅಪಘಾತ ಹೇಗಾಯಿತು. ತಪ್ಪು ಯಾರದ್ದು ಎಂಬುದು ತಿಳಿದುಬಂದಿಲ್ಲ’ ಎಂದರು.

ವ್ಹೀಲಿಂಗ್‌; 10 ಮಂದಿ ವಶಕ್ಕೆ

ಟಿನ್‌ ಫ್ಯಾಕ್ಟರಿ ಬಳಿಯ ಮೇದಹಳ್ಳಿ ಮೇಲ್ಸೇತುವೆಯಲ್ಲಿ ಸೋಮವಾರ ಮಧ್ಯರಾತ್ರಿ ವ್ಹೀಲಿಂಗ್ ಮಾಡುತ್ತಿದ್ದ 10 ಮಂದಿಯನ್ನು ವಶಕ್ಕೆ ಪಡೆದಿರುವ ಕೆ.ಆರ್.ಪುರ ಸಂಚಾರ ಪೊಲೀಸರು, ಬೈಕ್ ಮಾಲೀಕರನ್ನೂ ಆರೋಪಿಗಳನ್ನಾಗಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ಹೊಸ ವರ್ಷಾಚರಣೆ ಪ್ರಯುಕ್ತ ನಗರದ ಎಲ್ಲ ಮೇಲ್ಸೇತುವೆಗಳಲ್ಲಿ ಸೋಮವಾರ ರಾತ್ರಿಯಿಂದ ಮಂಗಳವಾರ ನಸುಕಿನವರೆಗೆ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು. ಅಷ್ಟಾದರೂ 10 ಮಂದಿ ಮೇಲ್ಸೇತುವೆಯಲ್ಲಿ ವ್ಹೀಲಿಂಗ್‌ ಮಾಡುತ್ತಿದ್ದರು. ಅವರನ್ನು ವಶಕ್ಕೆ ಪಡೆದು ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ (ಸಂಚಾರ) ಪಿ.ಹರಿಶೇಖರನ್ ಹೇಳಿದರು. 

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !